ADVERTISEMENT

ಜಮೀರ್‌ ರಾಜೀನಾಮೆ ನೀಡಿ ತನಿಖೆ ಎದುರಿಸಲಿ: ಸಿ.ಟಿ.ರವಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಜೂನ್ 2025, 11:27 IST
Last Updated 25 ಜೂನ್ 2025, 11:27 IST
ಸಿ.ಟಿ.ರವಿ
ಸಿ.ಟಿ.ರವಿ   

ಮಂಗಳೂರು: 'ವಸತಿ ಇಲಾಖೆಯ‌ ಭ್ರಷ್ಟಾಚಾರದ ಬಗ್ಗೆ ತನಿಖೆ ಆಗಬೇಕು. ಅಲ್ಲಿಯವೆಗೆ ವಸತಿ ಸಚಿವ ಜಮೀರ್‌ ಅಹಮದ್ ಖಾನ್ ಅವರು ರಾಜೀನಾಮೆ ನೀಡಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಒತ್ತಾಯಿಸಿದರು.

ಇಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ನಾನು ಪರಿಶುದ್ಧ ಅಲ್ಲ, ಪ್ರಮಾಣಿಕ ಅಲ್ಲ. ಆದರೆ, ಬಡವರ ದುಡ್ಡು ತಿಂದಿಲ್ಲ ಎಂದು ಜಮೀರ್ ಅವರೇ ಒಪ್ಪಿದ್ದಾರೆ. ಹಾಗಾದರೆ ಅವರು ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಬಳಸಬೇಕಾದ ಹಣವನ್ನು ತಿಂದಿದ್ದಾರೆಯೇ. ಅವರ ಅಧೀನದ ಅಧಿಕಾರಿಗಳು ದುಡ್ಡು ಪಡೆದರೂ ಅದರ ಉತ್ತರದಾಯಿತ್ವ ಅವರದೇ ಅಲ್ಲವೇ. ಆ ಅಧಿಕಾರಿಗಳನ್ನು ನೇಮಿಸಿಕೊಂಡಿದ್ದು ಯಾರು’ ಎಂದು ಪ್ರಶ್ನಿಸಿದರು.

‘ರಾಜೀನಾಮೆ ಕೊಟ್ಟು ತನಿಖೆ ಎದುರಿಸಿದರೆ ಜೈಲಿಗೆ ಹೋಗಬೇಕಾಗುತ್ತದೆ ಎಂಬ ಭಯ ಅವರಿಗೆ ಇದ್ದಂತಿದೆ. ಅವರು ಆಣೆ ಪ್ರಮಾಣ ಮಾಡುವ ಅಗತ್ಯವಿಲ್ಲ. ರಾಜೀನಾಮೆ ನೀಡಿ ತನಿಖೆ ಎದುರಿಸಿದರೆ ಸಾಕು’ ಎಂದರು.

ADVERTISEMENT

‘ರಾಜ್ಯ ಸರ್ಕಾರದ ಬಳಿ ದುಡ್ಡಿಲ್ಲ ಎನ್ನುವುದು ಸತ್ಯ. ಈ ಸಾಲಿನ ಬಜೆಟ್‌ನ ಅಂಕಿ ಅಂಶಗಳ ಪ್ರಕಾರ ರಾಜ್ಯ ಸರ್ಕಾರದ ಒಟ್ಟು ಸಾಲ ₹ 7.34 ಲಕ್ಷ ಕೋಟಿ ಗಳಷ್ಟಿದೆ. ಈ ವರ್ಷದ ಅಂದಾಜು ಸಾಲ ₹ 1.16 ಲಕ್ಷ ಕೋಟಿಗಳಷ್ಟಿದೆ. ಈ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 69 ಅಗತ್ಯ ವಸ್ತುಗಳ ದರ ಏರಿಕೆ ಆಗಿದೆ. ಆರ್‌ಟಿಸಿ ಪಡೆಯಲು ಹಿಂದೆ ₹ 15 ಶುಲ್ಕ ಇದ್ದುದು ಈಗ ₹ 30ಕ್ಕೆ ಏರಿಕೆ ಆಗಿದೆ. ಮುದ್ರಾಂಕ ಶುಲ್ಕ, ಅಬಕಾರಿ ಶುಲ್ಕಗಳೂ ಹೆಚ್ಚಳವಾಗಿವೆ. ಜುಲೈ 1ರಿಂದ ಅಬಕಾರಿ ಇಲಾಖೆಯ ಸಿಎಲ್‌ 7, ಸಿಎಲ್ 9 ಸನ್ನದು ಶುಲ್ಕ ಶೇ 50 ರಷ್ಟು ಹೆಚ್ಚಾಗಲಿದೆ. ಪ್ರತಿ ಲೀಟರ್‌ ಡೀಸೆಲ್ ಮೇಲೆ ₹ 5.95 ಹಾಗೂ ಪೆಟ್ರೋಲ್‌ ಮೇಲೆ ₹ 3.95 ಸೆಸ್ ಜಾಸ್ತಿ ಮಾಡಿದ್ದಾರೆ. ಖಜಾನೆ ತುಂಬಿ ತುಳುಕುತ್ತಿದ್ದರೆ ಸರ್ಕಾರ ಬೆಲೆ ಏರಿಕೆಯ ಬರೆಯನ್ನು ಏಕೆ ಹಾಕುತ್ತಿತ್ತು. ಸಾಲ ಏಕೆ ಮಾಡುತ್ತಿತ್ತು’ ಎಂದು ಪ್ರಶ್ನಿಸಿದರು.

‘ರಾಜ್ಯದ ಬೊಕ್ಕಸವನ್ನು ಕಾಂಗ್ರೆಸ್ ಲೂಟಿ ಮಾಡುತ್ತಿದೆ. ಅಭಿವೃದ್ಧಿ ನಿಂತ ನೀರಾಗಿದೆ. ನಡೆಯುತ್ತಿರುವುದು ಭ್ರಷ್ಟಾಚಾರ ಮಾತ್ರ. ಶಾಸಕ ರಾಜು ಕಾಗೆ ಅವರ ಮಾತುಗಳೇ ಇದಕ್ಕೆ ಸ್ಪಷ್ಟ ನಿದರ್ಶನ. ಎರಡು ವರ್ಷಗಳ ಹಿಂದೆ ಭೂಮಿ ಪೂಜೆ ಮಾಡಿದ ಕಾಮಗಾರಿಯೇ ಇನ್ನೂ ಆರಂಭವಾಗಿಲ್ಲ. ನಾವು ಏಕೆ ಶಾಸಕರಾಗಿರಬೇಕು ಎಂದು ಅವರು ಪ್ರಶ್ನಿಸಿದ್ದಾರೆ. ಶಾಸಕ ಬಸವರಾಜ ರಾಯರಡ್ಡಿ ಹೇಳಿದಂತೆ ಕರ್ನಾಟಕ ಭ್ರಷ್ಟಾಚಾರದಲ್ಲಿ ನಂಬರ್ ವನ್‌ ಆಗಿದೆ. ಬಡವರು ಮನೆ ಪಡೆಯಲು ₹ 30 ಸಾವಿರ ಲಂಚ ಕೊಡಬೇಕಾದ ಸ್ಥಿತಿ ಇದೆ ಎಂದು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್‌.ಪಾಟೀಲ ಆರೋಪಿಸಿದ್ದಾರೆ. ಎನ್.ವೈ.ಗೋಪಾಲಕೃಷ್ಣ ಅವರು, ‘ನಮಗೆ ಚರಂಡಿ ಮಾಡಿಸುವ ಯೋಗ್ಯತೆಯೂ ಇಲ್ಲ’ ಎಂದು ಆರೋಪ ಮಾಡಿದ್ದಾರೆ. ಈ ಎಲ್ಲ ಆರೋಪಗಳನ್ನು ಮಾಡಿದ್ದು ಆಡಳಿತ ಪಕ್ಷದವರು’ ಎಂದರು.

‘ಆರೋಪ ಮಾಡಿದ ಶಾಸಕರನ್ನು ಕರೆದು ಮಾತನಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅವರನ್ನು ಕರೆದು ಮಾತನಾಡಲು ಇದು ಪ್ರೇಮವೈಫಲ್ಯದ ಹತಾಶೆಯ ವಿಷಯವೋ, ಖಾಸಗಿ ವಿಷಯವೋ ಅಲ್ಲ. ಇದು ಭ್ರಷ್ಟಾಚಾರಕ್ಕೆ ಸಂಬಂಧಿಸಿದ ವಿಷಯ. ಭ್ರಷ್ಟಾಚಾರದ ಆರೋಪ ಹೊತ್ತ ಮಂತ್ರಿಯನ್ನು ವಜಾ ಮಾಡುವ ಮೂಲಕ ಮುಖ್ಯಮಂತ್ರಿಯವರು ಜನರಿಗೆ ಮತ್ತು ಭ್ರಷ್ಟಾಚಾರಿಗಳಿಗೆ ಸ್ಪಷ್ಟ ಸಂದೇಶ ನೀಡಬೇಕಿತ್ತು. ಆದರೆ ಅವರು ಅದನ್ನು ಮಾಡುವುದಿಲ್ಲ. ಏಕೆಂದರೆ ಅವರ ಮೇಲೆಯೇ ಭ್ರಷ್ಟಾಚಾರದ ಆರೋಪ ಇದೆ’ ಎಂದರು.

‘ಸರ್ಕಾರದ ಖಜಾನೆ ಖಾಲಿಯಾಗಿದೆ, ಸಿದ್ದರಾಮಯ್ಯ ಅವರ ಹತ್ತಿರ ದುಡ್ಡಿಲ್ಲ ಎಂದು ನಿನ್ನೆ ತಾನೆ ಹೇಳಿದ್ದ ಗೃಹ ಸಚಿವ ಜಿ.ಪರಮೇಶ್ವರ ಅವರು, ಇವತ್ತು ನಾನು ಹಾಗೆ ಹೇಳಿಯೇ ಇಲ್ಲ ಎನ್ನುತ್ತಿದ್ದಾರೆ. ದಿನಕ್ಕೊಂದೊಂದು ರೀತಿ ಹೇಳಿಕೆ ನೀಡಿ ಜನರ ದೃಷ್ಟಿಯಲ್ಲಿ ಸಣ್ಣವರಾಗಬಾರದು. ಅದರ ಬದಲು ಇರುವ ಸತ್ಯವನ್ನು ಒಪ್ಪಿಕೊಳ್ಳುವುದು ಒಳ್ಳೆಯದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.