ADVERTISEMENT

ಕುಂಜತ್ತಬೈಲ್ ಬಡಾವಣೆಯಲ್ಲಿ ನಿವೇಶನ ಸಿದ್ದ

17 ಎಕರೆ ಪ್ರದೇಶದಲ್ಲಿ ನಿರ್ಮಾಣ: ನಾಳೆಯಿಂದ ನೋಂದಣಿ; ಕನಿಷ್ಠ ₹ 11 ಲಕ್ಷದಿಂದ ಗರಿಷ್ಠ ₹ 50 ಲಕ್ಷದ ವರೆಗೆ ಬೆಲೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2023, 6:37 IST
Last Updated 5 ಮಾರ್ಚ್ 2023, 6:37 IST
ಮುಡಾದ ಲಾಂಛನವನ್ನು ರವಿಶಂಕರ ಮಿಜಾರ್ ಬಿಡುಗಡೆ ಮಾಡಿದರು
ಮುಡಾದ ಲಾಂಛನವನ್ನು ರವಿಶಂಕರ ಮಿಜಾರ್ ಬಿಡುಗಡೆ ಮಾಡಿದರು   

ಮಂಗಳೂರು: ತಾಲ್ಲೂಕಿನ ಕುಂಜತ್ತಬೈಲ್‌ನಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಅಭಿವೃದ್ಧಿಪಡಿಸಿದ ಬಡಾವಣೆಯಲ್ಲಿ ವಾಸದ ನಿವೇಶನಗಳು ಸಿದ್ಧವಾಗಿದ್ದು ಹಂಚಿಕೆಗಾಗಿ ಅರ್ಜಿಗಳನ್ನು ಇದೇ 6ರಿಂದ ವಿತರಿಸಲಾಗುವುದು ಎಂದು ಮುಡಾ ಅಧ್ಯಕ್ಷ ರವಿಶಂಕರ ಮಿಜಾರ್ ತಿಳಿಸಿದರು.

ಮೂಡದ ಲಾಂಛನವನ್ನು ಶನಿವಾರ ಬಿಡುಗಡೆ ಮಾಡಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು 12 ವರ್ಷಗಳ ನಂತರ ಇಲ್ಲಿ ನಿವೇಶನಗಳನ್ನು ವಿತರಿಸಲಾಗುತ್ತಿದ್ದು ಬಡಾವಣೆಯ ಮಧ್ಯದಲ್ಲಿ ಸುಂದರ ಕೆರೆ, ಅದರ ಸುತ್ತ ವಾಕಿಂಗ್ ಟ್ರ್ಯಾಕ್‌ ಸಿದ್ಧಪಡಿಸಲಾಗಿದೆ. ಮುಂದಿನ ತಿಂಗಳ 6ರ ವರೆಗೆ ಅರ್ಜಿಗಳು ಲಭ್ಯವಿದ್ದು ಅರ್ಜಿ ಸಲ್ಲಿಸಿ 30 ದಿನಗಳ ಒಳಗೆ 10 ಶೇಕಡಾ ಮೊತ್ತ ಪಾವತಿಸಿದವರಿಗೆ ನಿವೇಶನಗಳನ್ನು ಹಂಚಲಾಗುವುದು ಎಂದು ವಿವರಿಸಿದರು.

ಅರ್ಜಿ ಸಲ್ಲಿಸುವವರು ಕರ್ನಾಟಕದಲ್ಲಿ ಕನಿಷ್ಠ 5 ವರ್ಷ ವಾಸವಾಗಿರಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದವರಿಗೆ ಮೀಸಲಾತಿ ಇದ್ದು 6x9 ಮೀಟರ್ (1.33 ಸೆಂಟ್‌) ಅಳತೆಯ ನಿವೇಶನ ಆರ್ಥಿಕ ದುರ್ಬಲ ವರ್ಗದವರಿಗೆ ಮಾತ್ರ ಮೀಸಲು. ಸಾರ್ವಜನಿಕರಿಗೆ ಶೇಕಡಾ 50, ಇತರೆ ಹಿಂದುಳಿದ ವರ್ಗದವರಿಗೆ ಶೇಕಡಾ 10, ಅನುಸೂಚಿತ ಬುಡಕಟ್ಟುಗಳಿಗೆ ಶೇಕಡಾ 3, ಅನುಸೂಚಿತ ಜಾತಿಗಳಿಗೆ ಶೇಕಡಾ 15, ಮಾಜಿ ಸೈನಿಕರು ಅಥವಾ ಮೃತ ಸೈನಿಕರ ಕುಟುಂಬದವರು ಮತ್ತು ಕೇಂದ್ರೀಯ ಸಶಸ್ತ್ರ ಪಡೆಯವರಿಗೆ ಶೇಕಡಾ 5, ಸರ್ಕಾರ, ಸಾರ್ವಜನಿಕ ವಲಯದ ಉದ್ದಿಮೆ, ಪ್ರಾಧಿಕಾರಗಳ ನೌಕರರಿಗೆ ಶೇಕಡಾ 2, ಸಾಧಕರಿಗೆ ಶೇಕಡಾ 5, ಅಂಗವಿಕಲರಿಗೆ ಶೇಕಡಾ 3 ಮೀಸಲಾತಿ ಇದೆ ಎಂದು ಅವರು ತಿಳಿಸಿದರು.

ADVERTISEMENT

ಬ್ಯಾಂಕ್ ಆಫ್ ಬರೋಡದ ವಿಸ್ತೃತ ಕೌಂಟರ್‌ ಆರಂಭ

ನಿವೇಶನಗಳ ಅರ್ಜಿ ಪಡೆದುಕೊಳ್ಳಲು ಮತ್ತು ಶುಲ್ಕ ತುಂಬಲು ಮೂಡ ಆವರಣದಲ್ಲಿರುವ ಬ್ಯಾಂಕ್ ಆಫ್ ಬರೋಡದ ವಿಸ್ತೃತ ಶಾಖೆಯನ್ನು ಮುಡಾ ಕಚೇರಿಯಲ್ಲಿ ತೆರೆಯಲಾಗಿದ್ದು ಪ್ರಾಧಿಕಾರದ ಮತ್ತು ಬ್ಯಾಂಕ್‌ನ ಸಿಬ್ಬಂದಿಯನ್ನು ಇಲ್ಲಿ ನಿಯೋಜಿಸಲಾಗಿದೆ. ಜಿಲ್ಲೆಯ ವಿವಿಧ ಕಡೆಗಳಲ್ಲಿರುವ ಬ್ಯಾಂಕ್ ಆಫ್ ಬರೋಡದ ಒಟ್ಟು 25 ಶಾಖೆಗಳಲ್ಲಿ ಅರ್ಜಿ ಪಡೆಯಲು ಮತ್ತು ಶುಲ್ಕ ತುಂಬಲು ವ್ಯವಸ್ಥೆ ಮಾಡಲಾಗಿದೆ ಎಂದು ರವಿಶಂಕರ ಮಿಜಾರು ತಿಳಿಸಿದರು.

ಶಾಖೆಗಳು: ಮಂಗಳೂರಿನ ಅಶೋಕ ನಗರ, ಶರವು ದೇವಸ್ಥಾನ ಬಳಿ, ಜ್ಯೋತಿ ವೃತ್ತ, ಭವಂತಿ ಸ್ಟ್ರೀಟ್‌, ಬಿಜೈ, ಬೋಂದೆಲ್‌, ಅಳಪೆ, ಅಳಕೆ, ಬೆಂದೂರು, ಕೂಳೂರು, ಜೆಪ್ಪು, ಫಳ್ನೀರ್‌, ಪಂಪ್‌ವೆಲ್‌, ಪಣಂಬೂರು, ಸುರತ್ಕಲ್‌, ಉಳ್ಳಾಲ, ತಲಪಾಡಿ, ಮೂಡುಬಿದಿರೆ, ಮುಲ್ಕಿ, ಬಂಟ್ವಾಳ, ಪುತ್ತೂರು, ಸುಳ್ಯ, ಬೆಳ್ತಂಗಡಿ, ಧರ್ಮಸ್ಥಳ, ಸುಬ್ರಹ್ಮಣ್ಯ.

ಕೊಣಾಜೆ, ಚೇಳ್ಯಾರ್‌ನಲ್ಲೂ ಬಡಾವಣೆ

ಕೊಣಾಜೆಯಲ್ಲಿ ನಿರ್ಮಿಸಿರುವ ಬಡಾವಣೆಯ ನಿವೇಶನಗಳ ಹಂಚಿಕೆ 15 ದಿನಗಳಲ್ಲಿ ಆರಂಭವಾಗಲಿದೆ. ಆ ಬಡಾವಣೆಯಲ್ಲಿ 112 ನಿವೇಶನಗಳು ಲಭ್ಯ ಇರಲಿವೆ. ಚೇಳ್ಯಾರಿನಲ್ಲಿ ಸಿದ್ಧ ಆಗಲಿರುವ ಬಡಾವಣೆಯ ಭೂಮಿ ಪೂಜೆ ಕೆಲವೇ ದಿನಗಳಲ್ಲಿ ನಡೆಯಲಿದೆ. ನಗರದಲ್ಲಿ 30 ಕೆರೆ ಮತ್ತು 65 ಉದ್ಯಾನಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಸುರತ್ಕಲ್ ಕಾಲೇಜು ಬಳಿ ಬಸ್ ತಂಗುದಾಣವನ್ನು ನಿರ್ಮಿಸಲಾಗುವುದು ಎಂದು ರವಿಶಂಕರ ಮಿಜಾರ್ ತಿಳಿಸಿದರು.

ಲಭ್ಯವಿರುವ ನಿವೇಶನಗಳ ವಿವರ (ಅಳತೆ ಸೆಂಟ್‌ಗಳಲ್ಲಿ)

ನಿವೇಶನದ ಅಳತೆ;ಲಭ್ಯ;ಬೆಲೆ (ಲಕ್ಷ ₹ಗಳಲ್ಲಿ);ಆರಂಭಿಕ ಠೇವಣಿ (₹ಗಳಲ್ಲಿ)

1.33;57;11,36,700;1,13,670

2.67;21;22,73,400;2,27,340

4.45;20;37,89,000;3,78,900

5.34;34;45,46,800;4,54,680

7.12;5;60,62,400;6,06,240

1.33ಕ್ಕೂ ಅಧಿಕ;6;15,15,600;1,51,560

4.45ಕ್ಕೂ ಅಧಿಕ;13;50,52,300;5,05,230

ನಿಯಮಿತ;26;25,00,000;2,50,000

* ನೋಂದಣಿ ಶುಲ್ಕ: 7.12 ಸೆಂಟ್ ಮತ್ತು 4.45 ಸೆಂಟ್‌ ನಿವೇಶನಕ್ಕೆ ₹ 2 ಸಾವಿರ; ಉಳಿದದ್ದೆಲ್ಲ ₹ 1 ಸಾವಿರ.

17 ಎಕರೆ 49 ಸೆಂಟ್‌

ನಿವೇಶನ ನಿರ್ಮಿಸಿರುವ ಜಾಗದ ಪ್ರದೇಶದ ಒಟ್ಟು ವಿಸ್ತೀರ್ಣ

182

ಹಂಚಿಕೆಗಾಗಿ ಸಿದ್ಧವಾಗಿರುವ ಒಟ್ಟು ನಿವೇಶನಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.