ADVERTISEMENT

ಕಡಲ್ಕೊರೆತ: ಶಾಶ್ವತ ಪರಿಹಾರಕ್ಕೆ ಒತ್ತು

ಕಾಮಗಾರಿ ಪರಿಶೀಲಿಸಿದ ಪ್ರಧಾನ ಕಾರ್ಯದರ್ಶಿ ಕಪಿಲ್ ಮೋಹನ್

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2020, 13:52 IST
Last Updated 16 ಸೆಪ್ಟೆಂಬರ್ 2020, 13:52 IST
ಉಳ್ಳಾಲದ ಮುಕ್ಕಚೇರಿ ಕಡಲ ತೀರದಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಬುಧವಾರ ಕಪಿಲ್‌ ಮೋಹನ್‌ ಪರಿಶೀಲಿಸಿದರು.
ಉಳ್ಳಾಲದ ಮುಕ್ಕಚೇರಿ ಕಡಲ ತೀರದಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಬುಧವಾರ ಕಪಿಲ್‌ ಮೋಹನ್‌ ಪರಿಶೀಲಿಸಿದರು.   

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಡಲ್ಕೊರೆತ ತೀವ್ರವಾಗಿದ್ದು, ಸಮುದ್ರ ಭಾಗದಲ್ಲಿ ವಾಸವಾಗಿರುವ ಜನರಲ್ಲಿ ಆಂತಕ ಮನೆ ಮಾಡಿದೆ. ಕಡಲ್ಕೊರೆತ ಸಮಸ್ಯೆಯ ಹಾನಿ ತಡೆಗಟ್ಟಲು ಸರ್ಕಾರದಿಂದ ಶಾಶ್ವತವಾದ ಪರಿಹಾರ ನೀಡುವ ನಿಟ್ಟಿನಲ್ಲಿ ಯೋಜನೆಯನ್ನು ಅದಷ್ಟು ಬೇಗನೆ ರೂಪಿಸಲಾಗುವುದು ಎಂದು ಮೂಲಸೌಲಭ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಮ್ಯಾರಿಟೈಮ್ ಬೋರ್ಡ್ ಸಿಇಒ ಕಪಿಲ್ ಮೋಹನ್ ತಿಳಿಸಿದ್ದಾರೆ.

ಕಡಲ್ಕೊರೆತ ನಿಯಂತ್ರಣಕ್ಕೆ ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ವಿವಿಧ ಕಾಮಗಾರಿಗಳನ್ನು ಬುಧವಾರ ಪರಿಶೀಲಿಸಿದ ನಂತರ ಅವರು ಮಾತನಾಡಿದರು.

ಉನ್ನತ ತಾಂತ್ರಿಕತೆಯ ನೆರವಿನಿಂದ ಕಡಲ್ಕೊರೆತಕ್ಕೆ ಶಾಶ್ವತವಾದ ಯೋಜನೆ ರೂಪಿಸಿ ಜಾರಿಗೆ ತರಲಾಗುವುದು. ಉಳ್ಳಾಲ ಮುಕ್ಕಚ್ಚೇರಿ ಬಳಿ ಈ ರೀತಿಯ ಕಾಮಗಾರಿ ನಡೆಸಲಾಗಿದ್ದು, ಇದರಿಂದ ಈ ವರ್ಷ ಕಡಲ್ಕೊರೆತ ಸಮಸ್ಯೆ ಎದುರಾಗಿಲ್ಲ ಎಂದು ಹೇಳಿದರು.

ADVERTISEMENT

ಉಳ್ಳಾಲ ಮುಕ್ಕಚ್ಚೇರಿ ಕಡಲ ತೀರದಲ್ಲಿ ಎಡಿಬಿ ನೆರವಿನ ಕಾಮಗಾರಿಯ ಅಡಿಯಲ್ಲಿ ನಡೆಯುತ್ತಿರುವ ₹18.02 ಕೋಟಿ ವೆಚ್ಚದ 635 ಮೀಟರ್ ಮತ್ತು 10 ಮೀಟರ್‌ ಸಂರಕ್ಷಣೆ ತಡೆಗೋಡೆಯ ಪುನರ್ವಸತಿ ಯೋಜನೆಯ ಕಾಮಗಾರಿಯನ್ನು ಅವರು ಪರಿಶೀಲನೆ ನಡೆಸಿದರು.

ಕಾಮಗಾರಿಯಲ್ಲಿ ಯಾವುದೇ ಲೋಪವಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ನಿಗದಿತ ಸಮಯದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಕರಾವಳಿಯ ಬಹುತೇಕ ಭಾಗಗಳಲ್ಲಿ ತಡೆಗೋಡೆ ನಿರ್ಮಾಣ ಮಾಡುವುದರಿಂದ ಜಿಲ್ಲೆಯಲ್ಲಿ ಕಡಲ್ಕೊರೆತದ ಸಮಸ್ಯೆಗಳು ಕಡಿಮೆಯಾಗಲಿದೆ ಎಂದು ತಿಳಿಸಿದರು.

ಸೋಮೇಶ್ವರದ ಕೆಲವು ಭಾಗದಲ್ಲಿ ಕಡಲ್ಕೊರೆತ ಹೆಚ್ಚಾಗಿದೆ. ಕೊರೆತವನ್ನು ತಪ್ಪಿಸುವ ಸಲುವಾಗಿ ಸರ್ಕಾರವು ಹಲವು ಯೋಜನೆಯ ಮೂಲಕ ಅನುದಾನವನ್ನು ಬಿಡುಗಡೆ ಮಾಡುತ್ತಿದ್ದು, ಸಮಸ್ಯೆ ಎದುರಾಗಿರುವ ಭಾಗಗಳಿಗೆ ತಾತ್ಕಾಲಿಕ ತಡೆಗೋಡೆ ನಿರ್ಮಾಣವನ್ನು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹಾನಿಗೆ ಒಳಗಾದ ಪ್ರದೇಶಗಳಿಗೆ ಶಾಶ್ವತ ಪರಿಹಾರ ನೀಡಲಾಗುತ್ತದೆ ಎಂದು ಹೇಳಿದರು.

ಸರ್ಕಾರವು ಈ ಬಗ್ಗೆ ಯೋಜನೆಯನ್ನು ರೂಪಿಸಲು ಅಧಿಕಾರಿಗಳು, ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಸಂಪೂರ್ಣವಾದ ಮಾಹಿತಿ ಪಡೆದು ಅದರ ವರದಿಯನ್ನು ಸರ್ಕಾರಕ್ಕೆ ನೀಡಬೇಕು ಎಂದು ಸೂಚಿಸಿದರು.

ಕಪಿಲ್ ಮೋಹನ್ ಬುಧವಾರ ತಣ್ಣೀರುಬಾವಿ ಭಾರತಿ ಶಿಪ್‌ಯಾರ್ಡ್, ಬೆಂಗ್ರೆ ಜೆಟ್ಟಿ, ಅಳಿವೆ ಬಾಗಿಲು, ಸೋಮೇಶ್ವರ ಉಚ್ಚಿಲ, ಬಟ್ಟಪ್ಪಾಡಿ, ಮುಕ್ಕಚ್ಚೇರಿ ಪ್ರದೇಶಗಳಿಗೆ ಭೇಟಿ ನೀಡಿ, ಬಂದರು ಇಲಾಖೆ ಹಾಗೂ ಎಡಿಬಿ ಯೋಜನೆಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಸುಸ್ಥಿರ ಕರಾವಳಿ ತೀರ ಸಂರಕ್ಷಣೆ ಹಾಗೂ ನಿರ್ವಹಣಾ ಯೋಜನೆ ಅಧಿಕಾರಿಗಳಾದ ಗೋಪಾಲ ನಾಯ್ಕ್, ಉಪನಿರ್ದೇಶಕ ಮುಹಮ್ಮದ್ ಹನೀಫ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.