ADVERTISEMENT

ಮೂರು ದಿನಲ್ಲಿ ₹ 3.92 ಲಕ್ಷ ದಂಡ ಸಂಗ್ರಹ

ನಗರದ ಸಂಚಾರ ವಿಭಾಗದ ಪೊಲೀಸರ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2019, 20:26 IST
Last Updated 10 ಸೆಪ್ಟೆಂಬರ್ 2019, 20:26 IST

ಮಂಗಳೂರು: ನಗರದ ಸಂಚಾರ ವಿಭಾಗದ ಪೊಲೀಸರು ಮೋಟಾರು ವಾಹನ ಕಾಯ್ದೆ–2019ರ ಅಡಿಯಲ್ಲಿ ಮೂರು ದಿನಗಳ ಅವಧಿಯಲ್ಲಿ 1,635 ಪ್ರಕರಣ ದಾಖಲಿಸಿದ್ದು, ₹ 3.92 ಲಕ್ಷ ದಂಡ ಸಂಗ್ರಹಿಸಿದ್ದಾರೆ.

‘ಸೆಪ್ಟೆಂಬರ್‌ 1ರಿಂದ ತಿದ್ದುಪಡಿಯಾಗಿರುವ ಮೋಟಾರು ವಾಹನ ಕಾಯ್ದೆ ಜಾರಿಗೆ ಬಂದಿದೆ. ನಗರದಲ್ಲಿ ಶನಿವಾರದಿಂದ ಹೊಸ ಕಾಯ್ದೆಯ ಅಡಿಯಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈಗ ದಂಡದ ಮೊತ್ತ ಹೆಚ್ಚಿಸಿದ್ದು, ಅದರಂತೆಯೇ ವಾಹನ ಸವಾರರಿಗೆ ದಂಡ ವಿಧಿಸಲಾಗುತ್ತಿದೆ’ ಎಂದು ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಡಾ.ಪಿ.ಎಸ್‌.ಹರ್ಷ ಮಾಹಿತಿ ನೀಡಿದರು.

ಮಂಗಳೂರು ಪೂರ್ವ ಸಂಚಾರ ಪೊಲೀಸ್‌ ಠಾಣೆಯಲ್ಲಿ ಮೂರು ದಿನಗಳಲ್ಲಿ 430 ಪ್ರಕರಣ ದಾಖಲಿಸಿದ್ದು, ₹ 1.24 ಲಕ್ಷ ಮೊತ್ತದ ದಂಡ ಸಂಗ್ರಹಿಸಲಾಗಿದೆ. ಮಂಗಳೂರು ಉತ್ತರ ಸಂಚಾರ ಪೊಲೀಸ್‌ ಠಾಣೆಯಲ್ಲಿ 476 ಪ್ರಕರಣ ದಾಖಲಿಸಿ, ₹ 1.09 ಲಕ್ಷ ದಂಡ ಸಂಗ್ರಹಿಸಲಾಗಿದೆ. ಮಂಗಳೂರು ಪಶ್ಚಿಮ ಸಂಚಾರ ಪೊಲೀಸ್‌ ಠಾಣೆಯಲ್ಲಿ 356 ಪ್ರಕರಣ ದಾಖಲಿಸಿ, ₹ 86,900 ದಂಡ ವಸೂಲಿ ಮಾಡಲಾಗಿದೆ. ಮಂಗಳೂರು ದಕ್ಷಿಣ ಸಂಚಾರ ಪೊಲೀಸ್‌ ಠಾಣೆಯಲ್ಲಿ 373 ಪ್ರಕರಣ ದಾಖಲು ಮಾಡಿದ್ದು, ₹ 71,900 ದಂಡ ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.

ADVERTISEMENT

ಮೊದಲ ಮೂರು ದಿನಗಳಲ್ಲಿ ಹೆಲ್ಮೆಟ್‌ ಧರಿಸದೇ ಇರುವುದು, ಸೀಟ್‌ ಬೆಲ್ಟ್‌ ಧರಿಸದೇ ಇರುವುದು ಹಾಗೂ ಸಿಗ್ನಲ್‌ ಉಲ್ಲಂಘನೆಯ ಆರೋಪದಡಿ ಹೆಚ್ಚಿನ ಪ್ರಕರಣಗಳನ್ನು ದಾಖಲಿಸಲಾಗಿದೆ.

ಹೊಸ ಕಾಯ್ದೆಯಡಿ ದಂಡದ ಮೊತ್ತದಲ್ಲಿ ಹೆಚ್ಚಳ ಆಗಿರುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಮುಂದಿನ ವಾರದಿಂದ ನಗರದಾದ್ಯಂತ ಕಾರ್ಯಾಚರಣೆ ನಡೆಸಲಾಗುವುದು ಎಂದು ಕಮಿಷನರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.