ADVERTISEMENT

‘ಶಾಸಕರ ಕಚೇರಿ ಚಲೋ’ ಪ್ರತಿಭಟನೆ- ಕರ್ನಾಟಕ ರಾಜ್ಯ ಘಟಕದ ಉಪಾಧ್ಯಕ್ಷ ವಸಂತ ಆಚಾರಿ

​ಪ್ರಜಾವಾಣಿ ವಾರ್ತೆ
Published 7 ಮೇ 2022, 3:22 IST
Last Updated 7 ಮೇ 2022, 3:22 IST
ಶಾಸಕರ ಕಚೇರಿ ‘ಶ್ರಮಿಕ’ದ ಮುಂದೆ ಸಿಐಟಿಯು ಬೆಳ್ತಂಗಡಿ ತಾಲ್ಲೂಕು ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.
ಶಾಸಕರ ಕಚೇರಿ ‘ಶ್ರಮಿಕ’ದ ಮುಂದೆ ಸಿಐಟಿಯು ಬೆಳ್ತಂಗಡಿ ತಾಲ್ಲೂಕು ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.   

ಬೆಳ್ತಂಗಡಿ: ‘ಎರಡು ವರ್ಷಗಳ ಕಾಲ ಶಾಸಕರಾದರೆ ಸಾಯುವ ತನಕ ಪಿಂಚಣಿ ನೀಡುವ ಸರ್ಕಾರಗಳು 19 ವರ್ಷಗಳಿಂದ ಸತತವಾಗಿ ಬಿಸಿಯೂಟ ಯೋಜನೆಯಲ್ಲಿ ದುಡಿಯುತ್ತಿರುವ ನೌಕರರಿಗೆ ಪಿಂಚಣಿ ನೀಡದೆ ವಂಚಿಸುತ್ತಿವೆ. ಸರ್ಕಾರ ಈ ರೀತಿಯಲ್ಲಿ ಮಹಿಳೆಯರನ್ನು ವಂಚಿಸುವುದು ಯಾವ ನ್ಯಾಯ’ ಎಂದು ಸಿಐಟಿಯು ಕರ್ನಾಟಕ ರಾಜ್ಯ ಘಟಕದ ಉಪಾಧ್ಯಕ್ಷ ವಸಂತ ಆಚಾರಿ ಪ್ರಶ್ನಿಸಿದರು.

ಅಕ್ಷರ ದಾಸೋಹ ನೌಕರರ ಸಂಘ (ಸಿಐಟಿಯು) ಬೆಳ್ತಂಗಡಿ ತಾಲ್ಲೂಕು ಸಮಿತಿ ನೇತೃತ್ವದಲ್ಲಿ 60 ವರ್ಷ ಪೂರೈಸಿದ ಅಕ್ಷರ ದಾಸೋಹ ನೌಕರರಿಗೆ ಪಿಂಚಣಿ, ಎಪ್ರಿಲ್– ಮೇ ತಿಂಗಳ ವೇತನ, ವಯೋಮಿತಿ ಹೆಸರಿನಲ್ಲಿ ನೌಕರರ ವಜಾ ಸೇರಿದಂತೆ ಇನ್ನಿತರ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಶಾಸಕರ ಕಚೇರಿ ಚಲೋ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಕೇಂದ್ರ ಸರ್ಕಾರ ಅಕ್ಷರ ದಾಸೋಹ ಯೋಜನೆಯ ಅನುದಾನವನ್ನು ಕಡಿತ ಮಾಡಿದರೆ, ರಾಜ್ಯ ಸರ್ಕಾರ ವಯೋಮಿತಿ ಹೆಸರಿನಲ್ಲಿ ನೌಕರರನ್ನು ಸೇವೆಯಿಂದ ವಜಾ ಮಾಡುವ ಮೂಲಕ ಬಡ ಮಕ್ಕಳ ಅನ್ನದ ಜೊತೆಗೆ ಚೆಲ್ಲಾಟವಾಡುತ್ತಿದೆ. ಶಾಸಕ ಹರೀಶ್ ಪೂಂಜ ಅವರಿಗೆ ನಿಜವಾಗಿಯೂ ಮಹಿಳೆಯರ ಬಗ್ಗೆ ಕಾಳಜಿ ಇದ್ದರೆ ಬಿಸಿಯೂಟ ನೌಕರರನ್ನು ಕೈಬಿಡುವ ರಾಜ್ಯ ಸರ್ಕಾರದ ತೀರ್ಮಾನವನ್ನು ವಿರೋಧಿಸಲಿ’ ಎಂದು ಸವಾಲು ಹಾಕಿದರು.

ADVERTISEMENT

ಸಿಐಟಿಯು ತಾಲ್ಲೂಕು ಘಟಕದ ಅಧ್ಯಕ್ಷ ಶಿವಕುಮಾರ್ ಎಸ್.ಎಂ, ಅಕ್ಷರ ದಾಸೋಹ ನೌಕರರ ಸಂಘದ ಅಧ್ಯಕ್ಷೆ ಲಲಿತಾ ಮದ್ದಡ್ಕ, ಸಿಐಟಿಯು ತಾಲ್ಲೂಕು ಪ್ರಧಾನ ಕಾರ್ಯದರ್ಶಿ ವಸಂತ ನಡ ಮಾತನಾಡಿದರು.

ಸಿಐಟಿಯು ಉಪಾಧ್ಯಕ್ಷೆ ಸುಕನ್ಯಾ ಹರಿದಾಸ್, ಅಕ್ಷರ ದಾಸೋಹ ನೌಕರರ ಸಂಘದ ಮುಖಂಡರಾದ ವನಿತಾ ಮರೋಡಿ, ಹೇಮಾವತಿ ತುರ್ಕಳಿಕೆ, ಶಶಿಕಲಾ ಬಳೆಂಜ, ಯಶೋದಾ ಮಡಂತ್ಯಾರ್, ಸಂಪದ ಮಡಂತ್ಯಾರ್, ಸುಶೀಲಾ ಕಾರಿಂಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.