ADVERTISEMENT

ನಗರೀಕರಣದಿಂದ ಸಾಮಾನ್ಯರ ಹಕ್ಕುಗಳ ಉಲ್ಲಂಘನೆ: ಡಾ. ಸಾಯಿರಾಮ್‌ ಭಟ್

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2018, 4:22 IST
Last Updated 3 ಫೆಬ್ರುವರಿ 2018, 4:22 IST

ಮಂಗಳೂರು: ನಗರೀಕರಣದಿಂದ ಸಾಮಾನ್ಯರ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಸಾಮಾನ್ಯ ಆಸ್ತಿ ಹಕ್ಕು, ಅತಿಕ್ರಮಣ ಆಗುತ್ತಿದೆ. ಇದರ ಬಗ್ಗೆ ಜಾಗೃತರಾಗಬೇಕಿದೆ ಎಂದು ಬೆಂಗಳೂರಿನ ನ್ಯಾಷನಲ್‌ ಸ್ಕೂಲ್‌ ಆಫ್‌ ಇಂಡಿಯಾ ಯುನಿವರ್ಸಿಟಿ ಪ್ರಾಧ್ಯಾಪಕ ಡಾ. ಸಾಯಿರಾಮ್‌ ಭಟ್ ಹೇಳಿದರು.
ನಗರದ ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ಶುಕ್ರವಾರ ನಡೆದ ಸಾರ್ವಜನಿಕ ಆಸ್ತಿ, ಸಂಪನ್ಮೂಲ ಮತ್ತು ಸಾಂಪ್ರದಾಯಿಕ ಹಕ್ಕುಗಳು ಎಂಬ ವಿಚಾರ ಸಂಕಿರಣದಲ್ಲಿ ಗೌರವ ಅತಿಥಿಯಾಗಿ ಅವರು ಮಾತನಾಡಿದರು.

‘ಸಮುದ್ರ ಪ್ರದೇಶ, ನದಿ, ಅರಣ್ಯಗಳೆಲ್ಲಾ ನಗರೀಕರಣಕ್ಕೆ ಬಲಿಯಾಗುತ್ತಿವೆ. ಇದರಿಂದ ಜನಸಾಮಾನ್ಯರ ಸಾಂಪ್ರದಾಯಿಕ ಹಕ್ಕುಗಳಿಗೆ ಚ್ಯುತಿ ಬಂದಿದೆ. ಪಶ್ಚಿಮ ಘಟ್ಟದ ಪರಿಸರ ನಾಶ, ಬುಡಕಟ್ಟು ಜನರ ಹಕ್ಕುಗಳಿಗೆ ತಡೆ ಇದಕ್ಕೆ ಉದಾಹರಣೆಯಾಗಿದೆ. ನಗರೀಕರಣದಿಂದ ಸಾಮಾನ್ಯ ಆಸ್ತಿಗಳು ನಶಿಸಿಹೋಗುತ್ತಿವೆ. ಇದರೊಂದಿಗೆ ಹಕ್ಕುಗಳಿಗೆ ಕುಂದು ಉಂಟಾಗುತ್ತಿವೆ. ಸಾಮಾನ್ಯರ ಆಸ್ತಿ ಹಾಗೂ ಹಕ್ಕುಗಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಸಾಮಾನ್ಯ ಆಸ್ತಿಗಳ ನಾಶ ಆದಾಗ ನಮ್ಮ ನಾಶ ಆದಂತೆ. ಇವುಗಳನ್ನು ಅರಿತುಕೊಂಡು ಸದ್ಭಳಕೆ ಮಾಡಬೇಕು’ ಎಂದು ಹೇಳಿದರು.

ಬೆಂಗಳೂರಿನ ನ್ಯಾಷನಲ್‌ ಸ್ಕೂಲ್‌ ಆಫ್‌ ಇಂಡಿಯಾ ಯುನಿವರ್ಸಿಟಿ ಕುಲಪತಿ ಡಾ. ಆರ್‌. ವೆಂಕಟ ರಾವ್‌ ಮಾತನಾಡಿ, ‘ಕಾಡಿನ ಜನರಿಗಿರುವ ಹಲವು ವಿದ್ಯೆಗಳು ನಮಗೆ ಗೊತ್ತಿಲ್ಲ. ಅವರು ಪ್ರಕೃತಿ ಜತೆ ಬೆರೆಯುವುದರೊಂದಿಗೆ ಹಲವಾರು ಔಷಧ ವಿದ್ಯೆಯನ್ನು ಹೊಂದಿದ್ದರು. ಈಗ ಅವರ ಬದುಕುವ ಹಕ್ಕುಗಳಿಗೆ ಅಡ್ಡಿ ಪಡಿಸುವ ಮೂಲಕ ಅವರ ವಿದ್ಯೆಯೂ ಅವರ ಮುಂದಿನ ತಲೆಮಾರಿಗೆ ತಲುಪಲು ಸಾಧ್ಯವಾಗುತ್ತಿಲ್ಲ. ನಾವು ಆಧುನೀಕರಣದ ಹೆಸರಲ್ಲಿ ಪರಿಸರ ನಾಶವನ್ನು ಮಾಡುತ್ತಾ ಹಲವಾರು ಉತ್ತಮ ಅಂಶಗಳನ್ನು ಕಳೆದುಕೊಳ್ಳುತ್ತಿದ್ದೇವೆ’ ಎಂದರು.

ADVERTISEMENT

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಜಿರೆ ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಎ. ವಿ. ರಾಜೇಂದ್ರ ಶೆಟ್ಟಿ ವಹಿಸಿದ್ದರು. ಎಸ್‌ಡಿಎಂ ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ. ತಾರಾನಾಥ್‌, ಬೆಂಗಳೂರಿನ ನ್ಯಾಷನಲ್‌ ಸ್ಕೂಲ್‌ ಆಫ್‌ ಇಂಡಿಯಾ ಯುನಿವರ್ಸಿಟಿ ಪ್ರಾಧ್ಯಾಪಕ ಡಾ. ಎಂ. ಕೆ. ರಮೇಶ್‌, ವಿನುತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.