ಮೂಡುಬಿದಿರೆ: ರಾಮಾಯಣವು ಒಂದು ದುರಂತ ಪ್ರೇಮ ಕತೆ ಹಾಗೂ ಕೌಟುಂಬಿಕ ಕಲಹದ ಕತೆಯೂ ಆಗಿರುವುದರಿಂದಲೇ ಅದು ಜನಪ್ರಿಯವಾಗಲು ಕಾರಣವಾಯಿತು. ಈ ರಾಮಾಯಣದ ವಸ್ತುವನ್ನಿಟ್ಟುಕೊಂಡೇ ಸ್ತ್ರೀಯೊಬ್ಬಳು ಅಧ್ಯಯನ ಹಾಗೂ ಪ್ರಯೋಗಾತ್ಮಕವಾಗಿ ಅದನ್ನು ಹೇಗೆ ಭಿನ್ನವಾಗಿ ನಿರ್ವಹಿಸಬಹುದೆಂಬುದಕ್ಕೆ ಎಚ್.ವಿ.ಸಾವಿತ್ರಮ್ಮನವರ 'ಸೀತೆ ರಾಮ ರಾವಣ' ಕಾದಂಬರಿ ಮಾದರಿಯಾಗುತ್ತದೆ ಎಂದು ಹಿರಿಯ ಸಾಹಿತಿ ಬಿ.ಎಂ.ರೋಹಿಣಿ ಹೇಳಿದರು.
ಕಾಂತಾವರ ಕನ್ನಡ ಸಂಘದಲ್ಲಿ ಭಾನುವಾರ ಕನ್ನಡದ ಮರೆಯಬಾರದ ಕಾದಂಬರಿಗಳ ಮರು ಓದು ಕಾರ್ಯಕ್ರಮದಲ್ಲಿ ಎಚ್.ವಿ.ಸಾವಿತ್ರಮ್ಮನವರ 'ಸೀತೆ - ರಾಮ - ರಾವಣ' ಕಾದಂಬರಿ ಬಗ್ಗೆ ಅವರು ಮಾತನಾಡಿದರು.
ತನ್ನ ಮಧ್ಯವಯಸ್ಸಿನ ನಂತರ ಲೇಖನಿ ಹಿಡಿದ ಸಾವಿತ್ರಮ್ಮನವರು ಪ್ರಾರಂಭದಲ್ಲಿ ಅನುವಾದ ಸಾಹಿತ್ಯದಲ್ಲಿ ತೊಡಗಿಕೊಂಡು ಅನೇಕ ಆಂಗ್ಲ ಗ್ರಂಥಗಳನ್ನು ಕನ್ನಡಕ್ಕೆ ಅನುವಾದಿಸಿದರು. ನಂತರ ಸ್ವತಂತ್ರವಾಗಿ ಕನ್ನಡದಲ್ಲಿ ಕಥೆ ಕಾದಂಬರಿಗಳನ್ನು ಬರೆಯಲು ಪ್ರಾರಂಭಿಸಿದರು. ಹೀಗೆ 1980ರಲ್ಲಿ ಪ್ರಕಟಗೊಂಡ ಅವರ ವಿಶಿಷ್ಟ ಕಾದಂಬರಿಯೇ 'ಸೀತೆ - ರಾಮ - ರಾವಣ'. ರಾಮಾಯಣದ ವಸ್ತುವನ್ನು ತೆಗೆದುಕೊಂಡು ಅಲ್ಲಿನ ಪ್ರತಿಯೊಂದು ಪಾತ್ರಕ್ಕೂ ತನ್ನದೇ ಆದ ಒಂದು ವ್ಯಕ್ತಿತ್ವವನ್ನು ನೀಡುತ್ತಾ ಅದನ್ನು ರೂಪಿಸಿದ ರೀತಿ ಅದ್ಭುತವಾಗಿತ್ತು. ಹೆಣ್ಣನ್ನು ಆರಾಧಿಸುವುದಕ್ಕಿಂತ ಪ್ರೀತಿ ಮಾಡುವವರು ಬೇಕು ಅನ್ನುವ ಸಂದೇಶವನ್ನೂ ಸೂಕ್ಷ್ಮವಾಗಿ ಈ ಕಾದಂಬರಿಯಲ್ಲಿ ಕಾಣಬಹುದಾಗಿದೆ ಎಂದರು.
ದುಷ್ಟ ಪಾತ್ರಗಳನ್ನೂ ಇಲ್ಲಿ ಉದಾತ್ತೀಕರಣಗೊಳಿಸಿ ಪ್ರತಿಯೊಂದು ಸ್ತ್ರೀಪುರುಷ ಪಾತ್ರಗಳನ್ನೂ ಸಂಯಮದಿಂದ ಸಂಸ್ಕಾರಯುಕ್ತ ಮಾತುಗಳಿಂದ ಬೆಳೆಸಿದ್ದಾರೆ. ಇಡೀ ರಾಮಾಯಣದ ಕಥೆಯನ್ನು ಒಂದು ಮಹಿಳಾಪರ ಕಥೆಯಾಗಿ ಈ ಕಾದಂಬರಿಯನ್ನು ರಚಿಸಿರುವುದರಿಂದ ಮಹಿಳಾವಾದಿ ಅಧ್ಯಯನದ ದೃಷ್ಟಿಯಿಂದ ಈ ಕಾದಂಬರಿ ಮಹತ್ವದ್ದಾಗಿದೆ ಎಂದರು.
ಸಿ.ಕೆ.ಪಡಿವಾಳ್ ವೇದಿಕೆಯಲ್ಲಿದ್ದರು. ಡಾ. ನಾ ಮೊಗಸಾಲೆ ಸ್ವಾಗತಿಸಿದರು. ಬಾಬು ಶೆಟ್ಟಿ ನಾರಾವಿ ನಿರೂಪಿಸಿದರು. ಸದಾನಂದ ನಾರಾವಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.