ಮಂಗಳೂರು: ವೇಗವಾಗಿ ಬಸ್ ಚಲಾಯಿಸಿ ಮಹಿಳೆಯ ಸಾವಿಗೆ ಕಾರಣನಾಗಿದ್ದ ಚಾಲಕನಿಗೆ ಜೆಎಂಎಫ್‌ಸಿ ಮೂರನೇ ನ್ಯಾಯಾಲಯವು 9 ತಿಂಗಳು ಜೈಲು ಶಿಕ್ಷೆ ಹಾಗೂ ₹27 ಸಾವಿರ ದಂಡ ವಿಧಿಸಿದೆ.
ಚಾಲಕ ಭಾಸ್ಕರ್ ಶಿಕ್ಷೆಗೆ ಒಳಗಾದ ಅಪರಾಧಿ. 30 ಮಾರ್ಚ್ 2023ರಂದು ಐರಿನ್ ಡಿಸೋಜ (72) ಎಂಬ ಮಹಿಳೆ, ಬೆಂದೂರ್‌ವೆಲ್‌ನಲ್ಲಿ ತಾವು ಪ್ರಯಾಣಿಸಿದ ಬಸ್‌ನಿಂದ ಇಳಿದು ರಸ್ತೆ ದಾಟುವಾಗ, ಅದೇ ಬಸ್ ಚಾಲಕ ಒಮ್ಮೆಲೇ ಬಸ್ ಅನ್ನು ಮುಂದಕ್ಕೆ ಚಲಾಯಿಸಿದ ಪರಿಣಾಮ, ಐರಿನ್ ರಸ್ತೆಯ ಮೇಲೆ ಬಿದ್ದಿದ್ದರು. ಈ ವೇಳೆ ಬಸ್ ಚಕ್ರವು ಅವರ ತಲೆಯ ಮೇಲೆ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದರು. ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸ್ ಇನ್‌ಸ್ಪೆಕ್ಟರ್ ನಾಗರಾಜ್ ತನಿಖೆ ನಡೆಸಿದ್ದು, ಇನ್‌ಸ್ಪೆಕ್ಟರ್ ಗೋಪಾಲಕೃಷ್ಣ ಭಟ್ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ನ್ಯಾಯಾಧೀಶ ಸುರೇಶ್ ಇ.ಎಸ್ ಅವರು, ಆರೋಪಿಗೆ ಶಿಕ್ಷೆ ವಿಧಿಸಿ ಮೇ 5ರಂದು ತೀರ್ಪು ನೀಡಿದ್ದಾರೆ. ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪ್ರಮುಖ ಸಾಕ್ಷಿಯಾಗಿ ಪರಿಗಣಿಸಲಾಗಿದೆ. ಸರ್ಕಾರದ ಪರವಾಗಿ ವಕೀಲೆ ಗೀತಾ ರೈ ವಾದಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.