ADVERTISEMENT

ಮಂಗಳೂರು: ಹಳೆಯ ಕಾರುಗಳಿಗೆ ಹೆಚ್ಚಿದ ಬೇಡಿಕೆ

ಹೊಸ ವಾಹನ ಖರೀದಿ ಮುಂದೂಡುತ್ತಿರುವ ಜನರು

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2020, 9:11 IST
Last Updated 28 ಸೆಪ್ಟೆಂಬರ್ 2020, 9:11 IST

ಮಂಗಳೂರು: ಕೋವಿಡ್–19 ಅನ್‌ಲಾಕ್‌ ನಂತರ ಜನರ ಓಡಾಟವೂ ಸೀಮಿತವಾಗುತ್ತಿದ್ದು, ಬಹುತೇಕ ಜನರು ಹೊಸ ಕಾರು ಖರೀದಿಯನ್ನು ಮುಂದಿನ ವರ್ಷಕ್ಕೆ ಮುಂದೂಡುತ್ತಿದ್ದಾರೆ. ಇದರಿಂದಾಗಿ ₹5 ಲಕ್ಷದೊಳಗಿನ ಹಳೆಯ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಆದರೆ, ಮಾರುಕಟ್ಟೆಯಲ್ಲಿ ಹಳೆಯ ಕಾರುಗಳ ಕೊರತೆ ಎದುರಾಗಿದೆ.

ಲಾಕ್‌ಡೌನ್‌ ನಂತರ ಹಳೆಯ ಕಾರುಗಳ ಬಗೆಗಿನ ವಿಚಾರಣೆಗಳು ಹೆಚ್ಚಾಗುತ್ತಿವೆ. ₹2 ಲಕ್ಷದೊಳಗಿನ ಕಾರುಗಳಿಗಂತೂ ಇನ್ನಿಲ್ಲದ ಬೇಡಿಕೆ ಇದೆ. ₹2.5 ಲಕ್ಷದವರೆಗಿನ ಕಾರುಗಳನ್ನು ಕೊಳ್ಳಲು ಬಯಸುವುದಾಗಿ ಗ್ರಾಹಕರು ಹೇಳುತ್ತಿದ್ದಾರೆ. ಆದರೆ, ಬಹುತೇಕ ಜನರು ಇದೇ ರೀತಿಯ ಆಲೋಚನೆ ಮಾಡುತ್ತಿರುವುದರಿಂದ ಹಳೆಯ ಕಾರುಗಳ ಕೊರತೆ ಎದುರಾಗಿದೆ ಎಂದು ಹಳೆಯ ಕಾರುಗಳ ಡೀಲರ್‌ ಹೇಳುತ್ತಾರೆ.

‘ಹಳೆಯ ಕಾರುಗಳು ಬೆಂಗಳೂರಿನಿಂದಲೇ ಹೆಚ್ಚಾಗಿ ತರಿಸಿಕೊಳ್ಳುತ್ತಿದ್ದೆವು. ಆದರೆ, ಅಲ್ಲಿಯೂ ಕಾರುಗಳನ್ನು ಮಾರುವುದಕ್ಕೆ ಜನರು ಮುಂದಾಗುತ್ತಿಲ್ಲ. ಹೀಗಾಗಿ ಕರಾವಳಿ ಜಿಲ್ಲೆಗಳಿಗೆ ಹಳೆಯ ಕಾರುಗಳ ಪೂರೈಕೆ ನಿಂತು ಹೋಗಿದೆ’ ಎಂದು ಏಜೆಂಟ್‌ ಧೀರಜ್‌ ತಿಳಿಸಿದ್ದಾರೆ.

ADVERTISEMENT

‘ಹಳೆಯ ಕಾರುಗಳಿಗೆ ಈ ರೀತಿಯ ಬೇಡಿಕೆ ಎದುರಾಗುತ್ತದೆ ಎಂದು ಅಂದುಕೊಂಡಿರಲಿಲ್ಲ. ₹3 ಲಕ್ಷದಿಂದ ₹5 ಲಕ್ಷದವರೆಗಿನ ಹಳೆಯ ಕಾರುಗಳಿಗೆ ಶೇ 50 ರಷ್ಟು ಬೇಡಿಕೆ ಹೆಚ್ಚಾಗಿದೆ. ಸುರಕ್ಷಿತ ಅಂತರ ಕಾಪಾಡುವ ನಿಯಮ ಇರುವುದರಿಂದ ಬಹುತೇಕ ಒಬ್ಬರು ಅಥವಾ ಇಬ್ಬರು ಕಾರಿನಲ್ಲಿ ಸಂಚರಿಸಬೇಕಾಗಿದೆ. ಹೀಗಾಗಿ ಜನರು ಹಳೆಯ ಕಾರುಗಳನ್ನೇ ಕೊಳ್ಳಲು ಮುಂದಾಗುತ್ತಿದ್ದಾರೆ’ ಎಂದು ರಾಯಲ್‌ ಕಾರ್ಸ್‌ನ ಸಿದ್ದೀಕ್‌ ಹೇಳುತ್ತಾರೆ.

‘ಜನರು ಸಾರ್ವಜನಿಕ ಸಾರಿಗೆಗಳಲ್ಲಿ ಪ್ರಯಾಣಿಕರು ಹಿಂಜರಿಯುತ್ತಿದ್ದಾರೆ. ಅದರಿಂದಾಗಿ ಹಳೆಯ ಕಾರುಗಳಿಗೆ ಬೇಡಿಕೆ ಹೆಚ್ಚಾಗಿದೆ. ₹8–10 ಲಕ್ಷದವರೆಗಿನ ಹಳೆಯ ಕಾರುಗಳು ಮಾರಾಟಕ್ಕೆ ಸಿಗುತ್ತಿಲ್ಲ’ ಎಂದು ಮಹೀಂದ್ರ ಫಸ್ಟ್ ಚಾಯ್ಸ್‌ನ ವಿನಾಯಕ್‌ ಹೇಳುತ್ತಾರೆ.

ಇಎಂಐ ಪಾವತಿಸಲು ಸಾಧ್ಯವಾಗದ ಜನರು ಮಾತ್ರ ಕಾರುಗಳನ್ನು ಮಾರಾಟ ಮಾಡುತ್ತಿದ್ದಾರೆ ಎನ್ನುವುದು ಕಾರ್‌ ಡೀಲರ್‌ಗಳ ಮಾತು.

ಕಾರುಗಳ ಜೊತೆಗೆ ಹಳೆಯ ಬೈಕ್‌ಗಳಿಗೂ ಬೇಡಿಕೆ ಹೆಚ್ಚಾಗಿದೆ. ಕಳೆದ ತಿಂಗಳು ಬೈಕ್‌ಗಳ ನೋಂದಣಿ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದೆ. ಇದರಿಂದಾಗಿ ಸ್ಕ್ರಾಪ್‌ಗೆ ಹೋಗಿದ್ದ ಬೈಕ್‌ಗಳನ್ನೂ ಗ್ಯಾರೇಜ್‌ಗಳಲ್ಲಿ ದುರಸ್ತಿ ಮಾಡಿ, ಮಾರಾಟಕ್ಕೆ ಸಿದ್ಧಗೊಳಿಸಲಾಗುತ್ತಿದೆ ಎನ್ನುವ ಮಾತುಗಳೂ ಕೇಳಿ ಬರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.