ADVERTISEMENT

ಕರಾವಳಿ: ಪುಂಡುವೇಷದ 'ಶಬರೀಶ್ ಆಚಾರ್ಯ'

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ದತ್ತು ಸ್ವೀಕಾರ ಯೋಜನೆಯ ಹೆಮ್ಮೆಯ ಕೊಡುಗೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2020, 19:30 IST
Last Updated 29 ಜನವರಿ 2020, 19:30 IST
ಶಬರೀಶ
ಶಬರೀಶ   

ಇವರು ಕಾರ್ಕಳ ತಾಲ್ಲೂಕಿನ ಮುನಿಯಾಲು ಊರಿನ ಪ್ರತಿಭೆ. ಯಕ್ಷಗಾನ ಮಾಡುತ್ತಿದ್ದ ಅಣ್ಣನಿಂದ ಬಾಲ್ಯದಲ್ಲಿಯೇ ಪ್ರಭಾವಿತನಾಗಿ, ತಾನು ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಕೊಳ್ಳಬೇಕು ಎಂಬ ಮಹದಾಸೆಯೊಂದಿಗೆ ಯಕ್ಷರಂಘಕ್ಕೆ ಕಾಲಿಟ್ಟ ಕಲಾವಿದ. ಅಷ್ಟು ಮಾತ್ರವಲ್ಲ, ವಿಶೇಷ ಆಸಕ್ತಿ ತನ್ಮತೆಯಿಂದ ಪ್ರದರ್ಶನ ನೀಡುವ ಈ ಯಕ್ಷಗಾನದ ಪ್ರತಿಭೆಯೆ ಶಬರೀಶ್ ಆಚಾರ್ಯ.

ಮುನಿಯಾಲಿನ ಬಾಲಕೃಷ್ಣ ಆಚಾರ್ಯ ಹಾಗೂ ಮಾಲತಿ ದಂಪತಿ ಪುತ್ರ. ತನ್ನ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಹುಟ್ಟೂರಿನಲ್ಲೇ ಪಡೆದ, ಇವರಿಗೆ ತಮ್ಮ ಮಾವ ಹಾಗೂ ಅಣ್ಣನೇ ಮೊದಲ ಗುರುಗಳು ಎಂದರೆ ತಪ್ಪಗಲಾರದು. ಮಾವ ಕುಂಜಾಲು ಕೇಶವಾಚಾರ್ಯ ಮಾರ್ಗದರ್ಶನದಲ್ಲಿ  11ನೇ ವಯಸ್ಸಿನಲ್ಲಿ `ಶ್ವೇತಾಕುಮಾರ ಚರಿತ್ರೆ’ಯ ನಾರದ ನಾಗಿ ಬಣ್ಣ ಹಚ್ಚಿದ್ದರು. ಆ ಮೂಲಕ ಯಕ್ಷಗಾನಕ್ಕೆ ಪದಾರ್ಪಣೆ ಮಾಡಿದರು. ಇದು ಮುಂದೆ ಇವರ ಅಪೂರ್ವ ಸಾಧನೆಗಳಿಗೆ ನಾಂದಿ ಹಾಡಿತು.

ಆಳ್ವಾಸ್ ದತ್ತು ಸ್ವೀಕಾರ: ‘ಅಣ್ಣ ಯಕ್ಷಗಾನ ಕಲಾವಿದ. ಆತನ ಬಳಿ ಯಕ್ಷಗಾನಕ್ಕೆ ಸಂಬಂಧಿಸಿದ ಹಲವಾರು ಸಲಹೆಗಳನ್ನು ಪಡೆಯುವುದರ ಜೊತೆಗೆ ತನ್ನ ಸ್ವಂತ ಆಸಕ್ತಿಯಿಂದ ಯಕ್ಷಗಾನಗಳನ್ನು ವೀಕ್ಷಿಸಿ, ಯಕ್ಷಗಾನಕ್ಕೆ ಅಗತ್ಯ ವಿಷಯಗಳನ್ನು ಮೈಗೂಡಿಸಿಕೊಳ್ಳಲು ಸಾಧ್ಯವಾಯಿತು’ ಎನ್ನುತ್ತಾರೆ ಶಬರೀಶ್ ಆಚಾರ್ಯ.

ADVERTISEMENT

ತದನಂತರದ ದಿನಗಳಲ್ಲಿ ಮುದ್ರಾಡಿಯ ಸುಬ್ರಹ್ಮಣ್ಯ ಪ್ರಸಾದ್‍ ಅವರ ಬಳಿ 2 ವರ್ಷಗಳ ಯಕ್ಷಗಾನ ತರಬೇತಿಯನ್ನು ಪಡೆದಿದ್ದು, ವಿಭಿನ್ನ ಪಾತ್ರಗಳು ಹಾಗೂ ಪ್ರಸಂಗಗಳಲ್ಲಿ ತಮ್ಮ ಅಭಿನಯ ಕೌಶಲವನ್ನು ತೋರಿದ್ದಾರೆ. ಯಕ್ಷಗಾನದ ಕುರಿತ ಆಸಕ್ತಿ ಹಾಗೂ ಪ್ರತಿಭೆಯನ್ನು ಗುರುತಿಸಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ತಮ್ಮ`ದತ್ತು ಸ್ವೀಕಾರ ಯೋಜನೆ’ಯ ಸಾಂಸ್ಕೃತಿಕ ವಿಭಾಗದಡಿಯಲ್ಲಿ ಉಚಿತ ಶಿಕ್ಷಣ ಹಾಗೂ ಯಕ್ಷಗಾನ ತರಬೇತಿಯನ್ನು ನೀಡುತ್ತಿದೆ.

ವಿಭಿನ್ನ ಪಾತ್ರದಲ್ಲಿ ಮಿಂಚು: ಪ್ರಾರಂಭದಲ್ಲಿ ದೀವಿತ್ ಕೋಟ್ಯಾನ್, ಪ್ರಸ್ತುತ ಆದಿತ್ಯ ಅಂಬಲಪಾಡಿಯವರ ಮಾರ್ಗದರ್ಶನದಲ್ಲಿ ಪಳಗುತ್ತಿರುವ ಪ್ರತಿಭೆ ಶಬರೀಶ್ ಆಚಾರ್ಯ. ಪುಂಡುವೇಷ ಎಂಬುದು ಇವರ ಅಚ್ಚುಮೆಚ್ಚಿನ ಪಾತ್ರ ಶೈಲಿಯಾಗಿದೆ.`ವೀರಮಣಿ ಕಾಳಗ’ದಲ್ಲಿ ಪುಷ್ಕಳ, `ಅಭಿಮನ್ಯು ಕಾಳಗ’ದ ಅಭಿಮನ್ಯು, `ವೃಷಸೇನ ಕಾಳಗ’ದ ವೃಷಸೇನಾ, `ಕೃಷ್ಣಲೀಲೆ’ಯ ಕೃಷ್ಣ, `ಶ್ವೇತಾ ಕುಮಾರ ಚರಿತೆ’ಯ ತ್ರಿಲೋಕ ಸುಂದರಿ, `ಸುದರ್ಶನ ವಿಜಯ’ದ ಸುದರ್ಶನ, `ತರಣಿಸೇನಾ ಕಾಳಗ’ದ ತರಣಿ ಹೀಗೆ ವಿಭಿನ್ನ ಪಾತ್ರಗಳಲ್ಲಿ ತಮ್ಮ ನಟನಾ ಸಾಮರ್ಥ್ಯ ವನ್ನು ಪ್ರದರ್ಶಿಸಿದ್ದಾರೆ.

ಬೆಳಗಾವಿ, ರಾಯಚೂರು, ಮಂಡ್ಯ, ಮೈಸೂರು, ಬೆಂಗಳೂರು, ಉಡುಪಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಇದುವರೆಗೂ ಸುಮಾರು 250ಕ್ಕೂ ಅಧಿಕ ಪ್ರದರ್ಶನಗಳನ್ನು ನೀಡಿದ್ದಾರೆ.

ಪ್ರಶಸ್ತಿಯ ಪುರಸ್ಕಾರ: ಸುರತ್ಕಲ್‍ನಲ್ಲಿ ನಡೆದ 2019ನೇ ಸಾಲಿನ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಯಕ್ಷಗಾನ ಸ್ಫರ್ಧೆಯಲ್ಲಿ ದ್ವಿತೀಯ ಸ್ಥಾನ, ಎಸ್.ಡಿ.ಎಂ ಕಾಲೇಜಿನಲ್ಲಿ ನಡೆದ ಸ್ಫರ್ಧೆಯಲ್ಲಿ ತೃತೀಯ ಸ್ಥಾನ, ಹಾಗೂ 2020ನೇ ಸಾಲಿನ ವಿಶ್ವವಿದ್ಯಾಲಯ ಮಟ್ಟದ ಸ್ಫರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿದ್ದು ಇವರಲ್ಲಿರುವ ಪ್ರತಿಭೆಗೆ ಪುರಾವೆ ನೀಡುವಂತಿದೆ. 

ಮೊಗೆದಷ್ಟು ಕಲಿಯಲು ವಿಚಾರಗಳು...
‘ಯಕ್ಷಗಾನ ಸುಲಭವಾಗಿ ಲಭಿಸುವ ವಿದ್ಯೆಯಲ್ಲ. ಅದಕ್ಕಾಗಿ ಸತತ ಪರಿಶ್ರಮ ಹಾಗೂ ಆಸಕ್ತಿ ಅಗತ್ಯ. ಈ ಕ್ಷೇತ್ರದಲ್ಲಿ ಮೊಗೆದಷ್ಟು ಕಲಿಯಲು ಹಲವು ವಿಚಾರಗಳಿವೆ. ಆ ಎಲ್ಲ ವಿಚಾರಗಳನ್ನು ಸೂಕ್ಷ್ಮ ರೀತಿಯಲ್ಲಿ ಅರಿತುಕೊಂಡು ಅಳವಡಿಸಿಕೊಂಡರೆ ಉನ್ನತ ಮಟ್ಟಕ್ಕೆ ಏರಲು ಸಾಧ್ಯವಿದೆ’ ಎನ್ನುತ್ತಾರೆ ಶಬರೀಶ್ ಆಚಾರ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.