ADVERTISEMENT

ವಿಜಯ ಬ್ಯಾಂಕ್‌ ವಿಲೀನಕ್ಕೆ ಪ್ರತಿರೋಧ

ನಾಳೆ ಮಂಗಳೂರು ಬಂದ್‌ಗೆ ಯುವ ಕಾಂಗ್ರೆಸ್‌ ಕರೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2019, 13:37 IST
Last Updated 7 ಜನವರಿ 2019, 13:37 IST

ಮಂಗಳೂರು: ವಿಜಯ ಬ್ಯಾಂಕ್‌ ಅನ್ನು ಬ್ಯಾಂಕ್‌ ಆಫ್‌ ಬರೋಡಾ ಜತೆಗೆ ವಿಲೀನಗೊಳಿಸುವುದನ್ನು ವಿರೋಧಿಸಿ ಇದೇ 9ರಂದು ಮಂಗಳೂರು ಬಂದ್‌ ಆಚರಿಸುವಂತೆ ಜಿಲ್ಲಾ ಯುವ ಕಾಂಗ್ರೆಸ್‌ ಕರೆ ನೀಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯುವ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಮಿಥುನ್‌ ರೈ, ಶಾಂತಿಯುತವಾಗಿ ನಡೆಯುವ ಈ ಬಂದ್‌ಗೆ ವಿದ್ಯಾರ್ಥಿ ಸಂಘಟನೆಗಳು, ಬಸ್‌ ನಿರ್ವಾಹಕರ ಸಂಘಟನೆ ಮತ್ತು ಇತರ ಹಲವು ಖಾಸಗಿ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ ಎಂದರು.

2017–18ರ ಸಾಲಿನ ಮೊದಲ ತ್ರೈಮಾಸಿಕದಲ್ಲಿ ₹ 727 ಕೋಟಿ ಲಾಭ ದಾಖಲಿಸಿದ ವಿಜಯ ಬ್ಯಾಂಕ್‌ ಅನ್ನು, ₹ 3,102 ಕೋಟಿ ನಷ್ಟ ದಾಖಲಿಸಿದ ಬ್ಯಾಂಕ್‌ ಆಫ್‌ ಬರೋಡಾ ಜತೆ ವಿಲೀನಗೊಳಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿರುವುದು ಖಂಡನೀಯ. ವಿಜಯ ಬ್ಯಾಂಕ್‌ ಅನ್ನು ಕೂಡ ನಷ್ಟದ ಕಡೆಗೆ ಕೊಂಡೊಯ್ಯುವ ಸರ್ಕಾರದ ಹುನ್ನಾರ ಸರಿಯಲ್ಲ. ಇದು ಜಿಲ್ಲೆಗೆ ಮಾಡಿದ ಅನ್ಯಾಯ ಮಾತ್ರವಲ್ಲದೆ, ಆರ್ಥಿಕ ವ್ಯವಸ್ಥೆ ಬುಡಮೇಲು ಮಾಡುವ ಕೆಲಸವಾಗಿದೆ ಎಂದು ಆರೋಪಿಸಿದರು.

ADVERTISEMENT

ಬ್ಯಾಂಕ್‌ ಆಫ್ ಬರೋಡಾ ಹೆಸರನ್ನು ಉಳಿಸಿಕೊಳ್ಳುವ ಬದಲು ವಿಜಯ ಬ್ಯಾಂಕ್‌ ಹೆಸರು ಉಳಿಸಿ, ಬ್ಯಾಂಕ್‌ ಆಫ್‌ ಬರೋಡಾವನ್ನು ವಿಲೀನಗೊಳಿಸಬಹುದು ಎಂದ ಅವರು, ಗುಜರಾತ್‌ ಮೂಲದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದಕ್ಷಿಣ ಕನ್ನಡ ಜಿಲ್ಲೆಯನ್ನು ಒತ್ತೆ ಇಡಲಾಗಿದೆಯೇ ಎಂದು ಪ್ರಶ್ನಿಸಿದರು.

9ರ ಬಂದ್‌ಗೆ ಎಲ್ಲರೂ ಪಕ್ಷಭೇದ ಮರೆತು ಬೆಂಬಲ ಸೂಚಿಸಬೇಕು. ಸಂಸದರು ಮತ್ತು ಬಿಜೆಪಿಯ ಶಾಸಕರೂ ಈ ಬಂದ್‌ಗೆ ಬೆಂಬಲ ವ್ಯಕ್ತಪಡಿಸಬೇಕು ಎಂದು ಅವರು ಆಗ್ರಹಿಸಿದರು.

ಸಂಸದರೇ ನೇರ ಹೊಣೆ: ದಕ್ಷಿಣ ಕನ್ನಡ ಜಿಲ್ಲೆಯ ಮಹಾನಾಯಕರ ಪರಿಶ್ರಮದಿಂದ ಸ್ಥಾಪಿತಗೊಂಡ ವಿಜಯ ಬ್ಯಾಂಕ್ ಈ ರಾಷ್ಟ್ರಕ್ಕೆ ವಿಶೇಷ ಕೊಡುಗೆಯನ್ನು ನೀಡಿದೆ. ಇದೀಗ ನಷ್ಟದಲ್ಲಿರುವ ಬರೋಡ ಬ್ಯಾಂಕಿನೊಡನೆ ವಿಲೀನಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಂಪೂರ್ಣ ನಿರ್ಲಕ್ಷತೆಯನ್ನು ತೋರಿಸುತ್ತದೆ ಎಂದು ಜೆಡಿಎಸ್‌ ಜಿಲ್ಲಾ ಘಟಕದ ದೂರಿದೆ.

ಈ ಬಗ್ಗೆ ಯಾವುದೇ ಹೇಳಿಕೆ, ಪ್ರತಿರೋಧ ನೀಡದ ಸಂಸದ ನಳಿನ್‌ಕುಮಾರ ಕಟೀಲ್ ಹಾಗೂ ಜಿಲ್ಲೆಯ ಶಾಸಕರು ಅವರ ಜಿಲ್ಲೆಯ ಬಗ್ಗೆ ಎಷ್ಟರ ಮಟ್ಟಿಗೆ ಕಾಳಜಿವಿದೆ ಎಂಬುದನ್ನು ಇದು ತೋರಿಸುತ್ತದೆ. ಮಂಗಳೂರು ವಿಮಾನ ನಿಲ್ದಾಣ ಖಾಸಗಿಕರಣ, ಟೋಲ್ ಗೇಟ್, ಪಂಪ್‌ವೆಲ್ ಹಾಗೂ ತೊಕ್ಕೊಟ್ಟು ಮೇಲ್ಸೇತುವೆ ಕಾಮಗಾರಿಕೆಯಲ್ಲಿ ಸಂಪೂರ್ಣ ವಿಫಲರಾದ ಸಂಸದರು, ಕೇವಲ ಕೇಂದ್ರದ ಕೈಗೊಂಬೆ ವಿನಾ ಅವರಿಗೆ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಚಿಂತನೆ ಇಲ್ಲ ಎಂಬುದು ಸ್ವಷ್ಟವಾಗಿದೆ ಎಂದು ಹೇಳಿದೆ.

ಇದೀಗ ಬ್ಯಾಂಕ್ ವಿಲೀನದ ಬಗ್ಗೆ ಪ್ರತಿಭಟನೆ, ಬಂದ್‌ಗಳ ಮೂಲಕ ಆಕ್ರೋಶವನ್ನು ವ್ಯಕ್ತಪಡಿಸುವುದು ಸಹಜ. ಸಮಾನ ಮನಸ್ಕರು ಜತೆಗೂಡಿ ಕೇಂದ್ರದ ಮೇಲೆ ಒತ್ತಡ ಹಾಗೂ ಕಾನೂನು ಕ್ರಮ ಕೈಗೊಳ್ಳುವುದು ಸೂಕ್ತ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಮಹಮ್ಮದ್ ಕುಂಞಿ ಹಾಗೂ ಜಿಲ್ಲಾ ವಕ್ತಾರ ಸುಶೀಲ್ ನೊರೊನ್ಹ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.