ADVERTISEMENT

ರಮಾನಂದ ಬನಾರಿಗೆ ಕಯ್ಯಾರ ಕಿಞ್ಞಣ್ಣ ರೈ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 13 ಜೂನ್ 2022, 13:59 IST
Last Updated 13 ಜೂನ್ 2022, 13:59 IST
ಡಾ.ರಮಾನಂದ ಬನಾರಿ ಅವರಿಗೆ ಮಂಗಳೂರಿನ ಕಲ್ಕೂರ ಪ್ರತಿಷ್ಠಾನದಿಂದ ‘ಕಯ್ಯಾರ ಕಿಞ್ಞಣ್ಣ ರೈ’ ಪ್ರಶಸ್ತಿಯನ್ನು ಡಾ.ಸಿ.ಸೋಮಶೇಖರ್‌ ಪ್ರದಾನ ಮಾಡಿದರು. ಪ್ರದೀಪ ಕುಮಾರ ಕಲ್ಕೂರ ಹಾಗೂ ಇತರರು ಇದ್ದಾರೆ
ಡಾ.ರಮಾನಂದ ಬನಾರಿ ಅವರಿಗೆ ಮಂಗಳೂರಿನ ಕಲ್ಕೂರ ಪ್ರತಿಷ್ಠಾನದಿಂದ ‘ಕಯ್ಯಾರ ಕಿಞ್ಞಣ್ಣ ರೈ’ ಪ್ರಶಸ್ತಿಯನ್ನು ಡಾ.ಸಿ.ಸೋಮಶೇಖರ್‌ ಪ್ರದಾನ ಮಾಡಿದರು. ಪ್ರದೀಪ ಕುಮಾರ ಕಲ್ಕೂರ ಹಾಗೂ ಇತರರು ಇದ್ದಾರೆ   

ಮಂಗಳೂರು: ವೈದ್ಯ, ಸಾಹಿತಿ ಹಾಗೂ ಗಡಿನಾಡಿನ ಕನ್ನಡ ಹೋರಾಟಗಾರ ಡಾ.ರಮಾನಂದ ಬನಾರಿ ಅವರಿಗೆ ಮಂಗಳೂರಿನ ಕಲ್ಕೂರ ಪ್ರತಿಷ್ಠಾನದಿಂದ ‘ಕಯ್ಯಾರ ಕಿಞ್ಞಣ್ಣ ರೈ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಯಿತು. ‌

ಕವಿ ಕಯ್ಯಾರ ಅವರ ಹುಟ್ಟುಹಬ್ಬದ ಅಂಗವಾಗಿ ಕಾಸರಗೋಡಿನ ಪೈವಳಿಕೆ ಸಮೀಪದ ಜೋಡುಕಲ್ಲು ಜನಾರ್ದನ ಕಲಾವೃಂದದ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನಮಾಡಿದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್, ‘ಸ್ವಾತಂತ್ರ್ಯ ಹೋರಾಟ, ಕರ್ನಾಟಕದ ಏಕೀಕರಣಗಳಲ್ಲಿ ಕಯ್ಯಾರ ಕಿಞ್ಞಣ್ಣ ರೈ ಅವರ ಕೊಡುಗೆ ಅನನ್ಯ. ಡಾ. ಬನಾರಿಯವರಿಗೆ ಕಲ್ಕೂರ ಪ್ರತಿಷ್ಠಾನ ನೀಡಿರುವ ಈ ಪ್ರಶಸ್ತಿಯಿಂದ ಸ್ಪೂರ್ತಿ ಪಡೆದ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರವು ಮುಂದಿನ ವರ್ಷ ಕಯ್ಯಾರ ಪ್ರಶಸ್ತಿಯನ್ನು ಡಾ.ಬನಾರಿಯವರಿಗೆ ನೀಡಲು ಉತ್ಸುಕವಾಗಿದೆ’ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಮಂಜೇಶ್ವರದ ಶಾಸಕ ಎ.ಕೆ.ಎಂ.ಅಶ್ರಫ್, ‘ಗಡಿ ನಾಡಿನ ಕನ್ನಡ ಸಾಂಸ್ಕೃತಿಕ, ಸಾಹಿತ್ಯಿಕ ಮೌಲ್ಯವನ್ನು ಕಾಪಾಡುವಲ್ಲಿ ಕಯ್ಯಾರರ ಶ್ರಮ ಅಪರಿಮಿತ’ ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ, ‘ಮಾತೃ ಸಂಸ್ಕೃತಿ ಮರೆತ ಪರಿಣಾಮ ಶಾಸ್ತ್ರಗಳು ಶಸ್ತ್ರಗಳಾಗಿ ಯೋಚಿಸುವ ಕಾಲ ಇಂದು ಎದುರಾಗಿರುವುದು ದುರ್ದೈವ. ಮಾತೃ ಸಂಸ್ಕೃತಿಯ ಅನುಮೋದಕರಾಗಿ ತಾನು ಬರೆದಂತೆ ಬಾಳಿದವರು ಕಯ್ಯಾರರು’ ಎಂದರು.

ವಿವಿಧ ಕ್ಷೇತ್ರಗಳ ಸಾಧಕರಾದ ಕಯ್ಯಾರುವಿನ ಡಾ.ಕೆ.ಪಿ.ಹೊಳ್ಳ, ವಾಮನ ರಾವ್ ಬೇಕಲ್, ಅರಿಬೈಲು ಗೋಪಾಲ ಶೆಟ್ಟಿ, ಪ್ರಭಾಕರ ಕಲ್ಲೂರಾಯ ಬನದಗದ್ದೆ ಅವರಿಗೆ ‘ಕಲ್ಕೂರ ಸಾಧಕ ಸಿರಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಯ್ಯಾರ ಅವರ ಪುತ್ರ ಡಾ.ಪ್ರಸನ್ನ ರೈ, ಪ್ರೊ.ಎ.ಶ್ರೀನಾಥ್ ಕಾಸರಗೋಡು, ಗ್ರಾಮ ಪಂಚಾಯಿತಿ ಸದಸ್ಯೆ ಸುಜಾತಾ ಶೆಟ್ಟಿ, ಜಿಲ್ಲಾ ಕನ್ನಡ ಮಾಧ್ಯಮ ಪತ್ರಕರ್ತರ ಸಂಘದ ಅಧ್ಯಕ್ಷ ಎ.ಆರ್.ಸುಬ್ಬಯ್ಯ ಕಟ್ಟೆ, ಜೆ.ಕೆ.ವಿ.ಸಂಸ್ಥೆಯ ಅಧ್ಯಕ್ಷ ಸಂಪತ್ ಕುಮಾರ್, ಗಡಿನಾಡ ಸಾಹಿತ್ಯ–ಸಾಂಸ್ಕೃತಿಕ ಅಕಾಡಮಿಯ ಖಜಾಂಚಿ ಅನೀಶ್ ಶೆಟ್ಟಿ, ಮಡಂದೂರು ಉಪಸ್ಥಿತರಿದ್ದರು.
ಜೆಡ್.ಎ.ಕಯ್ಯಾರು ಸ್ವಾಗತಿಸಿದರು. ರವಿ ನಾಯ್ಕಾಪು ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.