ADVERTISEMENT

‘ಆಜಾದಿ ಸೇ ಅಂತ್ಯೋದಯ್‌ ತಕ್’: ಜನಮನ ತಲುಪಿದ ಜಿಲ್ಲೆಗೆ ಐದನೇ ಸ್ಥಾನ

ಉತ್ತಮ ಸಾಧನೆ ಮಾಡಿದ ರಾಜ್ಯದ ಎರಡು ಜಿಲ್ಲೆಗಳು

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2022, 15:25 IST
Last Updated 24 ಸೆಪ್ಟೆಂಬರ್ 2022, 15:25 IST
ಡಾ.ಕೆ.ವಿ. ರಾಜೇಂದ್ರ
ಡಾ.ಕೆ.ವಿ. ರಾಜೇಂದ್ರ   

ಮಂಗಳೂರು: ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಭಾಗವಾಗಿ ಕೇಂದ್ರ ಸರ್ಕಾರ ನಡೆಸಿದ ‘ಆಜಾದಿ ಸೇ ಅಂತ್ಯೋದಯ ತಕ್’ ಫಲಾನುಭವಿ ಆಧಾರಿತ ಯೋಜನೆಗಳ ಅನುಷ್ಠಾನ ಅಭಿಯಾನದಲ್ಲಿ ಶೇ 87.40 ರಷ್ಟು ಗುರಿ ಸಾಧನೆ ಮಾಡುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆ ರಾಷ್ಟ್ರಮಟ್ಟದಲ್ಲಿ ಐದನೇ ಸ್ಥಾನ ಪಡೆದಿದೆ.

ದೇಶದ 27 ರಾಜ್ಯಗಳ 75 ಜಿಲ್ಲೆಗಳನ್ನು ಈ ಅಭಿಯಾನಕ್ಕೆ ಆಯ್ಕೆ ಮಾಡಲಾಗಿತ್ತು. ಕರ್ನಾಟಕದಿಂದ ದಕ್ಷಿಣ ಕನ್ನಡ ಮತ್ತು ಬೆಳಗಾವಿ ಜಿಲ್ಲೆಗಳು ಆಯ್ಕೆಯಾಗಿದ್ದವು. ಏಪ್ರಿಲ್ 28ರಿಂದ ಒಟ್ಟು 90 ದಿನಗಳ ಅಭಿಯಾನದಲ್ಲಿ ಕೇಂದ್ರ ಸರ್ಕಾರದ 17 ಯೋಜನೆಗಳ ಪರಿಣಾಮಕಾರಿ ಜಾರಿಗೆ ಗುರಿ ನಿಗದಿಪಡಿಸಲಾಗಿತ್ತು. ಅಂತಿಮವಾಗಿ ಆಯ್ಕೆ ಮಾಡಿದ ಟಾಪ್ ಟೆನ್ ಜಿಲ್ಲೆಗಳಲ್ಲಿ ದಕ್ಷಿಣ ಕನ್ನಡ ಐದನೇ ಸ್ಥಾನ ಗಳಿಸಿದರೆ, ಬೆಳಗಾವಿ ಶೇ 84.45 ಸಾಧನೆ ಮಾಡಿ, 10ನೇ ಸ್ಥಾನ ಪಡೆದಿದೆ. ಸೆ.26ರಂದು ದೆಹಲಿಯಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.

‘ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕೃಷಿ, ಕಾರ್ಮಿಕ ಇಲಾಖೆ ಸೇರಿದಂತೆ ಸರ್ಕಾರದ ಒಂಬತ್ತು ಇಲಾಖೆಗಳು, ಬ್ಯಾಂಕಿಂಗ್ ಕ್ಷೇತ್ರದವರನ್ನು ಒಳಗೊಂಡು, ಯೋಜನೆ ಜಾರಿಗೆ ಸಮಗ್ರ ಕ್ರಿಯಾ ಯೋಜನೆ ಸಿದ್ಧಪಡಿಸಿ, ಸಮಿತಿ ರಚನೆ ಮಾಡಲಾಗಿತ್ತು. 17 ಯೋಜನೆಗಳಲ್ಲಿ ಅಂಗವಿಕಲರಿಗೆ ಗುರುತಿನ ಚೀಟಿ ನೀಡುವ ಯೋಜನೆ ಕೂಡ ಒಂದಾಗಿತ್ತು. ಜಿಲ್ಲಾ ಕೇಂದ್ರ ಆಸ್ಪತ್ರೆಯಲ್ಲಿ ಇದ್ದ ವ್ಯವಸ್ಥೆಯನ್ನು ವಿಕೇಂದ್ರೀಕರಿಸಿ, ಸ್ಥಳೀಯ ಮೆಡಿಕಲ್ ಕಾಲೇಜು ಸಹಕಾರ ಪಡೆದು, ತಾಲ್ಲೂಕು ಮಟ್ಟಗಳಲ್ಲಿ ಕ್ಯಾಂಪ್ ಆಯೋಜಿಸಲಾಯಿತು. ಅಲ್ಲಿ ವೈದ್ಯರು ಪರೀಕ್ಷಿಸಿದ ಅಂಗವಿಕಲರನ್ನು, ಸರ್ಕಾರಿ ವೈದ್ಯರು ದೃಢೀಕರಿಸಿ, ಶೀಘ್ರ ಕಾರ್ಡ್ ವಿತರಿಸಲು ಸಾಧ್ಯವಾಯಿತು. ತೀವ್ರ ಅಂಗವೈಕಲ್ಯ ಇರುವವರಿಗೆ ಮನೆಗೇ ವಾಹನ ಕಳುಹಿಸಿದೆವು’ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಪ್ರತಿಕ್ರಿಯಿಸಿದರು.

ADVERTISEMENT

‘ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (ಪಿಎಂಜೆಜೆಬಿವೈ), ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್‌ಬಿವೈ), ಅಟಲ್ ಪಿಂಚಣಿ ಯೋಜನೆಯಡಿ ಜಿಲ್ಲೆಯಲ್ಲಿ 10 ಲಕ್ಷ ಜನರ ನೋಂದಣಿ ಮಾಡುವ ಮೂಲಕ ಅವರನ್ನು ವಿಮೆ ವ್ಯಾಪ್ತಿಗೆ ತರಲಾಗಿದೆ. ಜನ್‌ಧನ್‌ ಯೋಜನೆ, ಕೌಶಲಾಭಿವೃದ್ಧಿ ತರಬೇತಿ, ನರೇಗಾ ಕಾರ್ಯಕ್ರಮದಲ್ಲಿ ಸ್ತ್ರೀಶಕ್ತಿ ಗುಂಪುಗಳಿಗೆ ನರ್ಸರಿ ತರಬೇತಿ, ಹೀಗೆ ಫಲಾನುಭವಿ ಆಧಾರಿತ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸಮಿತಿ ರಚಿಸಿದ್ದೆವು. ಪ್ರತಿ ಬ್ಯಾಂಕ್ ಶಾಖೆಗೆ ತಿಂಗಳಿಗೆ 20 ಜನರ ನೋಂದಣಿ ಗುರಿ ನೀಡಿ, ಉತ್ತಮ ಸಾಧನೆ ಮಾಡಿದ ಬ್ಯಾಂಕ್‌ಗಳನ್ನು ಗೌರವಿಸಲಾಯಿತು. ಯುಡಿಐಡಿ ಕಾರ್ಡ್ ವಿತರಣೆ ಹಾಗೂ ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಹೊರತುಪಡಿಸಿ, ಇನ್ನುಳಿದ ಬಹುತೇಕ ಎಲ್ಲ ಯೋಜನೆಗಳಲ್ಲಿ ಶೇ 100ರಷ್ಟು ಗುರಿ ಸಾಧನೆ ಸಾಧ್ಯವಾಯಿತು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.