ADVERTISEMENT

ಕಲುಷಿತ ನೀರು: ಮಂಗಳೂರು ಪಾಲಿಕೆಗೆ ಹೈಕೋರ್ಟ್‌ ಛೀಮಾರಿ

ಪಾಲಿಕೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ಕೆಎಸ್‌ಪಿಸಿಬಿಗೆ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2021, 22:21 IST
Last Updated 24 ಸೆಪ್ಟೆಂಬರ್ 2021, 22:21 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಮಂಗಳೂರು ನಗರದಲ್ಲಿ ಕುಡಿಯುವ ನೀರಿಗೆ ಕಲುಷಿತ ನೀರು ಸೇರ್ಪಡೆ ಆಗುತ್ತಿರುವುದನ್ನು ತಡೆಯದ ಮಂಗಳೂರು ನಗರ ಪಾಲಿಕೆಗೆ(ಎಂಸಿಸಿ) ಛೀಮಾರಿ ಹಾಕಿರುವ ಹೈಕೋರ್ಟ್‌, ಪಾಲಿಕೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ(ಕೆಎಸ್‌ಪಿಸಿಬಿ) ನಿರ್ದೇಶನ ನೀಡಿದೆ.

‘ಪಚ್ಚನಾಡಿ ತ್ಯಾಜ್ಯ ಶುದ್ಧೀಕರಣ ಘಟಕದಿಂದ ಫಲ್ಗುಣಿ ನದಿಗೆ ಕಲುಷಿತ ನೀರು ಹರಿ ಬಿಡಲಾಗುತ್ತಿದೆ ಎಂಬುದನ್ನು ಕೆಎಸ್‌ಪಿಸಿಬಿ ವರದಿ ಬಹಿರಂಗಪಡಿಸಿದೆ. ತಡೆಯುವಲ್ಲಿ ಪಾಲಿಕೆ ಕಣ್ಮುಚ್ಚಿ ಕುಳಿತಿದೆ. ಮಂಗಳೂರಿನ ನಿವಾಸಿಗಳಿಗೆ ಪಾಲಿಕೆ ಕಲುಷಿತ ನೀರು ಕುಡಿಸುತ್ತಿದ್ದರೆ ನ್ಯಾಯಾಲಯ ಮೂಕ ಪ್ರೇಕ್ಷಕರಾಗಿರಲು ಸಾಧ್ಯವಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿತು.

ಮಳವೂರು ನೀರು ಸಂಸ್ಕರಣಾ ಘಟಕದಲ್ಲಿ ನೀರಿನ ಗುಣಮಟ್ಟಕ್ಕೆ ಸಂಬಂಧಿಸಿದಂತೆ ‘ಮುಗ್ರೊಡಿ ಕನ್‌ಸ್ಟ್ರಕ್ಷನ್‌’ ಎಂಬ ಸಂಸ್ಥೆ ಸಲ್ಲಿಸಿದ ಪರೀಕ್ಷಾ ವರದಿಯನ್ನು ಸರ್ಕಾರ ಸಲ್ಲಿಸಿತು. 40 ವರ್ಷದಷ್ಟು ಹಳೆಯದಾದ ಪಚ್ಚನಾಡಿ ಘಟಕವನ್ನು ಹಂತ–ಹಂತವಾಗಿ ಸ್ಥಳಾಂತರ ಮಾಡಬೇಕಿದೆ ಎಂದು ಸರ್ಕಾರದ ಪರ ವಕೀಲರು ತಿಳಿಸಿದರು.

ADVERTISEMENT

‘ನೀರಿನ ಗುಣಮಟ್ಟ ಪರೀಕ್ಷೆಗೆ ‌ಯಾವ ಕಾನೂನಿನ ಅಡಿಯಲ್ಲಿ ಖಾಸಗಿ ಸಂಸ್ಥೆಯನ್ನು ನೇಮಕ ಮಾಡಲಾಯಿತು ಎಂಬುದು ಅರ್ಥವಾಗದ ಸಂಗತಿ’ ಎಂದು ಛೀಮಾರಿ ಹಾಕಿದ ಪೀಠ, ವರದಿ ತಿರಸ್ಕರಿಸಿತು.‌

ಪಾಲಿಕೆಯ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೆಎಸ್‌ಪಿಸಿಬಿಗೆ ಪೀಠ ನಿರ್ದೇಶನ ನೀಡಿತು. ನೀರಿನ ಗುಣಮಟ್ಟ ಮತ್ತು ತ್ಯಾಜ್ಯ ಸ್ಥಳಾಂತರದ ಕುರಿತು ತಿಂಗಳಿಗೊಮ್ಮೆ ವರದಿ ಸಲ್ಲಿಸುವಂತೆ ಕೆಎಸ್‌ಪಿಸಿಬಿ ಮತ್ತು ಪಾಲಿಕೆಗೆ ನಿರ್ದೇಶನ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.