ADVERTISEMENT

ಎಸ್‌ಡಿಪಿಐ ಜಿಲ್ಲಾ ಕಾರ್ಯದರ್ಶಿ ವಿರುದ್ಧ ಪ್ರಕರಣ ದಾಖಲು

ಸುಳ್ಳು ಸಂದೇಶ ರವಾನೆ, ಅಕ್ರಮ ಕೂಟ ಆರೋಪ

​ಪ್ರಜಾವಾಣಿ ವಾರ್ತೆ
Published 4 ಜುಲೈ 2025, 5:21 IST
Last Updated 4 ಜುಲೈ 2025, 5:21 IST
<div class="paragraphs"><p>ಎಫ್‌ಐಆರ್</p></div>

ಎಫ್‌ಐಆರ್

   

ಬಂಟ್ವಾಳ: ಇಲ್ಲಿನ ಬಡಗಬೆಳ್ಳೂರು ಗ್ರಾಮದ ಕೊಳತ್ತಮಜಲು ನಿವಾಸಿ ಅಬ್ದುಲ್ ರಹಿಮಾನ್ ಹತ್ಯೆ ಮತ್ತು ಆಶ್ರಫ್ ವಯನಾಡು ಗುಂಪು ಹತ್ಯೆ ಪ್ರಕರಣ ಸಂಬಂಧ ಬಿ.ಸಿ.ರೋಡಿನ ಕೈಕಂಬ ಜಂಕ್ಷನ್ ಬಳಿ ಜುಲೈ 4ರಂದು ಎಸ್‌ಡಿಪಿಐ  ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಗೆ ನಗರ ಠಾಣೆ ಪೊಲೀಸರು ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸಂದೇಶ ರವಾನೆ ಮತ್ತು ಅಕ್ರಮ ಕೂಟ ರಚಿಸಿದ ಆರೋಪದಡಿ ಗುರುವಾರ ಪ್ರಕರಣ ದಾಖಲಾಗಿದೆ.

ಈ ಬಗ್ಗೆ ಜುಲೈ 1ರಂದು ಸಂಜೆ ಇಲ್ಲಿನ ಬಿ.ಮೂಡ ಗ್ರಾಮ ನಿವಾಸಿ, ಎಸ್‌ಡಿಪಿಐ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ತಲಪಾಡಿ ಮತ್ತು ಮತ್ತಿಬ್ಬರು ನಗರ ಠಾಣೆಯಲ್ಲಿ ಸೋಷಿಯಲ್ ಡೆಮಾಕ್ರಾಟಿಕ್ ಪಾರ್ಟಿ ವತಿಯಿಂದ ಧ್ವನಿವರ್ಧಕ ಬಳಕೆ ಸಹಿತ ಪ್ರತಿಭಟನೆ ನಡೆಸಲು ಅನುಮತಿ ಮತ್ತು ಸೂಕ್ತ ಭದ್ರತೆ ಒದಗಿಸಲು ಮನವಿ ಸಲ್ಲಿಸಿದ್ದರು. ಆದರೆ ಈ ಎರಡೂ ಘಟನೆ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ಮತ್ತು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿದೆ. ಜಿಲ್ಲೆಯಲ್ಲಿ ಕಾನೂನು ಹಾಗೂ ಶಾಂತಿ ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಸೂಕ್ತ ಕಾನೂನು ತಿಳುವಳಿಕೆ ನೀಡಿ ಅನುಮತಿ ನಿರಾಕರಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಈ ನಡುವೆ 'ಬ್ರೇಕಿಂಗ್ ನ್ಯೂಸ್ ಮೈಕಾಲ' ಎಂಬ ವಾಟ್ಸಾಪ್ ಗ್ರೂಪ್‌ನಲ್ಲಿ 'ನ್ಯಾಯ ಮರೀಚಿಕೆ, ಹುಸಿಯಾದ ಭರವಸೆ' ಅಬ್ದುಲ್ ರಹಿಮಾನ್ ಮತ್ತು ವಯನಾಡ್ ಅಶ್ರಫ್ ಕೊಲೆ ಕೃತ್ಯದ ಪ್ರಮುಖ ಆರೋಪಿಗಳ ಬಂಧನದ ವಿಳಂಬ ಮತ್ತು ಪರಿಹಾರ ಘೋಷಿಸದ ಸರ್ಕಾರದ ನಡೆ ವಿರೋಧಿಸಿ ಶುಕ್ರವಾರ (ಜು.4) ಬಿ.ಸಿ.ರೋಡು ಕೈಕಂಬ ಜಂಕ್ಷನ್ ನಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ವಾಟ್ಸಾಪ್ ಮೂಲಕ ಸಾರ್ವಜನಿಕರಿಗೆ ಸುಳ್ಳು ಸಂದೇಶ ರವಾನಿಸಿದ್ದಾರೆ. ಮಾತ್ರವಲ್ಲದೇ ಅಂದು ಅಕ್ರಮ ಕೂಟ ಸೇರಿ ಅಪರಾಧ ಎಸಗಲು ವಾಟ್ಸಾಪ್ ಸಂದೇಶದ ಮೂಲಕ ಪ್ರೇರಣೆ ನೀಡಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.