ADVERTISEMENT

ಶಿವರಾಜ್‌ ಕೊಲೆ ಪ್ರಕರಣ: ಮತ್ತೆ ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2018, 5:26 IST
Last Updated 20 ಫೆಬ್ರುವರಿ 2018, 5:26 IST

ಮಂಗಳೂರು: ಬೆಂಗರೆಯ ಬೊಕ್ಕಪಟ್ಣದಲ್ಲಿ ಜನವರಿ 22ರಂದು ನಡೆದ ಶಿವರಾಜ್ ಕರ್ಕೇರ ಕೊಲೆ ಪ್ರಕರಣಕ್ಕೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಮೂವರು ಆರೋಪಿಗಳನ್ನು ಪಣಂಬೂರು ಪೊಲೀಸರು ಮತ್ತು ಮಂಗಳೂರು ಉತ್ತರ ಉಪ ವಿಭಾಗದ ರೌಡಿ ನಿಗ್ರಹದಳದ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಕುದ್ರೋಳಿ ಬೆಂಗರೆ ನಿವಾಸಿಗಳಾದ ವಿಕ್ರಮ್ ಅಲಿಯಾಸ್‌ ವಿಕ್ರಮ್ ಅಮೀನ್‌ ಅಲಿಯಾಸ್‌ ವಿಕ್ಕಿ(25), ಅಜಯ್ (20), ಬಿಜೈ ಭಾರತಿನಗರ ನಿವಾಸಿ ಸುಮನ್ ಯಾನೆ ಸುಮನ್ ಕೋಟ್ಯಾನ್ (19) ಬಂಧಿತರು. ಬಿಜೈ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿ ಮೂವರನ್ನೂ ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಟಿ.ಆರ್.ಸುರೇಶ್ ತಿಳಿಸಿದ್ದಾರೆ.

ರೌಡಿಶೀಟರ್ ಭರತೇಶ್‍ನನ್ನು ಕೊಲೆ ಮಾಡಲು ಬಂದ ಆರೋಪಿಗಳು ತಪ್ಪಿ ಆತನ ತಮ್ಮ ಶಿವರಾಜ್‍ನನ್ನು ಕೊಲೆ ಮಾಡಿದ್ದರು. ಈ ಕೊಲೆಯ ಪ್ರಮುಖ ಆರೋಪಿಗಳಿಗೆ ಕುಮ್ಮಕ್ಕು ನೀಡಿದ ಕಾರಣಕ್ಕಾಗಿ ಈ ಮೂವರನ್ನು ಬಂಧಿಸಲಾಗಿದೆ. ಕೊಲೆಯ ಬಳಿಕ ತಲೆಮರೆಸಿಕೊಂಡಿದ್ದ ಇವರ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡ ಪೊಲೀಸರು, ಅವರನ್ನು ಬಂಧಿಸಿದ್ದಾರೆ

ADVERTISEMENT

ಈ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ ಅನೀಷ್, ವಿತರಾಜ್, ಮಾದೇಶ, ಸುನಿಲ್, ಧೀರಜ್, ಜೀವನ್ ಪಿರೇರಾ, ಸತೀಶ್‍ ಎಂಬುವವರನ್ನು ಹಿಂದೆ ಬಂಧಿಸಲಾಗಿತ್ತು. ಈಗ ಬಂಧಿತರ ಸಂಖ್ಯೆ 10ಕ್ಕೇರಿದೆ.
ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಡಿ.ಎಸ್‌.ರಾಜೇಂದ್ರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಣಂಬೂರು ಠಾಣೆ ಇನ್‍ಸ್ಪೆಕ್ಟರ್ ಕೆ.ಎಂ.ರಫೀಕ್, ಸಬ್‌ ಇನ್‌ಸ್ಪೆಕ್ಟರ್‌ ಎಂ.ಎನ್. ಉಮೇಶ್ ಕುಮಾರ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.