ADVERTISEMENT

ವಿಚಾರವಾದಿ ನರೇಂದ್ರ ನಾಯಕ್ ಸಹಿತ ನಾಲ್ವರ ಅಂಗರಕ್ಷರನ್ನು ಹಿಂಪಡೆದ ಪೊಲೀಸ್‌ ಇಲಾಖೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2023, 14:46 IST
Last Updated 30 ಮಾರ್ಚ್ 2023, 14:46 IST

ಮಂಗಳೂರು: ಜೀವ ಬೆದರಿಕೆ ಎದುರಿಸುತ್ತಿದ್ದ ವಿಚಾರವಾದಿ ಪ್ರೊ.ನರೇಂದ್ರ ನಾಯಕ್‌ ಸೇರಿದಂತೆ ನಾಲ್ವರಿಗೆ ಒದಗಿಸಿದ್ದ ಅಂಗರಕ್ಷಕ ಸೇವೆಯನ್ನು ನಗರ ಕಮಿಷನರೇಟ್‌ನ ಪೊಲೀಸರು ಹಿಂಪಡೆದುಕೊಂಡಿದ್ದಾರೆ.

’ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಬೆದರಿಕೆ ಎದುರಿಸುತ್ತಿದ್ದ ಐವರಿಗೆ ಪೊಲೀಸ್‌ ಸಿಬ್ಬಂದಿಯನ್ನು ಅಂಗರಕ್ಷಕರನ್ನಾಗಿ ಒದಗಿಸಲಾಗಿತ್ತು. ಇವರಲ್ಲಿ ಒಬ್ಬರು ಅಂಗರಕ್ಷಕ ಸಿಬ್ಬಂದಿ ಬೇಡ ಎಂದು ತಿಳಿಸಿದ್ದರು. ಉಳಿದ ನಾಲ್ವರಿಗೆ ಇರುವ ಬೆದರಿಕೆಗೆ ಸಂಬಂಧಿಸಿ ಈಚೆಗೆ ಪರಾಮರ್ಶೆ ನಡೆಸಲಾಗಿದ್ದು, ಅವರಿಗೆ ಒದಗಿಸಿದ್ದ ಅಂಗರಕ್ಷಕನ್ನು ಸದ್ಯಕ್ಕೆ ಹಿಂಪಡೆಯಲು ತೀರ್ಮಾನಿಸಲಾಗಿದೆ’ ಎಂದು ಡಿಸಿ‌ಪಿ ಅಂಶುಕುಮಾರ್ ತಿಳಿಸಿದ್ದಾರೆ. ಯಾರಿಗೆ ಯಾವ ಕಾರಣಕ್ಕೆ ಅಂಗರಕ್ಷಕ ಸೇವೆ ಒದಗಿಸಲಾಗಿತ್ತು ಎಂಬುದನ್ನು ಅವರು ಬಹಿರಂಗಪಡಿಸಲು ಇಚ್ಛಿಸಲಿಲ್ಲ.

ಈ ಕುರಿತು ಪ್ರತಿಕ್ರಿಯಿಸಿದ ಪ್ರೊ.ನರೇಂದ್ರ ನಾಯಕ್‌, ‘ಅಂಗರಕ್ಷಕನನ್ನು ಒದಗಿಸುವಂತೆ ನಾನೇನು ಪೊಲೀಸರ ಬಳಿ ಕೇಳಿರಲಿಲ್ಲ. ಅವರಾಗಿಯೇ ಒದಗಿಸಿದ್ದರು. ವಿಧಾನಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಯಾದ ಒಂದೇ ಗಂಟೆಯಲ್ಲಿ ಅಂಗರಕ್ಷಕನನ್ನು ಹಿಂದಕ್ಕೆ ಕರೆಸಿಕೊಂಡಿದ್ದಾರೆ’ ಎಂದು ‘ಪ್ರಜಾವಾಣಿ‘ಗೆ ತಿಳಿಸಿದರು.

ADVERTISEMENT

‘ನನ್ನಂತೆಯೇ ಬೆದರಿಕೆ ಇದ್ದ ಬೇರೆ ಜಿಲ್ಲೆಗಳ ಕೆಲವು ವ್ಯಕ್ತಿಗಳಲ್ಲಿ ವಿಚಾರಿಸಿದೆ. ಅವರಿಗೆ ಒದಗಿಸಿರುವ ಅಂಗರಕ್ಷಕರನ್ನು ಹಿಂಪಡೆದಿಲ್ಲ. ನನಗೆ ಬೆದರಿಕೆ ಇಲ್ಲದಿದ್ದರೆ ಏಳು ವರ್ಷ ಅಂಗರಕ್ಷಕರನ್ನು ಏಕೆ ಒದಗಿಸಿದರೋ ಗೊತ್ತಿಲ್ಲ. ಈ ಸೇವೆ ಮುಂದುವರಿಸಲು ಹಣ ಪಾವತಿಸಬೇಕು ಎಂದು ಹೇಳಿದ್ದರು. ನಾನು ನಿವೃತ್ತ ಉದ್ಯೋಗಿ. ಅಷ್ಟು ಆರ್ಥಿಕ ಸಾಮರ್ಥ್ಯ ಇಲ್ಲ ಎಂದು ಪ್ರತಿಕ್ರಿಯಿಸಿದ್ದೆ. ಬೆದರಿಕೆ ಇದೆಯೋ ಇಲ್ಲವೋ ಎಂದು ತಲೆ ಕೆಡೆಸಿಕೊಳ್ಳುವುದಿಲ್ಲ. ನನ್ನ ಕೆಲಸವನ್ನು ನಾನು ಮುಂದುವರಿಸುತ್ತೇನೆ. ವೈಜ್ಞಾನಿಕ ಮನೋಭಾವನೆ ಮೂಡಿಸುವ ಹಾಗೂ ಅನ್ಯಾಯದ ವಿರುದ್ಧದ ನನ್ನ ಹೋರಾಟ ನಿಲ್ಲದು’ ಎಂದು ಅವರು ಹೇಳಿದರು.

ವಿಚಾರವಾದಿಗಳಾದ ನರೇಂದ್ರ ದಾಭೋಲ್ಕರ್‌, ಗೋವಿಂದ ಪಾನ್ಸ‌ರೆ, ಎಂ.ಎಂ.ಕಲ್ಬುರ್ಗಿ ಹಾಗೂ ಗೌರಿ ಲಂಕೇಶ್‌ ಹತ್ಯೆಗೊಳಗಾದ ಬಳಿಕ ಪೊಲೀಸ್‌ ಇಲಾಖೆ ನರೇಂದ್ರ ನಾಯಕ್‌ ಅವರಿಗೆ 2016ರ ಜೂನ್‌ನಿಂದ ಅಂಗರಕ್ಷಕನನ್ನು ಒದಗಿಸಿತ್ತು.

ನರೇಂದ್ರ ನಾಯಕರ್‌ ಅವರ ಅಂಗರಕ್ಷಕನನ್ನು ಹಿಂದಕ್ಕೆ ಕರೆಸಿಕೊಂಡಿದ್ದಕ್ಕೆ ಡಿವೈಎಫ್‌ಐ ಖಂಡನೆ ವ್ಯಕ್ತಪಡಿಸಿದೆ.

‘ವೈಜ್ಞಾನಿಕ ಮನೋಭಾವನೆ ಬೆಳೆಸಲು ಶ್ರಮಿಸುತ್ತಿದ್ದ ಪ್ರೊ.ನರೇಂದ್ರ ನಾಯಕ್‌ ಬಲಪಂಥೀಯರಿಂದ ಬೆದರಿಕೆ ಎದುರಿಸುತ್ತಿದ್ದರು. ಅವರ ಜೀವಕ್ಕೆ ತೊಂದರೆಯಾದರೆ ಪೊಲೀಸ್ ಇಲಾಖೆ ಹಾಗೂ ಸರ್ಕಾರವೇ ನೇರ ಹೊಣೆ’ ಎಂದು ಡಿವೈಎಫ್‌ಐ ಜಿಲ್ಲಾ ಘಟಕದ ಕಾರ್ಯದರ್ಶಿ ಸಂತೋಷ್‌ ಬಜಾಲ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.