ಮಂಗಳೂರು: ‘ರಾಜ್ಯದಲ್ಲಿ ಭ್ರಷಾಚಾರದ ವಿಷಯದಲ್ಲಿ ಪೈಪೋಟಿ ನಡೆಯುತ್ತಿರುವುದನ್ನು ಜನ ನೋಡುತ್ತಿದ್ದಾರೆ. ಸರ್ಕಾರವನ್ನು ಬೀಳಿಸುವುದಲ್ಲಿ ನಮಗೆ ವಿಶ್ವಾಸ ಇಲ್ಲ. ಪ್ರಜಾಸತ್ತಾತ್ಮಕ ರೀತಿಯುಲ್ಲೇ ಈ ಸರ್ಕಾರದ ಅವಸಾನವಾಗಲಿದೆ’ ಎಂದು ಬಿಜೆಪಿ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯದ ಉಸ್ತುವಾರಿ ರಾಧಾ ಮೋಹನದಾಸ್ ಅಗರ್ವಾಲ್ ಹೇಳಿದರು.
ಇಲ್ಲಿ ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ಬಿಜೆಪಿಯು ಯಾವತ್ತೂ ರಾಜಕೀಯದಲ್ಲಿ ವ್ಯಾಪಾರ ಮಾಡುವುದಿಲ್ಲ. ಯಾರದೋ ವೈಫಲ್ಯದ ಲಾಭ ಪಡೆಯುವುದು ನಮ್ಮ ಚಿಂತನೆ ಅಲ್ಲ. ಈ ರಾಜ್ಯ ಸರ್ಕಾರದ ಎರಡು ವರ್ಷಗಳ ಆಡಳಿತದಲ್ಲಿ ಅರಾಜಕತೆ, ಮುಸ್ಲಿಂ ತುಷ್ಟೀಕರಣ ಮತ್ತು ಭ್ರಷ್ಟಾಚಾರ ಎದ್ದು ಕಾಣಿಸುತ್ತಿದೆ. ಬಿಜೆಪಿಯ ಕಾರ್ಯಕರ್ತರು ರಾಜ್ಯ ಘಟಕದ ಅಧ್ಯಕ್ಷರ ನೇತೃತ್ವದಲ್ಲಿ ಎಷ್ಟೆಲ್ಲ ಸಾಧ್ಯವೋ ಅಷ್ಟು ಹೋರಾಟಗಳನ್ನು ನಡೆಸಿದ್ದಾರೆ. ಈ ಸರ್ಕಾರದ ದುರ್ವ್ಯವಸ್ಥೆಗಳನ್ನು ಜನರೂ ನೋಡಿದ್ದಾರೆ. ಈ ಸರ್ಕಾರ ಅರಾಜಕತೆ ಸೃಷ್ಟಿಸುತ್ತಲೇ ಇದೆ. ಇಲ್ಲೂ ಒಂದು ರೀತಿ ತುರ್ತು ಪರಿಸ್ಥಿತಿ ಇದೆ’ ಎಂದರು.
‘ಸರ್ಕಾರ ಬಳಿ ದುಡ್ಡಿಲ್ಲ ಎಂದು ಒಬ್ಬರಲ್ಲ ಅನೇಕ ಶಾಸಕರು ಆರೋಪ ಮಾಡಿದ್ದಾರೆ. ಕಾಂಗ್ರೆಸ್‌ನಲ್ಲಿ ಒಳ ಜಗಳ ನಡೆಯುತ್ತಿದೆ. ಜನರೂ ಇದೆಲ್ಲವನ್ನೂ ಗಮನಿಸುತ್ತಿದ್ದಾರೆ. 2023ರ ಚುನಾವಣೆಯಲ್ಲಿ ಎಂತಹ ದೊಡ್ಡ ತಪ್ಪು ಮಾಡಿದ್ದೇವೆ ಎಂಬುದು ಅವರಿಗೂ ಅರಿವಾಗಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಅದಕ್ಕೆ ಉತ್ತರವನ್ನೂ ನೀಡಿದ್ದಾರೆ. ಮುಂದೆಯೂ ಜನರೇ ಉತ್ತರ ನೀಡುತ್ತಾರೆ’ ಎಂದರು.
ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಅವರೇ ಮುಂದುವರಿಯುತ್ತಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಈ ಪ್ರಶ್ನೆಗೆ ಹೌದು ಅಥವಾ ಇಲ್ಲ ಎಂದು ನಾನು ಹೇಳಲು ಬರುವುದಿಲ್ಲ. ಈ ಪ್ರಕ್ರಿಯೆಯನ್ನು ಪಕ್ಷದ ಸಂಸದೀಯ ಮಂಡಳಿಯು ನಡೆಸುತ್ತದೆ. ಈ ಬಗ್ಗೆ ಹೇಳುವ ಅಧಿಕಾರ ನನಗಿಲ್ಲ’ ಎಂದರು.
ಪಕ್ಷದಿಂದ ಉಚ್ಚಾಟನೆಗೊಂಡಿರುವ ಕೆ.ಎಸ್.ಈಶ್ವರಪ್ಪ ಹಾಗೂ ಬಸನಗೌಡ ಪಾಟೀಲ ಯತ್ನಾಳ್ ಅವರನ್ನು ಮರಳಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಕುರಿತು ಪ್ರತಿಕ್ರಿಯಿಸಿದ ಅವರು, ‘ಅವರಿಬ್ಬರೂ ನಮ್ಮ ಪಕ್ಷದಲ್ಲಿ ಇಲ್ಲ. ಅವರು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ. ಪಕ್ಷದ ಹಿತಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಅವರನ್ನು ನಾವೇಕೆ ಮತ್ತೆ ಪಕ್ಷಕ್ಕೆ ಆಹ್ವಾನಿಸಬೇಕು. ನಮ್ಮ ಪಕ್ಷ ತುಂಬಾ ದೊಡ್ಡದು. ನಮ್ಮದು ಸಿದ್ದಾಂತ ಆಧಾರಿತ ಪಕ್ಷವ ಹೊರತು, ನಾಯಕರ ಆಧಾರದಲ್ಲಿ ನಡೆಯುವ ಪಕ್ಷವಲ್ಲ. ನನಗಿರುವ ಮಾಹಿತಿ ಪ್ರಕಾರ ಅಂತಹ ಯಾವುದೇ ಪ್ರಸ್ತಾವಗಳಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.