ADVERTISEMENT

ಧರ್ಮಸ್ಥಳಕ್ಕೆ ಮುನಿ ಸಂಘ ಪುರಪ್ರವೇಶ

​ಪ್ರಜಾವಾಣಿ ವಾರ್ತೆ
Published 5 ಜನವರಿ 2018, 5:37 IST
Last Updated 5 ಜನವರಿ 2018, 5:37 IST

ಉಜಿರೆ: ಧರ್ಮಸ್ಥಳಕ್ಕೆ ಗುರುವಾರ ಸಂಜೆ ಮುನಿಸಂಘ ಪುರ ಪ್ರವೇಶ ಮಾಡಿದಾಗ ಪ್ರವೇಶ ದ್ವಾರದ ಬಳಿ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ ಕೋರಲಾಯಿತು. ಮುನಿ ಸಂಘದಲ್ಲಿ ಪೂಜ್ಯ ಆಚಾರ್ಯ 108 ಪುಷ್ಪದಂತ ಸಾಗರ ಮುನಿ ಮಹಾರಾಜರು, 108 ಮುನಿಶ್ರೀ ಪ್ರಮುಖ್ ಸಾಗರ ಮುನಿ ಮಹಾರಾಜರು, 108 ಮುನಿಶ್ರೀ ಪ್ರಸಂಗ ಸಾಗರ ಮಹಾರಾಜರು, ಅಮಿತಸೇನ್ ಮತ್ತು ವೃಷಭಸೇನ್ ಇದ್ದರು.

ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ದೇವರ ದರ್ಶನ ಮಾಡಿದ ಬಳಿಕ ಆಚಾರ್ಯ 108 ಪುಷ್ಪದಂತ ಸಾಗರ ಮುನಿ ಮಹಾರಾಜರು ಮಂಗಳ ಪ್ರವಚನ ನೀಡಿ,'ಬಸದಿಯಲ್ಲಿ ವಿಶೇಷ ದೈವಿಕ ಶಕ್ತಿ ಜಾಗೃತವಾಗಿದ್ದು, ಇಲ್ಲಿ ದೇವರ ದರ್ಶನದಿಂದ ತಮಗೆ ಅತೀವ ಆನಂದವಾಗಿದೆ' ಎಂದರು.

‘ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ಧರ್ಮಸ್ಥಳದ ಸೇವಾ ಕಾರ್ಯಗಳು, ಶಿಸ್ತು, ಸ್ವಚ್ಛತೆ ಮತ್ತು ದಕ್ಷತೆ ವಿಶ್ವಮಾನ್ಯವಾಗಿದೆ. ಹೆಗ್ಗಡೆಯವರು ರಾಜ್ಯದಲ್ಲಿಯೇ ವಿಶಿಷ್ಟ ವ್ಯಕ್ತಿತ್ವ ಹೊಂದಿದ ಆದರ್ಶ ನೇತಾರರಾಗಿದ್ದಾರೆ’ ಎಂದು ಬಣ್ಣಿಸಿದರು.

ADVERTISEMENT

ಆರಂಭದಲ್ಲಿ ಮುನಿಸಂಘವನ್ನು ಸ್ವಾಗತಿಸಿದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿ, ‘ಮುನಿಗಳ ದರ್ಶನದಿಂದ ಎಲ್ಲರಿಗೂ ಪುಣ್ಯ ಸಂಚಯವಾಗಿದ್ದು, ಮುನಿ ಸಂಘದ ಸೇವೆಗೆ ತಾವೆಲ್ಲರೂ ಉತ್ಸುಕರಾಗಿದ್ದೇವೆ. ಇಂದು ಐತಿಹಾಸಿಕ ದಿನವಾಗಿದೆ ಎಂದು ಅಭಿಪ್ರಾಯಪಟ್ಟರು.

ಮುನಿ ಸಂಘದ ಪುರ ಪ್ರವೇಶವು ಭಕ್ತರಲ್ಲಿ ಹರ್ಷವನ್ನು ತಂದಿದೆ ಎಂದು ಅವರು ಹೇಳಿದರು. ಹೇಮಾವತಿ ವಿ. ಹೆಗ್ಗಡೆ, ಡಿ.ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಪ್ರೊ.ಎಸ್.ಪ್ರಭಾಕರ್ ಮತ್ತು ಡಾ.ಬಿ.ಯಶೋವರ್ಮ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಭಕ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.