ಮಂಗಳೂರು: 'ಕೊಲೆಯಂತಹ ಕುಕೃತ್ಯ ಯಾರೇ ಮಾಡಿದರೂ ಅದು ಖಂಡನೀಯ. ಆದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂತಹ ಯಾವುದೇ ಘಟನೆ ನಡೆದರೂ ಬಿಜೆಪಿ ಅದನ್ನು ರಾಜಕೀಯ ದುರುದ್ದೇಶಕ್ಕೆ ಬಳಸಿಕೊಳ್ಳುತ್ತಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಆರೋಪಿಸಿದರು.
ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಬಜಪೆ ಸಮೀಪ ನಡೆದ ಸುಹಾಸ್ ಶೆಟ್ಟಿ ಕೊಲೆ ಖಂಡನೀಯ. ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಆದರೆ, ಇಂತಹ ಘಟನೆ ನಡೆದಾಗ ಕೋಮು ಪ್ರಚೋದನೆಯ ವಾತಾವರಣ ಸೃಷ್ಟಿಸುವ ಯತ್ನ ಬಿಜೆಪಿಗರು, ಅವರ ನಾಯಕರಿಂದ ನಡೆಯುತ್ತದೆ ಎಂದರು.
‘ನೀವೇನು ಕೊಲೆಯಾಗುವುದನ್ನೇ ಕಾಯ್ತಾ ಇರ್ತೀರಾ? ಕೊಲೆಯಾದ ವ್ಯಕ್ತಿಯ ಹಿನ್ನೆಲೆಯನ್ನು ಯಾವ ರೀತಿ ನೋಡುತ್ತೀರಾ? ಕೊಲೆ ಯತ್ನ, ದರೋಡೆಯಲ್ಲಿ ಭಾಗಿಯಾದ ರೌಡಿಗಳು ಜೈಲಿನಿಂದ ಬಿಡುಗಡೆಯಾಗುವಾಗ ಹಾರ, ತುರಾಯಿ ಹಾಕಿ ಸ್ವಾಗತಿಸುತ್ತೀರಿ, ವೈಭವೀಕರಣ ಮಾಡುವಾಗ ಯೋಚಿಸಬೇಕಲ್ಲವೇ? ಯಾವುದೇ ಕೊಲೆ ಆಗಲಿ, ಅದರ ಹಿಂದೆ ವೈಯಕ್ತಿಕ ದ್ವೇಷ ಇರಲಿ ಅಥವಾ ಇನ್ನಾವುದೇ ಕಾರಣ ಇರಲಿ ಕೋಮು ಪ್ರಚೋದನೆ ಮಾಡುವುದು ಎಷ್ಟರ ಮಟ್ಟಿಗೆ ಸರಿ’ ಎಂದು ಬಿಜೆಪಿಗರನ್ನು ಪ್ರಶ್ನಿಸಿದರು.
‘ಹಿಂದೆ ಪರೇಶ್ ಮೇಸ್ತ ಕೊಲೆಯಾದಾಗ ಅದನ್ನು ಸಿಬಿಐಗೆ ವಹಿಸಲಾಗಿತ್ತು. ಹಾಗೆಯೇ, ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಎನ್‌ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ) ಇರಲಿ ಅಥವಾ ಇನ್ನಾವುದೇ ಸಂಸ್ಥೆಗೆ ವಹಿಸಲು ಅಭ್ಯಂತರ ಇಲ್ಲ. ಆದರೆ, ಗುಂಪು ಗಲಭೆ ನಡೆದಾಗ ಖಂಡಿಸುವ ಬದಲು ಪ್ರಚೋದನೆ ನೀಡುವ ಮೂಲಕ ರಾಜ್ಯದ ಕಾನೂನು ವ್ಯವಸ್ಥೆಯನ್ನು ಯಾವ ಕಡೆಗೆ ಕೊಂಡೊಯ್ಯುತ್ತಿದ್ದೀರಿ? ಸುಹಾಸ್ ಮೇಲೆ ಐದು ಪ್ರಕರಣಗಳು ಇವೆ. ಅವುಗಳಲ್ಲಿ ಮೂರು ಹಿಂದೂಗಳ ಮೇಲಿನ ಹಲ್ಲೆ ಪ್ರಕರಣಗಳು. ಕೀರ್ತಿ ಎಂಬ ಯುವಕನ ಕೊಲೆಯಲ್ಲಿ ಸುಹಾಸ್ ಆರೋಪಿ. ಕೀರ್ತಿ ಕೊಲೆಯನ್ನು ಯಾಕೆ ಖಂಡಿಸಿಲ್ಲ. ಆತ ದಲಿತ ಎಂಬ ಕಾರಣಕ್ಕೆ ಹಿಂದೂ ಎಂದು ಒಪ್ಪಿಕೊಳ್ಳುವುದಿಲ್ಲವಾ’ ಎಂದು ಪ್ರಶ್ನಿಸಿದರು.
‘ಬಿಜೆಪಿ ಸರ್ಕಾರ ಇರುವಾಗಲೇ ಸುಹಾಸ್ ವಿರುದ್ಧ ರೌಡಿಶೀಟರ್ ತೆರೆಯಲಾಗಿದೆ. ರೌಡಿಶೀಟರ್ ಹೊಂದಿರುವವನಿಗೆ ಹಿಂದೂ ನಾಯಕನ ಪಟ್ಟ ಕಟ್ಟುತ್ತಿದ್ದೀರಾ? ಇದರಲ್ಲಿ ಸರ್ಕಾರ ಅಸ್ಥಿರಗೊಳಿಸುವ ಉದ್ದೇಶವಿದೆ’ ಎಂದು ಆರೋಪಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಸೃಷ್ಟಿಸುವವರ ಜೊತೆಗೆ ಅದನ್ನು ಫಾರ್ವರ್ಡ್ ಮಾಡುವವರ ಮೇಲೆಯೂ ಕ್ರಮ ಕೈಗೊಳ್ಳುವಂತೆ ಪೊಲೀಸ್ ಕಮಿಷನರ್‌ಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಕೆ, ಪ್ರಮುಖರಾದ ಪದ್ಮರಾಜ್ ಪೂಜಾರಿ, ಮಿಥುನ್ ರೈ, ಇನಾಯತ್ ಅಲಿ, ರಕ್ಷಿತ್ ಶಿವರಾಂ, ಜಿ.ಎ. ಬಾವಾ, ಶಾಲೆಟ್ ಪಿಂಟೊ, ಲಾರೆನ್ಸ್ ಡಿಸೋಜ, ಸುಹಾನ್ ಆಳ್ವ, ಶುಭೋದಯ ಆಳ್ವ, ಶಾಹುಲ್ ಹಮೀದ್, ಕೃಷ್ಣಪ್ಪ, ಬಶೀರ್ ಇದ್ದರು.
‘ಪೇಜಾವರ ಶ್ರೀ ಮತ್ತೊಮ್ಮೆ ಭಗವದ್ಗೀತೆ ಓದಲಿ’
ಶ್ರೀಕೃಷ್ಣ ಮಠಕ್ಕೆ ಮುಸ್ಲಿಮರ ಕೊಡುಗೆ ಇದೆ ಎಂದು ಹೇಳಿದ್ದ ಪೇಜಾವರ ಮಠದ ಹಿಂದಿನ ಶ್ರೀಗಳು ಮುಸ್ಲಿಮರಿಗೆ ಇಫ್ತಾರ್ ಕೂಟವನ್ನೂ ನಡೆಸಿದ್ದರು. ಈಗಿನ ಪೇಜಾವರ ಶ್ರೀಗಳು ಹಿಂದೂಸ್ತಾನದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲ ಎಂದಿದ್ದಾರೆ. ಹಿಂದೂಗಳ ರಕ್ಷಣೆಯ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದಿರುವ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದೆ. ಪ್ರಧಾನಿ ಗೃಹ ಸಚಿವ ಎಲ್ಲರೂ ಹಿಂದೂಗಳು ಹಾಗಿರುವ ಹಿಂದೂಗಳಿಗೆ ರಕ್ಷಣೆ ಇಲ್ಲವೆಂದರೆ ಅವರ ರಾಜೀನಾಮೆ ಕೇಳಿ ಎಂದು ಹೇಳಿದರು. ಶ್ರೀಕೃಷ್ಣನ ಹೆಸರಿನ ಮಠದಲ್ಲಿದ್ದು ಒಂದು ಕೋಮಿನವರ ತುಷ್ಟೀಕರಣ ಮಾಡ್ತಿದ್ದಾರೆ ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ. ಹಾಗೆ ಹೇಳುವ ಮೊದಲು ತಾವು ಮತ್ತೊಮ್ಮೆ ಭಗವದ್ಗೀತೆಯನ್ನು ಓದಬೇಕು. ಮಠಾಧೀಶರು ರಾಜಕೀಯದ ಮಾತು ಬಿಟ್ಟರೆ ಉತ್ತಮ. ಮಠದ ಬಗ್ಗೆ ಜನರಿಗೆ ಇರುವ ಗೌರವ ಉಳಿಸಿಕೊಳ್ಳಬೇಕು ಎಂದು ಭಂಡಾರಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.