ADVERTISEMENT

ಹಣ ಹಿಂಪಡೆಯಲ್ಲ: ಜಿಲ್ಲಾಡಳಿತದ ಸ್ಪಷ್ಟನೆ

ಜನಧನ ಮಹಿಳೆಯರ ಖಾತೆಗೆ ₹500 ಜಮಾ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2020, 15:03 IST
Last Updated 15 ಏಪ್ರಿಲ್ 2020, 15:03 IST
ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌
ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌   

ಮಂಗಳೂರು: ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಪ್ಯಾಕೇಜ್‌ನಡಿ ಮಹಿಳೆಯರ ಜನಧನ ಖಾತೆಗೆ ಪ್ರತಿ ತಿಂಗಳು ₹500 ರಂತೆ ಮೂರು ತಿಂಗಳು ಕೇಂದ್ರ ಸರ್ಕಾರದಿಂದ ಜಮಾ ಮಾಡಲಾಗುವುದು. ಈಗಾಗಲೇ ಖಾತೆಗಳಲ್ಲಿ ಜಮಾ ಆಗಿರುವ ಹಣವನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ಸ್ಪಷ್ಟಪಡಿಸಿದ್ದಾರೆ.

ಜಮಾ ಆಗಿರುವ ಹಣವು ಆಯಾ ಖಾತೆಗಳಲ್ಲಿಯೇ ಉಳಿಯಲಿದೆ. ಈ ಹಣವನ್ನು ಪಡೆಯಲು ಯಾವುದೇ ಕಾಲಮಿತಿ ನಿಗದಿಪಡಿಸಿಲ್ಲ. ಹಾಗಾಗಿ ವದಂತಿಗಳಿಗೆ ಕಿವಿಗೊಡದೇ, ಅವಶ್ಯಕತೆ ಇದ್ದಲ್ಲಿ ಮಾತ್ರ ಬ್ಯಾಂಕ್‌ ಅನ್ನು ಸಂಪರ್ಕಿಸಿ ಹಣ ಪಡೆಯಬಹುದು. ಬ್ಯಾಂಕ್‌ಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ ಎಂದು ತಿಳಿಸಿದ್ದಾರೆ.

ಕೇಂದ್ರ ಕಾರ್ಮಿಕ ಇಲಾಖೆಯ ನಿರ್ದೇಶನದಂತೆ ಜಿಲ್ಲೆಯಲ್ಲಿ ಕಾರ್ಮಿಕ ಇಲಾಖೆಯು ವಲಸೆ ಕಾರ್ಮಿಕರಿಗೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸುತ್ತಿದೆ. ಅಂತರ ಕಾಯ್ದುಕೊಂಡು ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.

ADVERTISEMENT

11 ದಿನಗಳಿಂದ ಹೊಸ ಪ್ರಕರಣಗಳಿಲ್ಲ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸತತ 11 ನೇ ದಿನವೂ ಎಲ್ಲ ಮಾದರಿಗಳು ನೆಗೆಟಿವ್‌ ಬಂದಿದ್ದು, ಏಪ್ರಿಲ್‌ 4 ರಂದು ಮೂವರಲ್ಲಿ ಸೋಂಕು ದೃಢಪಟ್ಟಿದ್ದು ಬಿಟ್ಟರೆ, ಇದುವರೆಗೆ ಯಾವುದೇ ಹೊಸ ಪ್ರಕರಣಗಳು ವರದಿಯಾಗಿಲ್ಲ.

ಬುಧವಾರ ಮತ್ತೆ 42 ವರದಿಗಳು ನೆಗೆಟಿವ್‌ ಬಂದಿದ್ದು, ಇನ್ನೂ 148 ಮಂದಿಯ ವರದಿಗಾಗಿ ಕಾಯಲಾಗುತ್ತಿದೆ. ಜ್ವರದ ಹಿನ್ನೆಲೆಯಲ್ಲಿ 15 ಮಂದಿಯ ಮೇಲೆ ನಿಗಾ ಇಡಲಾಗಿದೆ. ಬುಧವಾರ 74 ಮಂದಿಯ ತಪಾಸಣೆ ಮಾಡಲಾಗಿದ್ದು, 22 ಮಂದಿಯ ಗಂಟಲಿನ ದ್ರವದ ಮಾದರಿಯನ್ನು ಪರೀಕ್ಷೆಗಾಗಿ ವೆನ್ಲಾಕ್ ಆಸ್ಪತ್ರೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಜಿಲ್ಲೆಯ ಫೀವರ್ ಕ್ಲಿನಿಕ್‌ನಲ್ಲಿ ಬುಧವಾರ ಒಟ್ಟು 75 ಮಂದಿಯನ್ನು ತಪಾಸಣೆ ಮಾಡಲಾಗಿದ್ದು, ಒಟ್ಟಾರೆ ಈ ಕ್ಲಿನಿಕ್‌ಗಳಲ್ಲಿ 276 ಮಂದಿ ಆರೋಗ್ಯ ತಪಾಸಣೆಗೆ ಒಳಗಾಗಿದ್ದಾರೆ.

ಸಾರ್ವಜನಿಕರು ಅಪರಿಚಿತರ ಜತೆಗೆ ಸಂಪರ್ಕಿಸುವಾಗ, ವ್ಯಾಪಾರ ಮಳಿಗೆಗಳಿಗೆ ಭೇಟಿ ನೀಡುವಾಗ, ಕಚೇರಿ ಅಥವಾ ಕಾರ್ಯನಿರತ ಸ್ಥಳಗಳಲ್ಲಿ ಮುಖಗವಸು ಬಳಸುವುದು ಸೂಕ್ತ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.