ADVERTISEMENT

ಗುದದ್ವಾರದಲ್ಲಿ ಅಡಗಿಸಿ ಚಿನ್ನ ಕಳ್ಳಸಾಗಣೆ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2020, 15:00 IST
Last Updated 17 ಫೆಬ್ರುವರಿ 2020, 15:00 IST

ಮಂಗಳೂರು: ದುಬೈನಿಂದ ಗುದದ್ವಾರದಲ್ಲಿ ಚಿನ್ನ ಅಡಗಿಸಿಟ್ಟುಕೊಂಡು ಕಳ್ಳಸಾಗಣೆ ಮಾಡಿಕೊಂಡು ಬಂದಿದ್ದ ಇಬ್ಬರನ್ನು ಬಜ್ಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಸಂಜೆ ಬಂಧಿಸಿರುವ ಕಸ್ಟಮ್ಸ್‌ ಅಧಿಕಾರಿಗಳು, ₹ 58.95 ಲಕ್ಷ ಮೌಲ್ಯದ 1 ಕೆ.ಜಿ. 452 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ಕೇರಳದ ಮಲಪ್ಪುರಂ ಜಿಲ್ಲೆಯ ಚಪ್ಪತ್ತೋಡಿ ನಿವಾಸಿ ಮುಹಮ್ಮದ್ ಸ್ವಲೀಹ್‌ (22) ಎಂಬಾತ ಭಾನುವಾರ ಸಂಜೆ ದುಬೈನಿಂದ ಸ್ಪೈಸ್‌ ಜೆಟ್‌ ವಿಮಾನದಲ್ಲಿ ಬಂದಿಳಿದಿದ್ದ. ಈತ ಪೇಸ್ಟ್‌ ರೂಪದಲ್ಲಿದ್ದ ಚಿನ್ನವನ್ನು ಗುದದ್ವಾರದಲ್ಲಿ ಅಡಗಿಸಿಟ್ಟುಕೊಂಡು ಬಂದಿದ್ದ. ನುಮಾನದ ಮೇಲೆ ಈತನನ್ನು ತೀವ್ರ ತಪಾಸಣೆಗೆ ಒಳಪಡಿಸಿದಾಗ ಗುದದ್ವಾರದಲ್ಲಿ ಚಿನ್ನ ಪತ್ತೆಯಾಯಿತು. ಆತನಿಂದ ₹ 32.35 ಲಕ್ಷ ಮೌಲ್ಯದ 797 ಗ್ರಾಂ. ಚಿನ್ನವನ್ನು ವಶಪಡಿಸಿಕೊಳ್ಳಲಾಯಿತು.

ಇನ್ನೊಂದು ಪ್ರಕರಣದಲ್ಲಿ ಭಾನುವಾರ ಸಂಝೆ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನದಲ್ಲಿ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕೇರಳದ ಕಣ್ಣೂರು ಜಿಲ್ಲೆಯ ಚೆರುವಂಚೇರಿ ನಿವಾಸಿ ಮೊಹಮ್ಮದ್ ನಿಷಾದ್‌ ಎಂಬಾತ ಕೂಡ ಗುದದ್ವಾರದಲ್ಲಿ ಅಡಗಿಸಿಟ್ಟುಕೊಂಡು ಚಿನ್ನ ಕಳ್ಳಸಾಗಣೆ ಮಾಡಿಕೊಂಡು ಬಂದಿದ್ದ. ಈತನನ್ನೂ ತಪಾಸಣೆ ನಡೆಸಿದಾಗ ಚಿನ್ನ ಪತ್ತೆಯಾಯಿತು. ಆತನಿಂದ ₹ 26.59 ಲಕ್ಷ ಮೌಲ್ಯದ 655 ಗ್ರಾಂ. ಚಿನ್ನ ವಶಪಡಿಸಿಕೊಳ್ಳಲಾಗಿದೆ.

ADVERTISEMENT

ಕಸ್ಟಮ್ಸ್‌ ಸೂಪರಿಂಟೆಂಡೆಂಟ್‌ಗಳಾದ ಶ್ರೀಲಕ್ಷ್ಮಿ, ಗೋಪಿನಾಥ್‌, ಸವಿತಾ ಕೋಟ್ಯಾನ್‌, ರಾಮಾವ್ತಾರ್‌ ಮೀನಾ ಮತ್ತು ಇನ್‌ಸ್ಪೆಕ್ಟರ್‌ ಸಮಲ ಮೋಹನ್‌ ರೆಡ್ಡಿ ಆರೋಪಿಗಳ ತಪಾಸಣೆ, ಬಂಧನ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಇಬ್ಬರೂ ಆರೋಪಿಗಳನ್ನು ಒಂದನೇ ಹೆಚ್ಚುವರಿ ಮುಖ್ಯ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಕಸ್ಟಮ್ಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.