ADVERTISEMENT

ಹಿರ್ಣಿ: ಟಿಪ್ಪರ್-ಬೈಕ್ ಮುಖಾಮುಖಿ ಡಿಕ್ಕಿ; ಬೈಕ್ ಸವಾರರಿಬ್ಬರು ಸಾವು

​ಪ್ರಜಾವಾಣಿ ವಾರ್ತೆ
Published 8 ಮೇ 2019, 13:09 IST
Last Updated 8 ಮೇ 2019, 13:09 IST
ಬಂಟ್ವಾಳ ತಾಲ್ಲೂಕಿನ ಅಣ್ಣಳಿಕೆ -ಹಿರ್ಣಿ ನಡುವಿನ ಕುಮೇರು ಬಳಿ ಬುಧವಾರ ಅಪಘಾತ ನಡೆದ ಸ್ಥಳಕ್ಕೆ ಭೇಟಿ ನೀಡಿದ ಸಂಚಾರಿ ಠಾಣೆ ಪೊಲೀಸರು ಪರಿಶೀಲಿಸಿದರು.
ಬಂಟ್ವಾಳ ತಾಲ್ಲೂಕಿನ ಅಣ್ಣಳಿಕೆ -ಹಿರ್ಣಿ ನಡುವಿನ ಕುಮೇರು ಬಳಿ ಬುಧವಾರ ಅಪಘಾತ ನಡೆದ ಸ್ಥಳಕ್ಕೆ ಭೇಟಿ ನೀಡಿದ ಸಂಚಾರಿ ಠಾಣೆ ಪೊಲೀಸರು ಪರಿಶೀಲಿಸಿದರು.   

ಬಂಟ್ವಾಳ: ತಾಲ್ಲೂಕಿನ ಅಣ್ಣಳಿಕೆ -ಹಿರ್ಣಿ ನಡುವಿನ ಕುಮೇರು ಬಳಿ ಬುಧವಾರ ಟಿಪ್ಪರ್‌ಗೆ ಬುಲೆಟ್ ಬೈಕ್ ಡಿಕ್ಕಿ ಹೊಡೆದಿದ್ದರಿಂದ, ಬೈಕ್ ಸವಾರರಿಬ್ಬರು ಮೃತಪಟ್ಟಿದ್ದಾರೆ.

ಬೈಕ್ ಸವಾರ ಸ್ಥಳೀಯ ಹಿರ್ಣಿ ನಿವಾಸಿ ರಮೇಶ ಪೂಜಾರಿ ಅವರ ಪುತ್ರ ಸುರೇಂದ್ರ (31) ಮತ್ತು ಅವರ ಸಂಬಂಧಿ ಜಯಲಕ್ಷ್ಮಿ(33) ಮೃತಪಟ್ಟವರು. ಅಪಘಾತ ಸಂಭವಿಸಿದ ತಕ್ಷಣವೇ ಬೈಕ್‌ ಸವಾರರು ಹಾಗೂ ಟಿಪ್ಪರ್ ಚಾಲಕ ನಾಗಪ್ಪ ಸೇರಿದಂತೆ ಗಾಯಗೊಂಡವರನ್ನು ಸ್ಥಳೀಯರು 108 ಆರೋಗ್ಯ ಕವಚ ವಾಹನದ ಮೂಲಕ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಆದರೆ ಅಷ್ಟರಲ್ಲಿಯೇ ಇಬ್ಬರು ಮೃತಪಟ್ಟಿದ್ದರು.

ಸುರೇಂದ್ರ ಅವರು ಬೆಂಗಳೂರು ಎಚ್ಎಎಲ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ಸಹೋದರ ಮನೆಯಲ್ಲಿದ್ದರು. ಎರಡು ದಿನಗಳ ಹಿಂದೆಯಷ್ಟೇ ಊರಿಗೆ ಬಂದಿದ್ದ ಸುರೇಂದ್ರ ಅವರಿಗೆ, ಹುಡುಗಿ ನೋಡುವುದಕ್ಕಾಗಿ ಸಂಬಂಧಿ ಮಹಿಳೆ ಜಯಲಕ್ಷ್ಮಿ ಅವರನ್ನು ಕರೆಸಿದ್ದರು ಎನ್ನಲಾಗಿದೆ.

ADVERTISEMENT

ಬುಧವಾರ ಬೆಳಿಗ್ಗೆ 10 ಗಂಟೆಗೆ ಸುರೇಂದ್ರ ಅವರು ತನ್ನ ಸಹೋದರಿಯನ್ನು ರಾಯಿ ಗ್ರಾಮ ಪಂಚಾಯಿತಿಗೆ ಬೈಕಿನಲ್ಲಿ ಬಿಟ್ಟು ಮನೆಗೆ ವಾಪಸಾಗುತ್ತಿದ್ದರು. ಈ ಸಂದರ್ಭದಲ್ಲಿ ಅಣ್ಣಳಿಕೆ ಬಳಿ ಬಸ್‌ನಲ್ಲಿ ಬಂದಿಳಿದ ಸಂಬಂಧಿ ಜಯಲಕ್ಷ್ಮಿ ಅವರನ್ನು ಕೂರಿಸಿಕೊಂಡು ಹಿರ್ಣಿ ರಸ್ತೆಯಲ್ಲಿ ಸುರೇಂದ್ರ ಮನೆಗೆ ಹೋಗುತ್ತಿದ್ದರು.

ಈ ಸಂದರ್ಭದಲ್ಲಿ ಸಿದ್ಧಕಟ್ಟೆ-ಕರ್ಪಿ ಕಡೆಯಿಂದ ಅಣ್ಣಳಿಕೆ ಕಡೆಗೆ ಬರುತ್ತಿದ್ದ ಟಿಪ್ಪರ್ ಲಾರಿಗೆ ಮುಖಾಮುಖಿ ಡಿಕ್ಕಿಯಾಗಿದೆ. ಬುಲೆಟ್ ಬೈಕ್ ಡಿಕ್ಕಿ ಹೊಡೆದ ರಭಸಕ್ಕೆ ಟಿಪ್ಪರ್ ಎದುರು ಗಾಯಾಳುಗಳ ಗಂಭೀರವಾಗಿ ಗಾಯಗೊಂಡು ಬಿದ್ದಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ರಾಯಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹರೀಶ ಆಚಾರ್ಯ, ಪ್ರಮುಖರಾದ ಉಮೇಶ ಡಿ.ಎಂ., ಕೆ.ಪರಮೇಶ್ವರ ಪೂಜಾರಿ ಇತರರು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಸಹಕರಿಸಿದರು. ಸಂಚಾರಿ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ಮಂಜುನಾಥ, ಎಎಸ್‌ಐ ಎಂ.ಕೆ.ಕುಟ್ಟಿ ಸೇರಿದಂತೆ ಪೊಲಿಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.