ADVERTISEMENT

ಕೊಟ್ಟ ಮಾತಿನಂತೆ ನಡೆಯದಿದ್ದರೆ ಜಗನ್ನಿವಾಸ್ ಮೇಲೆ ಕ್ರಮ: ಸತೀಶ್ ಕುಂಪಲ

ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2025, 5:23 IST
Last Updated 4 ಜುಲೈ 2025, 5:23 IST
ವಿವಾಹವಾಗುವುದಾಗಿ ನಂಬಿಸಿ ವಂಚನೆಗೊಳಪಟ್ಟ ಸಂತ್ರಸ್ತೆಯ ಮನೆಗೆ ಭೇಟಿ ನೀಡಿರುವ ಬಿಜೆಪಿ ಮುಖಂಡ ಮುರಳಿಕೃಷ್ಣ ಹಸಂತಡ್ಕ ಅವರು ಸಂತ್ರಸ್ತೆಯ ತಾಯಿಯ ಜತೆ ಮಾಧ್ಯಮಗಳ ಮುಂದೆ ಮಾತನಾಡಿದರು.
ವಿವಾಹವಾಗುವುದಾಗಿ ನಂಬಿಸಿ ವಂಚನೆಗೊಳಪಟ್ಟ ಸಂತ್ರಸ್ತೆಯ ಮನೆಗೆ ಭೇಟಿ ನೀಡಿರುವ ಬಿಜೆಪಿ ಮುಖಂಡ ಮುರಳಿಕೃಷ್ಣ ಹಸಂತಡ್ಕ ಅವರು ಸಂತ್ರಸ್ತೆಯ ತಾಯಿಯ ಜತೆ ಮಾಧ್ಯಮಗಳ ಮುಂದೆ ಮಾತನಾಡಿದರು.   

ಪುತ್ತೂರು: ನಗರಸಭಾ ಸದಸ್ಯ ಜಗನ್ನಿವಾಸ್ ರಾವ್ ಪುತ್ರನಿಂದ ನಡೆದ ಘಟನೆ ವಿಚಾರದಲ್ಲಿ ಬಿಜೆಪಿ ಮತ್ತು ಹಿಂದೂ ಪರ ಸಂಘಟನೆಗಳು ಸುಮ್ಮನೆ ಕೂರಿಲ್ಲ. ಘಟನೆ ಬಳಿಕ ಪುತ್ತೂರು ಶಾಸಕರ ಮಧ್ಯಸ್ಥಿಕೆಯಲ್ಲಿ ರಾಜಕೀಯ ಮಾಡದೆ, ಆರೋಗ್ಯಕರ ರೀತಿಯಲ್ಲಿ ಮಾತುಕತೆ ನಡೆದಿದೆ. ಬೇರೆ ಆಯಾಮಗಳು ಪಡೆಯಬಾರದೆಂಬ ಕಾರಣಕ್ಕೆ ಪ್ರತಿಕ್ರಿಯೆ ನೀಡಿಲ್ಲ. ಕೊಟ್ಟ ಮಾತಿನಂತೆ ನಡೆದುಕೊಳ್ಳುವಂತೆ ಎನ್.ಕೆ.ಜಗನ್ನಿವಾಸ ರಾವ್ ಅವರಿಗೆ ಸೂಚಿಸಲಾಗಿದ್ದು, ಅದಕ್ಕೆ ಒಪ್ಪದಿದ್ದರೆ ಅವರ ಮೇಲೆ ಅಗತ್ಯ ಕ್ರಮಕೈಗೊಳ್ಳುತ್ತೇವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ತಿಳಿಸಿದರು.

ಪುತ್ತೂರಿನಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಸ್ಯೆ ಸರಿಯಾಗಿಲ್ಲ ಎಂಬುದನ್ನು ಸಂತ್ರಸ್ತೆಯ ತಾಯಿ ಮಾಹಿತಿ ನೀಡಿದ್ದಾರೆ.

ಘಟನೆಯ ವಿಚಾರದಲ್ಲಿ ಬಿಜೆಪಿ ಹಾಗೂ ಪರಿವಾರ ಸಂಘಟನೆಯ ನಿಲುವು ಸ್ಪಷ್ಟವಿದೆ. ಹಿಂದೆ, ಇಂದು, ಮುಂದೆ ಪಕ್ಷ ಸಂತ್ರಸ್ತೆಯ ಪರವಾಗಿ ಗಟ್ಟಿಯಾಗಿ ನಿಲ್ಲುತ್ತದೆ. ಪೂರ್ಣ ಪ್ರಮಾಣದ ಯೋಚನೆ ಸಂತ್ರಸ್ತೆಯ ಪರವಾಗಿದೆ. ಜಗನ್ನಿವಾಸ್ ರಾವ್ ಜತೆಗೆ ಪಕ್ಷದ ಕಡೆಯಿಂದ ಮಾತುಕತೆಗಳು ನಡೆದಿದ್ದು, ಕೊಟ್ಟ ಮಾತಿನಂತೆ ನಡೆದುಕೊಳ್ಳಲು ಸೂಚಿಸಲಾಗಿದೆ. ಇದಕ್ಕೆ ಒಪ್ಪಿಕೊಳ್ಳದಿದ್ದರೆ ಅವರ ಮೇಲೆಯೂ ಅಗತ್ಯ ಕ್ರಮಕೈಗೊಳ್ಳುತ್ತೇವೆ. ಜಗನ್ನಿವಾಸ್ ರಾವ್ ಅವರ ಪುತ್ರ ಹಾಗೂ ಸಂತ್ರಸ್ತ ಯುವತಿಯ ನಡುವೆ ವಿವಾಹವಾಗಬೇಕೆಂಬ ತಾಯಿಯ ಬೇಡಿಕೆಯ ಪರವಾಗಿದ್ದೇವೆ. ಮಗುವಾದ ಬಳಿಕ ವಿವಾಹ ಮಾಡಿಸಿಕೊಳ್ಳುವುದು ಅವರ ಜವಾಬ್ದಾರಿಯಾಗಿದ್ದು, ಆಕೆಗೆ ಯಾವುದೇ ಅನ್ಯಾಯ ಆಗಬಾರದು ಎಂದರು.

ADVERTISEMENT

ಶಾಸಕರು ಮಾತುಕೊಟ್ಟ ಬಳಿಕ ಅದನ್ನು ಈಡೇರಿಸುವ ವಿಶ್ವಾಸವಿತ್ತು. ಶಾಸಕರು ಮಾಡಿದ ಪ್ರಕ್ರಿಯೆಯನ್ನು ಮುಂದುವರಿಸುವುದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಶಾಸಕರ ಮಧ್ಯದಲ್ಲಿ ನಾವು ಮಾತನಾಡುವುದು ಸರಿಯಲ್ಲ. ಸಂತ್ರಸ್ತೆಗೆ ನ್ಯಾಯ ಕೊಡಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದರು.

ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಿವಪ್ರಸಾದ್, ಜಿಲ್ಲಾ ಉಪಾಧ್ಯಕ್ಷ ಪ್ರಸನ್ನಕುಮಾರ್ ಮಾರ್ತ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಆರ್ವರ, ನಗರ ಸಭೆಯ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಉಪಸ್ಥಿತರಿದ್ದರು.

‘ಗರ್ಭಪಾತ ಮಾಡಿಸುವ ವಿಚಾರ ಹೇಳಿಲ್ಲ’

ಪುತ್ತೂರು: ವಿವಾಹವಾಗುವುದಾಗಿ ನಂಬಿಸಿ ವಂಚನೆಗೊಳಪಟ್ಟ ಸಂತ್ರಸ್ತೆಯ ಮನೆಗೆ ಬಿಜೆಪಿ ಮುಖಂಡ ಮುರಳಿಕೃಷ್ಣ ಹಸಂತಡ್ಕ ಅವರ ನೇತೃತ್ವದಲ್ಲಿ ವಿಶ್ವಹಿಂದೂ ಪರಿಷತ್ ಬಜರಂಗದಳದ ಪ್ರಮುಖರು ಗುರುವಾರ ಭೇಟಿ ನೀಡಿ ಸಂತ್ರಸ್ತೆಯ ತಾಯಿ ಮತ್ತು ಸಂತ್ರಸ್ತೆಗೆ ಸಾಂತ್ವನ ಹೇಳಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮುರಳೀಕೃಷ್ಣ ಹಸಂತಡ್ಕ ಹೆಣ್ಣುಮಗಳಿಗೆ ಅನ್ಯಾಯವಾದ ವಿಚಾರ ಜೂ.18ರಂದು ಗಮನಕ್ಕೆ ಬಂದಿದ್ದು ವಿಷಯ ಗೊತ್ತಾದಾಗ ನಾವೇ ಹೆಣ್ಣಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಮಾತನಾಡಿದ್ದೇವೆ. ಪಿ.ಜಿ.ಜಗನ್ನಿವಾಸ್ ರಾವ್ ಅವರಲ್ಲಿ ಮಾತುಕತೆ ನಡೆಸಿದಾಗ ಮಗ ಒಪ್ಪುತ್ತಿಲ್ಲ ಎಂದಿದ್ದರು.

ಜಾತಿ ವಿಚಾರ ಯಾವುದೂ ಇಲ್ಲ ಹಿಂದೂ ಹೆಣ್ಣು ಮಗುವಿಗೆ ಸಮಸ್ಯೆಯಾಗವಾರದು ಎಂದಾಗ ಜೂನ್‌ 23ರ ಬಳಿಕ ನೋಂದಣಿ ವಿವಾಹ ಮಾಡುವುದಾಗಿ ಒಪ್ಪಿದ್ದರು ಎಂದರು. ಪುತ್ರ ಯಾವುದಕ್ಕೂ ಒಪ್ಪದೆ ಆತ್ಮಹತ್ಯೆ ಮಾಡುವುದಾಗಿ ಹೇಳುತ್ತಿದ್ದಾರೆ. ಪ್ರಕರಣವನ್ನು ದುಡ್ಡು ನೀಡಿಯಾದರೂ ಮುಗಿಸಿ ಎಂದ ವಿಚಾರವನ್ನು ಅವರು ಬಳಿಕ ಮುಂದಿಟ್ಟಿದ್ದರು. ಆದರೆ ನಾವು ಸಂತ್ರಸ್ತೆಯ ಮಗುವಿಗೆ ನ್ಯಾಯ ಸಿಗಬೇಕೆಂಬ ಪ್ರಯತ್ನವನ್ನು ಮಾಡಿದ್ದೇವೆ. ಯಾವ ಸಂದರ್ಭದಲ್ಲೂ ಮಗುವಿನ ಗರ್ಭಪಾತ ವಿಚಾರವನ್ನು ಹೇಳಿಲ್ಲ. ಪ್ರಕರಣದಲ್ಲಿ ಎರಡು ಮನಸ್ಸುಗಳನ್ನು ಒಟ್ಟು ಸೇರಿಸುವ ಕಾರ್ಯವಾಗಬೇಕಾಗಿದೆ.

ಇದು ಮೂರು ಜೀವದ ಹಾಗೂ ಎರಡು ಕುಟುಂಬದ ಪ್ರಶ್ನೆಯಾಗಿದ್ದು ಗಡಿಬಿಡಿ ಮಾಡಬೇಡಿ ಎಂದಿದ್ದೇನೆ. ಜೂ.24ರ ರಾತ್ರಿ ಹುಡುಗನ ಕಡೆಯವರು ಯಾವ ವಿಚಾರದಲ್ಲೂ ಸ್ಪಷ್ಟತೆ ನೀಡಿಲ್ಲ. ಈ ಕಾರಣದಿಂದ ಕಾನೂನು ಹೋರಾಟವನ್ನು ಮುಂದುವರಿಸಿ ನಿಮ್ಮ ಜತೆಗೆ ನಾವಿದ್ದೇವೆ ಎಂಬುದನ್ನು ಸ್ಪಷ್ಟವಾಗಿ ಅವರಿಗೆ ತಿಳಿಸಿದ್ದೇವೆ. ನಾವು ಯಾವುದೇ ಹಣದ ಆಮಿಷವನ್ನು ನೀಡಿಲ್ಲ. ಅವರು ಹೇಳಿದ್ದನ್ನು ಯುವತಿ ಕಡೆಯವರಲ್ಲಿ ಹೇಳಿರುವುದು ನಿಜ ಎಂದು ಸ್ಪಷ್ಟಪಡಿಸಿದರು. ‘ನಾನು ಯಾವ ಸಂಘಟನೆಯಲ್ಲೂ ಇಲ್ಲ. ಮಗುವಿಗೆ ಅಪ್ಪನ ಸ್ಥಾನ ಕೊಡಿಸಿ ಎಂದಷ್ಟೇ ಕೇಳುತ್ತಿದ್ದೇನೆ’ ಎಂದು ಸಂತ್ರಸ್ತೆಯ ತಾಯಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.