ADVERTISEMENT

‘ಪ್ರವಾಸೋದ್ಯಮಕ್ಕೆ ಜಾಗದ ತಗಾದೆ ಬೇಡ’

ಅಭಿವೃದ್ಧಿ ಕಾಮಗಾರಿ ಮುಗಿಸಲು ಜಿಲ್ಲಾಧಿಕಾರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2014, 9:39 IST
Last Updated 5 ಫೆಬ್ರುವರಿ 2014, 9:39 IST
ಮಂಗಳೂರಿನಲ್ಲಿ ಮಂಗಳವಾರ ನಡೆದ ಜಿಲ್ಲಾ ಪ್ರವಾಸೋದ್ಯಮ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಇಬ್ರಾಹಿಂ, ಶಾಸಕ ಜೆ.ಆರ್‌.ಲೋಬೊ ಮತ್ತಿತರರು ಭಾಗವಹಿಸಿದ್ದರು.
ಮಂಗಳೂರಿನಲ್ಲಿ ಮಂಗಳವಾರ ನಡೆದ ಜಿಲ್ಲಾ ಪ್ರವಾಸೋದ್ಯಮ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಇಬ್ರಾಹಿಂ, ಶಾಸಕ ಜೆ.ಆರ್‌.ಲೋಬೊ ಮತ್ತಿತರರು ಭಾಗವಹಿಸಿದ್ದರು.   

ಮಂಗಳೂರು: ಕದ್ರಿ ಮಂಜುನಾಥೇಶ್ವರ ದೇವಸ್ಥಾನ, ಕುಕ್ಕೆ ಸುಬ್ರಹ್ಮಣ್ಯ ಮತ್ತು ಕಟೀಲು ದೇವಸ್ಥಾನಗಳಲ್ಲಿ ಪ್ರವಾಸೋದ್ಯಮ ದೃಷ್ಟಿಯಿಂದ ನಡೆಯಬೇಕಾದ ಅಭಿವೃದ್ಧಿ ಕಾಮಗಾರಿಗಳಿಗೆ ಜಾಗ ವರ್ಗಾವಣೆ ಆಗಿಲ್ಲ ಎಂಬ ನೆಪ ಹೇಳದೇ ಅಲ್ಲಿನ ಆಡಳಿತ ವ್ಯವಸ್ಥೆಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರ ಮುಗಿಸುವಂತೆ ಜಿಲ್ಲಾಧಿಕಾರಿ ಎ. ಬಿ. ಇಬ್ರಾಹಿಂ ಅವರು ಸೂಚಿಸಿದರು.

ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಪ್ರವಾಸೋದ್ಯಮದ ನೂತನ ಸಮಿತಿಯ ಮೊದಲ ಸಭೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಕಾಮಗಾರಿಗಳ ಸ್ಥಿತಿಗತಿ ಪರಿಶೀಲಿಸಿ ಮಾತನಾಡಿದರು. 

ಜಿಲ್ಲೆಯಲ್ಲಿ 36 ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, 10 ಯೋಜನೆಗಳು ಮುಕ್ತಾಯವಾಗಿವೆ. ನಿರ್ಮಿತಿ ಕೇಂದ್ರಕ್ಕೆ ವಹಿಸಲಾದ ಬೀಚ್‌ಗಳ ಅಭಿವೃದ್ಧಿ ಕಾಮಗಾರಿಯನ್ನು ₨ 76.8 ಲಕ್ಷ ವೆಚ್ಚದಲ್ಲಿ ನಿರ್ವಹಿಸಲಾಗಿದೆ. 14 ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ವಿವರಿಸಿದರು.

ಕದ್ರಿ ದೇವಸ್ಥಾನದ ಆವರಣದಲ್ಲಿಯೂ ಸುಮಾರು ₨ 1.19 ಕೋಟಿ ಮೌಲ್ಯದ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗೆ ಮಂಜೂರಾತಿ ದೊರೆತಿದ್ದು ₨ 1.10 ಲಕ್ಷ ಬಿಡುಗಡೆಯಾಗಿದೆ, ನಂತರ ಕಾಮಗಾರಿ ಮುಂದುವರೆದಿಲ್ಲ. ಕುಕ್ಕೆ ಸುಬ್ರಹ್ಮಣ್ಯದಲ್ಲಿಯೂ ಜಾಗ ಹಸ್ತಾಂತರಕ್ಕೆ ಸಂಬಂಧಿಸಿ ವಿವಾದ ಇದ್ದುದರಿಂದ ಕಾಮಗಾರಿ ಆರಂಭವಾಗಿಲ್ಲ.

ಆದರೆ ₨ 1.19 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ಅವರು ಹೇಳಿ­ದರು. ತಣ್ಣೀರು ಬಾವಿ ತೂಗು ಸೇತುವೆಗೆ 2009–10ರಲ್ಲಿ ಶಂಕುಸ್ಥಾಪನೆ ಮಾಡಿದ್ದರೂ 2013ರ ಜನವರಿ­ಯಿಂದಷ್ಟೇ ಕಾಮಗಾರಿ ಆರಂಭವಾಗಿದೆ. ಕಾಮಗಾರಿಗೆ 12 ತಿಂಗಳ ಅವಧಿ ನೀಡಿದ್ದರೂ ಇನ್ನೂ ಮುಕ್ತಾಯವಾಗದೆ ಇರುವ ಬಗ್ಗೆ ಸಭೆಯಲ್ಲಿ ಉಪಸ್ಥಿತ­ರಿದ್ದ ಶಾಸಕ ಜೆ. ಆರ್‌. ಲೋಬೊ ಅಧಿಕಾರಿಗಳನ್ನು ಪ್ರಶ್ನಿಸಿದರು.

ಅಲ್ಲದೆ ಈ ಯೋಜನೆಯನ್ನು ಲೋಕೋಪ­ಯೋಗಿ ಇಲಾಖೆಗೆ ಹಸ್ತಾಂತರಿಸಬೇಕೇ ಅಥವಾ ಪ್ರವಾಸೋದ್ಯಮ ಇಲಾಖೆಯಿಂದಲೇ ಮುಂದುವರೆಸ­ಬೇಕೇ ಎಂಬ ಚರ್ಚೆ ನಡೆಯುತ್ತಿದ್ದು ಸದ್ಯದಲ್ಲೇ ಸಚಿವರ ಜತೆ ಮಾತನಾಡಿ ಯೋಜನೆಗೆ ಮತ್ತೆ ಪುನಶ್ಚೇತನ ನೀಡುವುದಾಗಿ ಶಾಸಕರು ವಿವರಿಸಿದರು.

ಜಿಲ್ಲೆಯ ಪ್ರವಾಸಿ ತಾಣಗಳ ನಕಾಶೆ
ದಕ್ಷಿಣ ಕನ್ನಡದ ಪ್ರವಾಸಿ ತಾಣಗಳ ನಕಾಶೆ ಮತ್ತು ವಿವರ ನೀಡುವ ಕೈಪಿಡಿ ರಚಿಸುವಂತೆ ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಸೂಚಿಸಿದರು. ಇದಕ್ಕೆ ಪೂರಕವಾಗಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಸಂಘಟನೆಗಳು, ಕೆಸಿಸಿಐ ಮತ್ತಿತರರ ಪ್ರತಿನಿಧಿಗಳ ಜತೆ ಸಭೆ ನಡೆಸಲು ನಿರ್ಧರಿಸಲಾಯಿತು.

ADVERTISEMENT

ತಣ್ಣೀರುಬಾವಿ ಗಾಲ್ಫ್‌ ಕೋರ್ಸ್‌ ಅಭಿವೃದ್ಧಿಗೆ ಬೆಂಗ್ರೆ ಬೋಳೂರಿನಲ್ಲಿ 155 ಎಕರೆ ಜಮೀನನ್ನು ಆರ್‌ಟಿಸಿಯಲ್ಲಿ ದಾಖಲಿಸುವ ಬಗ್ಗೆ, ಖಾಸಗಿ ಸಹಭಾಗಿತ್ವದಲ್ಲಿ ಅಕ್ವಾಮೆರೀನ್ ಪಾರ್ಕ್‌ ಸ್ಥಾಪನೆ ಹಾಗೂ  ಹೊಸ ಯೋಜನೆಗಳ ಕುರಿತು ವಿವರವಾದ ಪ್ರಸ್ತಾವನೆಯೊಂದಿಗೆ ಪ್ರತ್ಯೇಕ ಸಭೆ ನಡೆಸಲು ನಿರ್ಧರಿಸಲಾಯಿತು. ಮೂಡುಶೆಡ್ಡೆಯಲ್ಲಿ ನಿರ್ಮಿಸಲು ಉದ್ದೇಶಿಸಲಾದ ಟಿ.ಬಿ. ಸಾನಿಟೋರಿಯಂಗೆ ಜಾಗದ ಸಮಸ್ಯೆ ಇರುವುದರಿಂದ ಕೈಬಿಡುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕೆ. ದಯಾನಂದ, ಮಹಾನಗರ ಪಾಲಿಕೆ ಆಯುಕ್ತ ಶಾನಾಡಿ ಅಜಿತ್‌ ಕುಮಾರ್‌ ಹೆಗ್ಡೆ, ಪಣಂಬೂರು ಬೀಚ್‌ ಸಿಇಒ ಯತೀಶ್‌ ಬೈಕಂಪಾಡಿ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲೆಗೆ ಸಮಗ್ರ ಯೋಜನೆ ಬೇಕು
ಕರಾವಳಿಯ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚು ಒತ್ತುಕೊಡುವ ಸಮಗ್ರ ಯೋಜನೆಯೊಂದು ಇದ್ದಾಗ ನೂರಾರು ಕೋಟಿ ರೂಪಾಯಿಗಳ ಅಕ್ವಾಮರೀನ್‌ ಪಾರ್ಕ್‌ನಂತಹ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವುದು ಸಾಧ್ಯವಾಗುತ್ತದೆ ಎಂದು ಶಾಸಕ ಜೆ. ಆರ್‌. ಲೋಬೊ ಹೇಳಿದರು. ಸಮಗ್ರ ಯೋಜನೆ ಜಾರಿಗೆ ಪ್ರತ್ಯೇಕ ಅಧಿಕಾರಿಗಳನ್ನು ನಿಯೋಜಿಸಿ ಮಂಗಳೂರಿಗೆ ಆದಾಯ ತರುವಂತಹ ಪ್ರವಾಸೋದ್ಯಮ ಯೋಜನೆಗಳನ್ನು ಕಾರ್ಯಗತಗೊಳಿಸಬಹುದು ಎಂದು ಅವರು ವಿವರಿಸಿದರು.

‘ಮಂಗಳೂರಿಗೆ ಬರುವ ಪ್ರವಾಸಿಗರು ಆಸುಪಾಸಿನ ತಾಣಗಳಿಗೆ ಭೇಟಿ ನೀಡುತ್ತಾರೆಯೇ ಹೊರತು ನಗರದಲ್ಲಿ ಉಳಿಯುವುದಿಲ್ಲ. ಆದ್ದರಿಂದ ಮಂಗಳೂರಿನ ಆಕರ್ಷಣೆಯಾಗಿ ಅಕ್ವಾಮರೀನ್‌ ಪಾರ್ಕ್‌ ಸ್ಥಾಪನೆಯ ಬಗ್ಗೆ ಹೆಚ್ಚು ಒತ್ತುಕೊಡಬೇಕು’ ಎಂದು ಪಣಂಬೂರು ಸಿಇಒ ಯತೀಶ್‌ ಬೈಕಂಪಾಡಿ ಮಾಡಿದ ಮನವಿಗೆ ಸ್ಪಂದಿಸಿ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.