ಮಂಗಳೂರಿನಲ್ಲಿ ಈಚೆಗೆ ಸುರಿದ ಮಳೆಗೆ ಕೊಡಿಯಾಲ್ ಬೈಲ್ ರಸ್ತೆ ಜಲಾವೃತವಾಗಿತ್ತು
ಪ್ರಜಾವಾಣಿ ಚಿತ್ರ
ಮಂಗಳೂರು: ಒಂದೆರಡು ತಾಸುಗಳಲ್ಲಿ ಸುರಿವ ಹತ್ತಾರು ಸೆಂಟಿಮೀಟರ್ ಮಳೆ, ಧುತ್ತೆಂದು ಉಕ್ಕಿ ಹರಿಯುವ ಮಳೆ ನೀರ ಕಾಲುವೆಗಳು (ತೋಡು), ಮನೆಗಳೊಳಗೆ ನುಗ್ಗುವ ನೀರು, ಜಲಾವೃತವಾಗುವ ರಸ್ತೆಗಳು, ರಸ್ತೆಯಲ್ಲೇ ಸಿಲುಕುವ ವಾಹನಗಳು....
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕೊಡಿಯಾಲ್‌ಬೈಲ್, ಪಂಪ್‌ವೆಲ್, ಪಡೀಲ್, ಕೊಟ್ಟಾರ, ಜಪ್ಪಿನಮೊಗರು, ಪಂಜಿಮೊಗರು, ಪಾಂಡೇಶ್ವರ, ಅತ್ತಾವರ ಮೊದಲಾದ ಪ್ರದೇಶದಲ್ಲಿ ಪ್ರತಿ ಮಳೆಗಾಲದಲ್ಲೂ ಪದೇ ಪದೇ ಎದುರಾಗುವ ಗೋಳಿದು. ತಗ್ಗು ಪ್ರದೇಶಗಳು ಮುಳುಗಡೆಯಾದಾಗಲೆಲ್ಲ ಅಲ್ಲಿನ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಿಕೊಡುವುದು, ಕಾಳಜಿ ಕೇಂದ್ರ ತೆರೆಯುವುದು, ದೋಣಿ ವ್ಯವಸ್ಥೆ ಮಾಡುವುದು ಪ್ರತಿವರ್ಷವೂ ನಡೆಯುವ ಕಸರತ್ತುಗಳು. ಈ ಪ್ರದೇಶದ ನಿವಾಸಿಗಳು ನೆರೆಯಿಂದಾಗಿ ‘ನೆಮ್ಮದಿರಹಿತ ರಾತ್ರಿ’ಗಳನ್ನು ಕಳೆಯುವುದು ತಪ್ಪುತ್ತಲೇ ಇಲ್ಲ. ಪ್ರವಾಹ ಇಳಿಯುತ್ತಿದ್ದಂತೆಯೇ ಅದರ ಸಂಕಷ್ಟಗಳೆಲ್ಲವೂ ನೆನಪಿನಂಗಳದಿಂದ ‘ಮರೆ’ಯಾಗುತ್ತವೆ.
ಪ್ರವಾಹ ಕಾಣಿಸಿಕೊಂಡ ಕಡೆ ತೋಡಿಗೆ ತಡೆಗೋಡೆ ನಿರ್ಮಿಸುವುದು, ಹೂಳು ತೆಗೆಯುವುದಕ್ಕಷ್ಟೇ ‘ಪರಿಹಾರ ಕಾರ್ಯ’ ಸೀಮಿತವಾಗಿದೆ. ಪ್ರತಿ ಮಳೆಗಾಲದಲ್ಲೂ ಮರುಕಳಿಸುವ ಈ ಗೋಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪಾಲಿಕೆ ಹಾಗೂ ಜಿಲ್ಲಾಡಳಿತವಾಗಲೀ ದೃಢ ಹೆಜ್ಜೆ ಇಟ್ಟಿಲ್ಲ. ಮಳೆನೀರು ಹರಿವು ವ್ಯವಸ್ಥೆಯನ್ನು ಸಮಗ್ರವಾಗಿ ಸರಿಪಡಿಸುವ ಪ್ರಯತ್ನಗಳು ನಡೆದೇ ಇಲ್ಲ.
ಅಲ್ಲಲ್ಲಿ ಪ್ರವಾಹ– ಏಕೆ: ಪಂಪ್‌ವೆಲ್‌ನಲ್ಲಿ ಮೇಲ್ಸೇತುವೆ ನಿರ್ಮಾಣವಾಗುವವರೆಗೆ ಪ್ರವಾಹ ಉಂಟಾಗಿದ್ದು ನೆನಪಿಲ್ಲ. ಆ ಬಳಿಕ ಪ್ರತಿ ಮಳೆಗಾಲದಲ್ಲೂ ಪ್ರವಾಹ ಕಾಣಿಸಿಕೊಳ್ಳುತ್ತಿದೆ. ಮರೋಳಿ, ನಂತೂರು, ಬಿಕರ್ನಕಟ್ಟೆ, ತಾರೆತೋಟ, ಕಂಕನಾಡಿ, ಎಕ್ಕೂರು ಮೊದಲಾದ ಪ್ರದೇಶದ ಮಳೆನೀರು ಪಂಪ್‌ವೆಲ್ ಮತ್ತು ಆಸುಪಾಸಿನ ಪ್ರದೇಶದ ಮೂಲಕವೇ ಹಾದುಹೋಗಬೇಕು. ಇಲ್ಲಿನ ತೋಡು ಏಕಕಾಲದಲ್ಲಿ ಭಾರಿ ಮಳೆಯಾದರೆ, ಹರಿದುಬರುವ ಅಷ್ಟೊಂದು ಪ್ರಮಾಣದ ನೀರು ಸರಾಗವಾಗಿ ಹರಿಯುವಷ್ಟು ಇಲ್ಲಿ ಅಗಲವಾಗಿಲ್ಲ. ತೋಡುಗಳು ಒತ್ತುವರಿಯಾಗಿವೆ. ಅವುಗಳ ಹೂಳೆತ್ತುವ ಕಾರ್ಯವೂ ವ್ಯವಸ್ಥಿತವಾಗಿ ನಡೆಯುತ್ತಿಲ್ಲ. ಕುಡಿಯುವ ನೀರು ಪೂರೈಕೆ ಕೊಳವೆಗಳು, ಒಳ ಚರಂಡಿ ಕೊಳವೆಗಳು ತೋಡಿನಲ್ಲೇ ಹಾದುಹೋಗಿದ್ದು, ನೀರಿನ ಸರಾಗ ಹರಿವಿಗೆ ಅಡ್ಡು ಉಂಡು ಮಾಡುತ್ತಿವೆ ಎನ್ನುತ್ತಾರೆ ಸ್ಥಳೀಯರು.
ಕೊಡಿಯಲ್‌ಬೈಲ್‌ನಲ್ಲಿ 3–4 ದಶಕದ ಈಚಿನವರೆಗೂ ಗದ್ದೆಗಳಿದ್ದವು. ಇಲ್ಲಿನ ದೊಡ್ಡ ತೋಡನ್ನು ಸಂಪರ್ಕಿಸುವ ಸಣ್ಣ ತೋಡುಗಳೆಲ್ಲವೂ ಕಣ್ಮರೆಯಾಗಿ, ಕಾಂಕ್ರೀಟ್ ಕಟ್ಟಡಗಳು ತಲೆ ಎತ್ತಿವೆ. ಮುಖ್ಯ ತೋಡು ಒತ್ತುವರಿಯಾಗಿಎ ಮಾಡಲಾಗಿದೆ. ಈ ಪ್ರದೇಶದಲ್ಲಿ ಕೆರೆ ಇತ್ತು. ಅದನ್ನು ಮುಚ್ಚಿ ಅಲ್ಲಿ ಭಾರಿ ಕಾಂಕ್ರೀಟ್ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಮಾಲ್, ಭಾರಿ ಸಭಾಂಗಣಗಳು ತಲೆಯೆತ್ತಿವೆ. ಇಲ್ಲಿ ದೊಡ್ಡ ತೋಡು 90 ಡಿಗ್ರಿ ತಿರುವು ಪಡೆಯುತ್ತದೆ. ಜೋರು ಮಳೆಯಾದಾಗ ರಭಸದಿಂದ ಹರಿದುಬರುವ ನೀರು ಆಸುಪಾಸಿನ ಪ್ರದೇಶಗಳಲ್ಲಿ ಆವರಿಸಿಕೊಳ್ಳುತ್ತದೆ ಎಂದು ಈ ಪ್ರದೇಶ ಪ್ರವಾಹದ ಒಳಮರ್ಮವನ್ನು ಲಕ್ಷ್ಮೀ ವಿವರಿಸಿದರು.
ಮಂಗಳೂರಿನಲ್ಲಿ ಈಚೆಗೆ ಸುರಿದ ಮಳೆಗೆ ಜಲಾವೃತವಾಗಿದ್ದ ಡೊಂಗರಕೇರಿ–ಕುದ್ರೋಳಿ ರಸ್ತೆ
ಕೊಟ್ಟಾರ ಚೌಕಿ ಪ್ರದೇಶವೂ ಹಿಂದೆ ಗದ್ದೆಗಳಿಂದ ಕೂಡಿದ ಜಾಗ. ಇಲ್ಲಿ ನೆರೆ ಉಂಟಾಗಲು ತೋಡು ಒತ್ತುವರಿಯೂ ಕಾರಣ. ಒತ್ತುವರಿ ತರವುಗೊಳಿಸಿ, ತೋಡಿನ ಆಳ ಅಗಲ ಹೆಚ್ಚಿಸಬೇಕು ಎಂದು ಸ್ಥಳೀಯ ರಿಕ್ಷಾಚಾಲಕ ದಯಾನಂದ ಒತ್ತಾಯಿಸಿದರು.
ಅತ್ತಾವರ ಮತ್ತು ಪಾಂಡೇಶ್ವರ ಪ್ರದೇಶದಲ್ಲಿ ಈ ವರ್ಷ ಪ್ರವಾಹ ಕಾಣಿಸಿಕೊಂಡಿದೆ. ಇಲ್ಲಿ ತೋಡನ್ನು ಒತ್ತುವರಿ ಮಾಡಿ ಮನೆಗಳನ್ನು ನಿರ್ಮಿಸಲಾಗಿದೆ. ಅತ್ತಾವರ ವೈದ್ಯನಾಥ ದೇವಸ್ಥಾನದ ಬಳಿ ಕೆಲವರ ಮನೆಗಳು ತೋಡಿಗಿಂತಲೂ ತಗ್ಗು ಪ್ರದೇಶದಲ್ಲಿವೆ. ಇವೆಲ್ಲ ಬಡವರ ಮನೆಗಳು.
‘ನಮ್ಮ ಮನೆ ತೋಡಿನ ಪಕ್ಕ ಇರುವುದು ನಿಜ. ಆದರೆ 10–15 ವರ್ಷಗಳ ಹಿಂದೆ ಇಲ್ಲಿ ಪ್ರವಾಹ ಬರುತ್ತಿರಲಿಲ್ಲ. ಮಳೆ ನೀರು ಹರಿಯುವ ಪ್ರದೇಶಗಲ್ಲಿ ದೊಡ್ಡ ಕಟ್ಟಡಗಳನ್ನು ನಿರ್ಮಿಸಿದ ಬಳಿಕ ಇಲ್ಲಿ ಪ್ರವಾಹ ಉಂಟಾಗುತ್ತಿದೆ. ತೋಡಿನಲ್ಲಿ ಹೂಳು ತುಂಬಿರುವುದು ಕೂಡಾ ಪ್ರವಾಹಕ್ಕೆ ಕಾರಣ’ ಎನ್ನುತ್ತಾರೆ ಸ್ಥಳೀಯ ನಿವಾಸಿ ಸುಶೀಲಾ.
ಮಂಗಳೂರಿನಲ್ಲಿ ಈಚೆಗೆ ಸುರಿದ ಮಳೆಗೆ ಕೊಡಿಯಾಲ್ ಬೈಲ್ ಪ್ರದೇಶ ಜಲಾವೃತವಾಗಿತ್ತು:
ನಗರದಲ್ಲಿ ಮಳೆಗಾಲದಲ್ಲಿ ನೆರೆ ಕಾಣಿಸಿಕೊಳ್ಳುತ್ತಿರುವುದು ಒಂದೆರಡು ದಶಕದಿಂದ ಈಚೆಗೆ. ಮಳೆ ನೀರು ಹರಿಯುವ ತೋಡುಗಳ ಬಗ್ಗೆ ಇಲ್ಲಿ ಆಡಳಿತ ವ್ಯವಸ್ಥೆಯ ಅಸಡ್ಡೆಯೇ ಇದಕ್ಕೆ ಮೂಲ ಕಾರಣ. ಕುಡಿಯುವ ನೀರಿನ ಕೊಳವೆ, ಕೇಬಲ್‌ಗಳು, ಪ್ಲಾಸ್ಟಿಕ್ ಕಸ ಎಲ್ಲವೂ ಈ ತೋಡುಗಳಲ್ಲಿವೆ. ಅದರಲ್ಲಿ ನೀರು ಸರಾಗವಾಗಿ ಹರಿಯುವುದಾದರೂ ಹೇಗೆ ಎಂದು ಪ್ರಶ್ನೆ ಮಾಡುತ್ತಾರೆ ನಗರದ ಮಳೆ ನೀರು ಹರಿಯುವ ವ್ಯವಸ್ಥೆಯನ್ನು ಅಧ್ಯಯನ ಮಾಡಿರುವ ಸುರೇಶ ಉಡುಪ.
ತೋಡು ನದಿಯನ್ನು ಸೇರುವ ಪ್ರದೇಶದಲ್ಲಿ ತುಂಬಿರುವ ಹೂಳನ್ನು ತೆರವು ಮಾಡದೇ ಅನೇಕ ವರ್ಷಗಳೇ ಕಳೆದಿವೆ. ತೋಡಿಗೆ ಎಲ್ಲಿಂದೆಲ್ಲ ನೀರು ಹರಿದು ಬರುತ್ತದೆ ಎಂಬ ಬಗ್ಗೆ ನಿಖರವಾದ ಅಧ್ಯಯನ ನಡೆಯಬೇಕು. ಈ ತೋಡುಗಳ ಮೀಸಲು ಪ್ರದೇಶದ ಒತ್ತುವರಿ ತಡೆಯಬೇಕು ಎನ್ನುತ್ತಾರೆ ಅವರು.
ಪಾಲಿಕೆ ವ್ಯಾಪ್ತಿಯ ಕೆಲ ಪ್ರದೇಶಗಳಲ್ಲಿ ಈ ಸಲ ಮಳೆಗಾಲ ಆರಂಭವಾಗಿ ತಿಂಗಳು ಕಳೆಯುವಷ್ಟರಲ್ಲೇ ನಾಲ್ಕೈದು ಸಲ ಪ್ರವಾಹ ಕಾಣಿಸಿಕೊಂಡಿದೆ. ಪಾಲಿಕೆಯ ಆಡಳಿತಾಧಿಕಾರಿಯಾಗಿದ್ದ ನಿಕಟಪೂರ್ವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ‘ನಗರ ನೆರೆ’ ಬಗ್ಗೆ ಅಧ್ಯಯನ ನಡೆಸಿ ಶಾಶ್ವತ ಪರಿಹಾರಕ್ಕೆ ಕ್ರಮವಹಿಸುವಂತೆ ಪಾಲಿಕೆಗೆ ಸೂಚಿಸಿದದರು. ‘ಪಾಲಿಕೆಯು ಪಂಪ್‌ವೆಲ್ ಕೊಡಿಯಾಲ್‌ಬೈಲ್ ಕೊಟ್ಟಾರ ಚೌಕಿ ಪಡೀಲ್ ಮುಂತಾದ ಪ್ರದೇಶಗಳಲ್ಲಿ ಪ್ರವಾಹಕ್ಕೆ ಕಾರಣವಾಗುವ ಅಂಶಗಳ ಬಗ್ಗೆ ಅಧ್ಯಯನ ಕೈಗೊಂಡಿದೆ’ ಎಂದು ಪಾಲಿಕೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಹಿಂದೆಲ್ಲ ಮಳೆಗಾಲದಲ್ಲಿ ನೀರು ನಿಲ್ಲುತ್ತಿದ್ದ ಜಾಗಗಳಲ್ಲಿ ಮನಬಂದಂತೆ ಕಾಂಕ್ರೀಟ್ ಕಟ್ಟಡ ನಿರ್ಮಿಸಲಾಗಿದೆ. ನೀರು ನಿಲ್ಲುತ್ತಿದ್ದ ಜಾಗದ ನೀರು ಹರಿವಿಗೆ ಸೂಕ್ತ ವ್ಯವಸ್ಥೆ ಮಾಡಿಕೊಂಡಿಲ್ಲ. ಹಾಗಾಗಿ ನಗರ ನೆರೆಯ ಪರಿಸ್ಥಿತಿ ಪ್ರತಿವರ್ಷವೂ ಮರುಕಳಿಸುತ್ತಿದೆ. ಇದಕ್ಕೆಲ್ಲ ಮುಖ್ಯ ಕಾರಣ ವೈಜ್ಞಾನಿಕವಾಗಿ ನಗರ ಯೊಜನಾ ರೂಪಿಸುವ ವ್ಯವಸ್ಥೆ ಇಲ್ಲದೇ ಇರುವುದು. ನಗರ ಮಹಾ ಯೋಜನೆಯಲ್ಲಿ ಈ ಕುರಿತ ಅಂಶ ಅಳವಡಿಸಬೇಕು. ಇನ್ನಾದರೂ ಎಚ್ಚೆತ್ತು ಇಲ್ಲಿ ಮಳೆಗಾಲದಲ್ಲಿ ಬೀಳುವ ಗರಿಷ್ಠ ಮಳೆಯ ಪ್ರಮಾಣ ಸರಾಸರಿ ಮಳೆ ಅದರಿಂದ ಬರುವ ನೀರಿನ ಪ್ರಮಾಣವನ್ನು ವೈಜ್ಞಾನಿಕವಾಗಿ ಲೆಕ್ಕಾಚಾರ ಹಾಕಿ ಭವಿಷ್ಯದಲ್ಲಿ ನಗರ ನೆರೆ ಉಂಟಾಗುವುದದನ್ನು ತಡೆಯಲು ಯೋಜನೆ ರೂಪಿಸಬೇಕು ಸುರೇಶ್ ನಾಯಕ್ ‘ವೀ ದ ಪೀಪಲ್’ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.