ADVERTISEMENT

ಸಮುದ್ರದಲ್ಲಿ ಪಾಚಿಯ ಬೆಳವಣಿಗೆ ಹೆಚ್ಚಳ

ಹಸಿರು ಬಣ್ಣಕ್ಕೆ ತಿರುಗಿದ ಕಡಲು: ತಜ್ಞರ ಅಭಿಮತ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2020, 17:01 IST
Last Updated 21 ಸೆಪ್ಟೆಂಬರ್ 2020, 17:01 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಂಗಳೂರು: ರಾಜ್ಯ ಕರಾವಳಿಯ ಸಮುದ್ರದ ನೀರು ಹಸಿರು ಬಣ್ಣಕ್ಕೆ ತಿರುಗುತ್ತಿದ್ದು, ಅಪಾಯಕಾರಿ ಪಾಚಿಯ ದಿಢೀರ್‌ ಬೆಳವಣಿಗೆಯೇ ಇದಕ್ಕೆ ಕಾರಣ ಎಂದು ತಜ್ಞರು ಹೇಳುತ್ತಿದ್ದಾರೆ. ಈ ಪಾಚಿಯಿಂದ ಹಲವು ಸಮುದ್ರ ಜೀವಿಗಳು, ಮತ್ಸ್ಯ ಸಂಕುಲಕ್ಕೆ ಅಪಾಯ ಆಗಲಿದೆ ಎನ್ನುವ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಕರಾವಳಿಯಲ್ಲಿ ಮಳೆಯ ಪ್ರಮಾಣ ಅಧಿಕವಾಗಿದ್ದು, ನದಿಗಳು ಉಕ್ಕಿ ಹರಿಯುತ್ತಿವೆ. ಈ ನದಿಗಳು ಹೊತ್ತು ತರುವ ನೈಟ್ರೇಟ್‌ ಮತ್ತು ಫಾಸ್ಫೇಟ್ ಲವಣಾಂಶ ಅಧಿಕ ಪ್ರಮಾಣದಲ್ಲಿ ಸಮುದ್ರ ಸೇರುತ್ತಿರುವುದರಿಂದ ಪಾಚಿಗಳ ಬೆಳವಣಿಗೆ ಉಲ್ಬಣಿಸಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

‘ಕಾರವಾರದಿಂದ ಕಾಸರಗೋಡಿನವರೆಗಿನ ಬೀಚ್‌ಗಳಲ್ಲಿ ಸಮುದ್ರದ ನೀರು ಹಸಿರು ಬಣ್ಣಕ್ಕೆ ತಿರುಗುತ್ತಿದೆ. ಕಳೆದ ವರ್ಷವೂ ಕಡಲಿನಲ್ಲಿ ಪಾಚಿಯ ಬೆಳವಣಿಗೆ ಕಂಡು ಬಂದಿತ್ತು. ಆದರೆ, ಒಂದು ದಶಕದಲ್ಲಿ ಪಾಚಿಯ ಬೆಳವಣಿಗೆಯ ಬಗ್ಗೆ ಯಾವುದೇ ದಾಖಲೀಕರಣ ಆಗಿಲ್ಲ. ಹೀಗಾಗಿ ಈ ಪಾಚಿಯ ಬೆಳವಣಿಗೆ ಯಾವ ರೀತಿ ಇರುತ್ತದೆ ಎಂದು ಹೇಳುವುದು ಕಷ್ಟ’ ಎಂದು ರೀಫ್‌ ವಾಚ್‌ ಮರೈನ್‌ ಕನ್ಸರ್ವೇಶನ್‌ನ ಡಾ. ಶಂತನು ಕಳಂಬಿ ಹೇಳುತ್ತಾರೆ.

ADVERTISEMENT

‘ಸುರತ್ಕಲ್‌, ಕುಂದಾಪುರ ಮತ್ತು ಕಾರವಾರ ಸಮುದ್ರದ ನೀರಿನ ಮಾದರಿಗಳನ್ನು ಮೀನುಗಾರಿಕೆ ಕಾಲೇಜಿಗೆ ರವಾನಿಸಲಾಗಿದೆ. ಇದು ನಾಕ್ಟಿಲುಕಾ ಸ್ಯಾಪ್‌ನಂತಹ ಏಕಕೋಶಿಯ ಪಾಚಿ ಇರಬಹುದು. ಇಂತಹ ಪಾಚಿ ಕಳೆದ ವರ್ಷ ಗೋವಾದಲ್ಲೂ ಕಾಣಿಸಿಕೊಂಡಿತ್ತು’ ಎಂದು ಅವರು ಹೇಳಿದ್ದಾರೆ.

‘ಪಾಚಿಗಳ ದಟ್ಟಣೆಯಿಂದ ಸಮುದ್ರದ ನೀರಿನ ಬಣ್ಣ ಬದಲಾಗುತ್ತದೆ. ಹಸಿರು, ಹಳದಿಯುಕ್ತ ಕಂದು ಬಣ್ಣ ಹಾಗೂ ಕೆಂಪು ಅಥವಾ ದಟ್ಟ ಹಸಿರು ಬಣ್ಣವೂ ಕಾಣಿಸಿಕೊಳ್ಳಬಹುದು’ ಎಂದು ತಿಳಿಸಿದ್ದಾರೆ.

‘ಕಳೆದ ವಾರ ಕಾಸರಗೋಡು, ಕಾಞಿಂಗಾಡಿನ ಬೀಚ್‌ಗಳಲ್ಲೂ ಪಾಚಿಗಳ ಬೆಳವಣಿಗೆ ಕಂಡು ಬಂದಿತ್ತು. ಸೋಮವಾರ ಪಾಚಿಯ ತೀವ್ರತೆ ಕಡಿಮೆಯಾಗಿದೆ. ಹಾರ್ನೆಲಿಯಾ ಮರಿನಾದಂತಹ ಹಸಿರು ಪಾಚಿಯಿಂದ ಕೆಲ ಮೀನುಗಳಿಗೂ ತೊಂದರೆ ಉಂಟಾಗಲಿದೆ’ ಎಂದು ಕೇರಳ ಕೇಂದ್ರಿಯ ವಿಶ್ವವಿದ್ಯಾಲಯದ ಸಸ್ಯ ವಿಜ್ಞಾನ ವಿಭಾಗ ಮುಖ್ಯಸ್ಥ ಡಾ.ಕೆ. ಅರುಣ್‌ಕುಮಾರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.