ಕಾಸರಗೋಡು: ಜಿಲ್ಲೆಯಲ್ಲಿ ಉಲ್ಲಂಘನೆ ಪ್ರಕರಣಗಳು ಹೆಚ್ಚುತ್ತಿದ್ದು, ಸ್ಥಳೀಯರ ನೆಮ್ಮದಿಗೆ ಭಂಗ ಉಂಟಾಗಿದೆ. ನಿರ್ಜನ ಪ್ರದೇಶಗಳ ರಸ್ತೆಯಲ್ಲಿ ಮಾರಕಾಯುಧ ಬಳಸಿ ಬೆದರಿಸಿ ನಗ-ನಗದು ದೋಚುವುದು, ಹಲ್ಲೆ ನಡೆಸುವುದು, ಅತ್ಯಾಚಾರ ಪ್ರಕರಣಗಳು ಸಾರ್ವಜನಿಕರ ನೆಮ್ಮದಿ ಕೆಡಿಸುತ್ತಿವೆ.
20ದಿನಗಳ ಹಿಂದೆ ಮನೆಯಿಂದ ಕಾಣೆಯಾಗಿದ್ದ ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ 15 ವರ್ಷದ ಬಾಲಕಿಯೊಬ್ಬಳ ಶವ ಮತ್ತು ಮಂಡಕಾಪು ನಿವಾಸಿ ಆಟೊ ಚಾಲಕನ ಶವ ಮಂಡೆಕಾಪಿನ ಅರಣ್ಯದ ಮರವೊಂದರ ಕೊಂಬೆಗೆ ನೇಣುಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಸುಳಿವು ಲಭ್ಯವಾಗದೆ ಊಹಾಪೋಹಗಳಿಗೆ ಕಾರಣವಾಗಿದೆ.
ಕಾನೂನು ಉಲ್ಲಂಘಿಸಿದ ಬಹುತೇಕ ಪ್ರಕರಣಗಳಲ್ಲಿ ಆರೋಪಿಗಳು ಪತ್ತೆಯಾಗುತ್ತಿಲ್ಲ. ಪ್ರಕರಣಗಳಲ್ಲಿ ಆರೋಪಿಗಳು ಸ್ಥಳೀಯರೇ ಅಥವಾ ಇತರ ರಾಜ್ಯದವರೇ ಎಂಬ ಗೊಂದಲವೂ ಮೂಡಿದೆ. ಕೆಲ ದಿನಗಳ ಹಿಂದೆ ಜಿಲ್ಲೆಯ ಮಾವುಂಗಾಲ್ ಏಚ್ಚಿಕಾನ ರಸ್ತೆಯಲ್ಲಿ ವ್ಯಕ್ತಿಯೊಬ್ಬರನ್ನು ಬೆದರಿಸಿ ₹ 10 ಲಕ್ಷ ದೋಚಲಾಗಿದ್ದು, ಆರೋಪಿಗಳಾದ ಉತ್ತರ ಭಾರತೀಯ 4 ಮಂದಿ ಮಂಗಳೂರಿನಲ್ಲಿ ಬಂಧಿತರಾಗಿದ್ದಾರೆ.
ಜಿಲ್ಲೆಯ ವಿವಿಧೆಡೆ ಕೆಲಸ ಮಾಡಿಕೊಂಡಿರುವ ಇತರ ರಾಜ್ಯಗಳ ಕಾರ್ಮಿಕರ ಮಾಹಿತಿ, ದಾಖಲೆಯನ್ನು ಉದ್ಯೋಗದಾತರು ಪಡೆದುಕೊಳ್ಳದೆ ಇರುವುದೂ ಸಮಸ್ಯೆಗೆ ಕಾರಣವಾಗಿದೆ. ಕಾರ್ಮಿಕರಾಗಿ ಸೇರಿಕೊಂಡ ಇತರ ರಾಜ್ಯಗಳ ನಿವಾಸಿಗಳು ಸೂಕ್ತ ದಾಖಲೆಯನ್ನು ಮಾಲೀಕರು, ಸ್ಥಳೀಯ ಠಾಣೆ ಮತ್ತು ಕಾರ್ಮಿಕ ಕಚೇರಿಗೂ ಸಲ್ಲಿಸಬೇಕು ಎಂಬ ನಿಯಮ ಇದ್ದರೂ ಅದು ಪಾಲನೆಯಾಗುತ್ತಿಲ್ಲ ಎನ್ನುವುದು ಸ್ಥಳೀಯರ ಆರೋಪ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ನೀಲೇಶ್ವರದಲ್ಲಿ ಜಿಷಾ ಎಂಬ ಗೃಹಿಣಿಯನ್ನು ಕೊಲೆ ಮಾಡಿದ ಒಡಿಶಾ ಮೂಲದ ವ್ಯಕ್ತಿಯ ಪತ್ತೆಕಾರ್ಯ ಇದುವರೆಗೆ ನಡೆದಿಲ್ಲ. ಕಳವು ನಡೆಸಲು ಯತ್ನಿಸಿದಾಗ ತಡೆಯಲು ಯತ್ನಿಸಿದ ಮಹಿಳೆಯನ್ನು ಆರೋಪಿ ಕೊಲೆ ಮಾಡಿದ್ದ ಎಂಬ ಪೊಲೀಸರ ವರದಿಯ ಹೊರತಾಗಿ ತನಿಖೆ ಕುರಿತ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಕಾಞಂಗಾಡಿನ ಕರಾವಳಿ ಪ್ರದೇಶದ ಕ್ವಾರ್ಟರ್ಸ್ ಒಂದರಲ್ಲಿ 5 ವರ್ಷಗಳಿಂದ ತಂಗಿರುವ ಬಾಂಗ್ಲಾದೇಶ ಮೂಲದ ವ್ಯಕ್ತಿಯೊಬ್ಬನನ್ನು ಸ್ಥಳೀಯ ಪೊಲೀಸರು ಕೆಲ ದಿನಗಳ ಹಿಂದೆ ಬಂಧಿಸಿದ್ದಾರೆ. ವಿಚಾರಣೆಯ ವೇಳೆ ಆತನ ಬಳಿ ಸೂಕ್ತ ದಾಖಲೆ ಇಲ್ಲದಿರುವುದು ಪತ್ತೆಯಾಗಿದೆ.
ಸಾರ್ವಜನಿಕ ಬದುಕಿನ ನೆಮ್ಮದಿಯನ್ನು ಹಾಳುಮಾಡುವ, ಸೂಕ್ತ ದಾಖಲೆ ಇಲ್ಲದ, ಅಪರಿಚಿತರ ಮೇಲೆ ನಿಗಾ ಇಡಬೇಕು. ಅಪರಾಧ ಕೃತ್ಯಗಳ ತನಿಖೆಯನ್ನು ಸೂಕ್ತ ರೀತಿಯಲ್ಲಿ ನಡೆಸಬೇಕು ಎಂದು ಗ್ರಮಸ್ಥರು ಆಗ್ರಹಿಸಿದ್ದಾರೆ.
ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಕಾನೂನು ಉಲ್ಲಂಘನೆ, ಅಪರಾಧ ಕೃತ್ಯಗಳ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರ ಸುರಕ್ಷೆ ಸಂಬಂಧ ಶೀಘ್ರದಲ್ಲೇ ಸ್ಪಷ್ಟ ಕ್ರಮ ಜಾರಿಗೊಳ್ಳಲಿದೆ ಎಂದು ಕಾಸರಗೋಡು ಜಿಲ್ಲಾಧಿಕಾರಿ ಕೆ.ಇನ್ಬಶೇಖರ್ ತಿಳಿಸಿದರು.
ಶಾಂತಿಭಂಗ ಘಟನೆಗಳನ್ನು ತಕ್ಷಣ ಹತೋಟಿಗೆ ತರುವಲ್ಲಿ ಜಿಲ್ಲೆಯ ಪೊಲೀಸ್ ವ್ಯವಸ್ಥೆ ಚುರುಕಾಗಿದೆ. ಯಾವ ಪ್ರಕರಣವನ್ನೂ ಇಲಾಖೆ ಹಗುರವಾಗಿ ಕಾಣದೆ, ಗಂಭೀರವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತಿದೆ ಎಂದು ಎಸ್‌ಪಿ ಡಿ.ಶಿಲ್ಪಾ ಹೇಳಿದರು.
ತನಿಖೆ ನಡೆಸಿ ಕ್ರಮ: ಜಿಲ್ಲಾಧಿಕಾರಿ
ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಕಾನೂನು ಉಲ್ಲಂಘನೆ, ಅಪರಾಧ ಕೃತ್ಯಗಳ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರ ಸುರಕ್ಷೆ ಸಂಬಂಧ ಶೀಘ್ರದಲ್ಲೇ ಸ್ಪಷ್ಟ ಕ್ರಮ ಜಾರಿಗೊಳ್ಳಲಿದೆ ಎಂದು ಕಾಸರಗೋಡು ಜಿಲ್ಲಾಧಿಕಾರಿ ಕೆ. ಇನ್ಬಶೇಖರ್ ತಿಳಿಸಿದರು.
ಗಂಭೀರವಾಗಿ ಪರಿಶೀಲನೆ: ಎಸ್‌ಪಿ
ಶಾಂತಿಭಂಗ ಘಟನೆಗಳನ್ನು ತಕ್ಷಣ ಹತೋಟಿಗೆ ತರುವಲ್ಲಿ ಜಿಲ್ಲೆಯ ಪೊಲೀಸ್ ವ್ಯವಸ್ಥೆ ಚುರುಕಾಗಿದೆ. ಯಾವ ಪ್ರಕರಣವನ್ನೂ ಇಲಾಖೆ ಹಗುರವಾಗಿ ಕಾಣದೆ, ಗಂಭೀರವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತಿದೆ ಎಂದು ಎಸ್‌ಪಿ ಡಿ. ಶಿಲ್ಪಾ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.