ADVERTISEMENT

ಕಣ್ಣು ಕಾಣದಂತೆ ಸರ್ಕಾರಗಳ ವರ್ತನೆ

ಹದಗೆಟ್ಟ ರಾಷ್ಟ್ರೀಯ ಹೆದ್ದಾರಿ: ಪ್ರತಿಭಟನಾ ಸಭೆಯಲ್ಲಿ ರಮಾನಾಥ ರೈ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2019, 13:35 IST
Last Updated 11 ಸೆಪ್ಟೆಂಬರ್ 2019, 13:35 IST
ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ಮಿನಿ ವಿಧಾನಸೌಧ ಎದುರು ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಬುಧವಾರ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ಮಿನಿ ವಿಧಾನಸೌಧ ಎದುರು ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಬುಧವಾರ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.   

ಬಂಟ್ವಾಳ: ಇಲ್ಲಿನ ಬಿ.ಸಿ.ರೋಡ್‌ನಿಂದ ಮಾಣಿ ಜಂಕ್ಷನ್ ತನಕ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಹದೆಗೆಟ್ಟು ಹೊಂಡಮಯವಾಗಿದೆ. ಈಗಾಗಲೇ ಹಲವಾರು ಮಂದಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕಣ್ಣು ಕಾಣದಂತೆ ಮತ್ತು ಕಿವಿ ಕೇಳಿಸದಂತೆ ವರ್ತಿಸುತ್ತಿವೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಆರೋಪಿಸಿದರು.

ಹೊಂಡಮಯ ರಾಷ್ಟ್ರೀಯ ಹೆದ್ದಾರಿ ದುರಸ್ತಿಗೆ ಆಗ್ರಹಿಸಿ ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಬುಧವಾರ ಏರ್ಪಡಿಸಿದ್ದ ತಾಲ್ಲೂಕಿನ ಮೆಲ್ಕಾರ್ ಜಂಕ್ಷನ್‌ನಿಂದ ಬಿ.ಸಿ.ರೋಡ್‌ವರೆಗಿನ ಪಾದಯಾತ್ರೆಯಲ್ಲಿ ಅವರು ಮಾತನಾಡಿದರು.

ಈ ಹಿಂದೆ ರಾಷ್ಟ್ರೀಯ ಹೆದ್ದಾರಿ ದುರಸ್ತಿಗೆ ಆಗ್ರಹಿಸಿ, ಉಪ್ಪಿನಂಗಡಿಯಿಂದ ಬಿ.ಸಿ.ರೋಡ್‌ ತನಕ ನಡೆಸಿದ್ದ ಪಾದಯಾತ್ರೆಗೆ, ’ಬೊಜ್ಜು ಕರಗಿಸಲು ಪಾದಯಾತ್ರೆ ನಡೆಸಿದ್ದಾರೆ‘ ಎಂದು ಅಣಕಿಸಿದ್ದ ಸಂಸದ ನಳಿನ್ ಕುಮಾರ್ ಕಟೀಲ್‌ ಕಣ್ಮರೆಯಾಗಿದ್ದಾರೆ. ಇದರಿಂದಾಗಿ ಹೆದ್ದಾರಿ ವಿಸ್ತರಣೆ ಗುತ್ತಿಗೆ ವಹಿಸಿಕೊಂಡಿದ್ದ ಎಲ್‌ ಆಂಡ್‌ ಟಿ ಕಂಪನಿ ಅರ್ಧದಲ್ಲೇ ವಾಪಸಾಗಿದೆ ಎಂದು ದೂರಿದರು.

ADVERTISEMENT

ಕೇವಲ ಭಾವನಾತ್ಮಕ ಕೆರಳಿಸುವ ಭಾಷಣ ಮತ್ತು ಪ್ರಧಾನಿಗೆ ಪತ್ರ ಬರೆದರೆ, ರಸ್ತೆ ಸರಿ ಆಗುವುದಿಲ್ಲ ಎಂಬ ಸತ್ಯ ಜನತೆಗೆ ಅರ್ಥವಾಗತೊಡಗಿದೆ ಎಂದರು.

ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಚಂದ್ರಪ್ರಕಾಶ ಶೆಟ್ಟಿ, ಬಿ.ಪದ್ಮಶೇಖರ ಜೈನ್, ಎಂ.ಎಸ್.ಮಹಮ್ಮದ್, ಮಂಜುಳಾ ಮಾಧವ ಮಾವೆ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮಿ ಸಿ.ಬಂಗೇರ, ಎಪಿಎಂಸಿ ಅಧ್ಯಕ್ಷ ಕೆ.ಪದ್ಮನಾಭ ರೈ, ಪ್ರಮುಖರಾದ ಸುದರ್ಶನ್ ಜೈನ್, ಮಲ್ಲಿಕಾ ಶೆಟ್ಟಿ, ಜಯಂತಿ ಪೂಜಾರಿ, ಸದಾಶಿವ ಬಂಗೇರ, ಕೆ.ಮಾಯಿಲಪ್ಪ ಸಾಲ್ಯಾನ್, ಚಿತ್ತರಂಜನ್ ಶೆಟ್ಟಿ, ಮಹಮ್ಮದ್ ನಂದಾವರ, ಲುಕ್ಮಾನ್, ವೆಂಕಪ್ಪ ಪೂಜಾರಿ, ರಾಜಶೆಖರ ನಾಯ್ಕ್, ಮಹಮ್ಮದ್ ನಂದರಬೆಟ್ಟು, ಆಲ್ಫೋನ್ಸ್ ಮಿನೇಜಸ್, ಉಮೇಶ ಬೋಳಂತೂರು, ಚಂದ್ರಶೇಖರ ಪೂಜಾರಿ, ಜೆಡಿಎಸ್ ಮುಖಂಡರಾದ ಮಹಮ್ಮದ್ ಶಾಫಿ, ಪಿ.ಎ.ರಹೀಂ, ಹಾರೂನ್ ರಶೀದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.