ADVERTISEMENT

86 ಮಂದಿ ನ್ಯಾಯಾಂಗ ಬಂಧನಕ್ಕೆ

ಭೂಮಿ ಹಕ್ಕಿಗಾಗಿ ಜೈಲ್‌ ಭರೋ ಚಳವಳಿ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2016, 6:14 IST
Last Updated 19 ನವೆಂಬರ್ 2016, 6:14 IST
ಭೂಮಿ ಹಕ್ಕಿಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಶುಕ್ರವಾರ ಮಂಗಳೂರಿನಲ್ಲಿ ನಡೆದ ಜೈಲ್ ಭರೋ ಚಳವಳಿ ವೇಳೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಪ್ರವೇಶದ್ವಾರದ ಎದುರು ಪ್ರತಿಭಟನಾ ಪ್ರದರ್ಶನ ನಡೆಸಿದ ಹೋರಾಟಗಾರರನ್ನು ಪೊಲೀಸರು ಬಂಧಿಸಿ ಕರೆದೊಯ್ಯುತ್ತಿರುವುದು.  – ಪ್ರಜಾವಾಣಿ ಚಿತ್ರ
ಭೂಮಿ ಹಕ್ಕಿಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಶುಕ್ರವಾರ ಮಂಗಳೂರಿನಲ್ಲಿ ನಡೆದ ಜೈಲ್ ಭರೋ ಚಳವಳಿ ವೇಳೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಪ್ರವೇಶದ್ವಾರದ ಎದುರು ಪ್ರತಿಭಟನಾ ಪ್ರದರ್ಶನ ನಡೆಸಿದ ಹೋರಾಟಗಾರರನ್ನು ಪೊಲೀಸರು ಬಂಧಿಸಿ ಕರೆದೊಯ್ಯುತ್ತಿರುವುದು. – ಪ್ರಜಾವಾಣಿ ಚಿತ್ರ   

ಮಂಗಳೂರು: ಭೂ ರಹಿತರು ಸಾಗುವಳಿ ಮಾಡುತ್ತಿರುವ ಜಮೀನುಗಳಿಗೆ ಹಕ್ಕುಪತ್ರ ವಿತರಿಸುವಂತೆ ಮತ್ತು ಮಂಗಳೂರಿನಲ್ಲಿ ಬಡವರಿಗೆ ನಿವೇಶನ ವಿತರಿಸುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ (ಕೆಪಿಆರ್‌ಎಸ್‌) ನೇತೃತ್ವದಲ್ಲಿ ಮಂಗಳೂರಿನಲ್ಲಿ ಶುಕ್ರವಾರ ನಡೆದ ಜೈಲ್‌ ಭರೋ ಚಳವಳಿಯಲ್ಲಿ ಪಾಲ್ಗೊಂಡು ದಕ್ಷಿಣ ಕನ್ನಡ ಜಿಲ್ಲಾಧಿ ಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿ ಸಿದ 86 ಮಂದಿಯನ್ನು ಬಂಧಿಸಲಾಗಿದೆ.

ಮಂಗಳೂರಿನ ಮಿನಿ ವಿಧಾನಸೌಧ ದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೆಳಿಗ್ಗೆ ನಡೆದ ಮೆರವಣಿಗೆಯಲ್ಲಿ ಸಿಪಿಎಂ, ಕೆಪಿಆರ್‌ಎಸ್‌, ಸಿಐಟಿಯು, ಡಿವೈಎಫ್‌ಐ ಮತ್ತು ಎಸ್‌ಎಫ್‌ಐನ ನೂರಾರು ಮಂದಿ ಪಾಲ್ಗೊಂಡಿದ್ದರು. ಪೊಲೀಸ್ ಭದ್ರತೆಯನ್ನು ಭೇದಿಸಿ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ನುಗ್ಗಲು ಯತ್ನಿಸಿದ 86 ಮಂದಿಯನ್ನು ಬಂಧಿಸಲಾಯಿತು.

ಠಾಣಾ ಜಾಮೀನು ಪಡೆಯಲು ನಿರಾಕರಿಸಿದ ಅವರನ್ನು ಮಂಗಳೂರು ದಕ್ಷಿಣ ಠಾಣೆ ಪೊಲೀಸರು, ಸಂಜೆ 7 ಗಂಟೆಗೆ ನ್ಯಾಯಾಲಯಕ್ಕೆ ಹಾಜರುಪ ಡಿಸಿದರು. ನ್ಯಾಯಾಲಯದಲ್ಲೂ ಹೋರಾಟಗಾರರು ಜಾಮೀನಿಗೆ ಅರ್ಜಿ ಸಲ್ಲಿಸಲಿಲ್ಲ. ಎಲ್ಲರನ್ನೂ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಧೀಶರು ಆದೇಶ ಹೊರಡಿಸಿದರು.

ಬಂಧಿತರಲ್ಲಿ 53 ಪುರುಷರು ಮತ್ತು 33 ಮಹಿಳೆಯರು ಇದ್ದಾರೆ. ಸಿಪಿಎಂ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಕಾರ್ಯ ದರ್ಶಿ ವಸಂತ ಆಚಾರಿ, ಕೆಪಿಆರ್‌ಎಸ್‌ ಜಿಲ್ಲಾ ಘಟಕದ ಕಾರ್ಯದರ್ಶಿ ಯಾದವ ಶೆಟ್ಟಿ, ಸಿಐಟಿಯು ಜಿಲ್ಲಾ ಘಟಕದ ಕಾರ್ಯದರ್ಶಿ ಸುನೀಲ್‌ಕುಮಾರ್‌ ಬಜಾಲ್, ಡಿವೈಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷ ಮತ್ತು ಮಂಗಳೂರು ಮಹಾ ನಗರ ಪಾಲಿಕೆ ಸದಸ್ಯ ಬಿ.ದಯಾನಂದ ಶೆಟ್ಟಿ, ಡಿವೈಎಫ್‌ಐ ಜಿಲ್ಲಾ ಘಟಕದ ಕಾರ್ಯದರ್ಶಿ ಸಂತೋಷ್‌ಕುಮಾರ್ ಬಜಾಲ್, ಎಸ್‌ಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷ ನಿತಿನ್ ಕುತ್ತಾರ್‌, ಸಿಪಿಎಂ ಮುಖಂಡರಾದ ಪದ್ಮಾವತಿ ಶೆಟ್ಟಿ ಬಂಧಿತರಲ್ಲಿ ಪ್ರಮುಖರಾಗಿದ್ದಾರೆ.

ಬಂಧನಕ್ಕೂ ಮುನ್ನ ಕುತ್ತಿಗೆಗೆ ಹಸಿರುಪಟ್ಟಿ ಧರಿಸಿ, ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಬಡವರಿಗೆ ಜಮೀನಿನ ಹಕ್ಕು ನೀಡುವಂತೆ ಆಗ್ರಹಿಸಿ ಘೋಷಣೆ ಕೂಗುತ್ತಾ ಸಾಗಿದರು. ಜಿಲ್ಲಾಧಿಕಾರಿ ಕಚೇರಿ ಪ್ರವೇಶ ದ್ವಾರದ ಎದುರು ಸೇರಿ ಸಂಚಾರಕ್ಕೆ ಅಡ್ಡಿಪಡಿಸಿದರು. ಮುಖಂಡರಾದ ವಸಂತ ಆಚಾರಿ, ಕೆ.ಆರ್‌.ಶ್ರೀಯಾನ್‌ ಮತ್ತಿತರರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.