(ಎಡದಿಂದ) ಓಂಶ್ರೀ ಪೂಜಾರಿ ಮತ್ತು ಅಮನ್ ರಾವ್
ಮಂಗಳೂರು: ನಗರದ ಹೊರವಲಯದ ಜಪ್ಪಿನಮೊಗರುವಿನ ಬಳಿ ಬುಧವಾರ ಮುಂಜಾನೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರು ವಿಭಜಕಕ್ಕೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಯುವ ಕಾಂಗ್ರೆಸ್ ಮುಖಂಡ ಸಹಿತ ಇಬ್ಬರು ಯುವಕರು ಮೃತಪಟ್ಟಿದ್ದಾರೆ.
ಎನ್ಎಸ್ಯುಐ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಉಪಾಧ್ಯಕ್ಷ ಓಂಶ್ರೀ ಪೂಜಾರಿ ಹಾಗೂ ಕದ್ರಿಯ ಅಮನ್ ರಾವ್ ಮೃತರು. ಕಾರಿನಲ್ಲಿದ್ದ ಇತರ ಮೂವರು ಪ್ರಯಟಣಿಕರು ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ವಂಶಿ, ಇಟೆಲಿಯ ಪ್ರವಾಸಿಗ ಜೆರ್ರಿ ಹಾಗೂ ಆಶೀಷ್ ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ತೊಕ್ಕೊಟ್ಟು ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಫೋಕ್ಸ್ ವ್ಯಾಗನ್ ಕಾರು ಜಪ್ಪಿನಮೊಗರು ಬಳಿ ಚಾಲಕನ ನಿಯಂತ್ರಣ ಕಳೆದುಕೊಂಡು ಹೆದ್ದಾರಿ ವಿಭಜಕಕ್ಕೆ ಡಿಕ್ಕಿ ಹೊಡೆದಿತ್ತು. ಓಂಶ್ರೀ ಪೂಜಾರಿ ತನ್ನ ನಾಲ್ವರು ಗೆಳೆಯರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಕಾರಿನಲ್ಲಿದ್ದ ಐವರೂ ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಓಂಶ್ರೀ ಪೂಜಾರಿ ಹಾಗೂ ಅಮನ್ ರಾವ್ ಆಸ್ಪತ್ರೆ ಗೆ ಕರೆಯೊಯ್ಯುವಷ್ಟರಲ್ಲಿ ಅಸುನೀಗಿದ್ದಾರೆ. ಉಳಿದ ಮೂವರಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.