ADVERTISEMENT

ಜೀವದ ಹಂಗು ತೊರೆದು ವಕ್ಫ್‌ ಆಸ್ತಿ ರಕ್ಷಿಸುವೆವು: ಕರ್ನಾಟಕ ಉಲಾಮಾ ಸಮನ್ವಯ ಸಮಿತಿ

ವಕ್ಫ್‌ ತಿದ್ದುಪಡಿ ಮಸೂದೆ ಹಿಂಪಡೆಯುವಂತೆ ಒತ್ತಾಯಿಸಿ ರಾಷ್ಟ್ರಪತಿಗೆ ಮನವಿ, ಪ್ರತಿಭಟನಾ ಜಾಥ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2025, 6:21 IST
Last Updated 10 ಮಾರ್ಚ್ 2025, 6:21 IST
ವಕ್ಫ್‌ ತಿದ್ದುಪಡಿ ಮಸೂದೆವಿರೋಧಿಸಿ  ಕರ್ನಾಟಕ ಉಲಾಮಗಳ  ಸಮನ್ವಯ ಸಮಿತಿ ಆಶ್ರಯದಲ್ಲಿ  ಮಂಗಳೂರಿನಲ್ಲಿ ಭಾನುವಾರ ಪ್ರತಿಭಟನಾ ಜಾಥಾ ನಡೆಯಿತು : ಪ್ರಜಾವಾಣಿ ಚಿತ್ರ
ವಕ್ಫ್‌ ತಿದ್ದುಪಡಿ ಮಸೂದೆವಿರೋಧಿಸಿ  ಕರ್ನಾಟಕ ಉಲಾಮಗಳ  ಸಮನ್ವಯ ಸಮಿತಿ ಆಶ್ರಯದಲ್ಲಿ  ಮಂಗಳೂರಿನಲ್ಲಿ ಭಾನುವಾರ ಪ್ರತಿಭಟನಾ ಜಾಥಾ ನಡೆಯಿತು : ಪ್ರಜಾವಾಣಿ ಚಿತ್ರ   

ಮಂಗಳೂರು: ‘ಕೇಂದ್ರ ಸರ್ಕಾರವು ಜಾರಿಗೆ ತರಲು ಉದ್ದೇಶಿಸಿರುವ ವಕ್ಫ್‌ ತಿದ್ದುಪಡಿ ಮಸೂದೆಯು ಸಂವಿಧಾನ ವಿರೋಧಿಯಾಗಿದ್ದು, ಅದನ್ನು ಕಾಯ್ದೆಯಾಗಿ ಜಾರಿಗೊಳಿಸಲು ಅವಕಾಶ ನೀಡಬಾರದು’ ಎಂದು ಕರ್ನಾಟಕ ಉಲಾಮಾ ಸಮನ್ವಯ ಸಮಿತಿ ಒತ್ತಾಯಿಸಿದೆ.

ಈ ಮಸೂದೆಯನ್ನು ವಿರೋಧಿಸಿ ಸಮಿತಿಯ ನೇತೃತ್ವದಲ್ಲಿ ಭಾನುವಾರ ಇಲ್ಲಿ ಮುಸ್ಲಿಮರು ಪ್ರತಿಭಟನಾ ಜಾಥಾ ನಡೆಸಿದರು.  ಮಸೂದೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿದರು. 

‘ಮಸೂದೆಗೆ ಸಂಬಂಧಿಸಿ ರಚಿಸಲಾದ ಜಂಟಿ ಸಂಸದೀಯ ಸಮಿತಿಯು ಮುಸ್ಲಿಮರ ಅಭಿಪ್ರಾಯಗಳನ್ನು ಕಡೆಗಣಿಸಿದೆ. ಏಕಪಕ್ಷೀಯವಾಗಿ  ವರದಿಯನ್ನು ಲೋಕಸಭೆಯಲ್ಲಿ ಪ್ರಜಾಸತ್ತಾತ್ಮಕವಲ್ಲದ ರೀತಿಯಲ್ಲಿ ಮಂಡಿಸಿದೆ. ಈ ವರದಿಯು ಅಂಗೀಕಾರಗೊಂಡು, ಅದರ ಪ್ರಕಾರವೇ ಮಸೂದೆ ಮಂಡನೆಯಾದರೆ ಅದು ಅಸಾಂವಿಧಾನಿಕ ಮಸೂದೆಯಾಗಲಿದೆ. ತಮ್ಮ ಧರ್ಮವನ್ನು ಪಾಲಿಸುತ್ತಾ, ಧಾರ್ಮಿಕ ವಿಧಿ ಹಾಗೂ ಸಂಪ್ರದಾಯಗಳಿಗೆ ಅನುಗುಣವಾಗಿ ತಮ್ಮ ಸಂಸ್ಥೆಗಳನ್ನು ಮುನ್ನಡೆಸುವುದು ಮುಸ್ಲಿಂ ಸಮುದಾಯದ ಸಂವಿಧಾನಬದ್ಧ ಹಕ್ಕು. ಮುಸ್ಲಿಂ ಸಮುದಾಯದ ಹಕ್ಕುಗಳನ್ನು ಕಸಿದುಕೊಳ್ಳುವ ಕೇಂದ್ರ ಸರ್ಕಾರದ ಮೊಂಡುತನದ ನಿರ್ಧಾರ ಜಾರಿಯಾಗುವುದಕ್ಕೆ ರಾಷ್ಟ್ರಪತಿಯವರು ಅವಕಾಶ ಕಲ್ಪಿಸಬಾರದು’ ಎಂದು  ಪ್ರತಿಭಟನಕಾರರು ಆಗ್ರಹಿಸಿದರು.

ADVERTISEMENT

ಸಭೆಯ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಉಲಮಾ ಒಕ್ಕೂಟದ ಅಧ್ಯಕ್ಷ ಸಯ್ಯಿದ್ ಇಸ್ಮಾಯಿಲ್ ತಂಙಳ್ ಉಜಿರೆ, ‘ನಮ್ಮ ಜೀವದ ಹಂಗು ತೊರೆದಾದರೂ ವಕ್ಫ್‌ ಆಸ್ತಿಗಳನ್ನು ರಕ್ಷಿಸಿಕೊಳ್ಳುತ್ತೇವೆ. ಜೀವದ ಕೊನೆಯ ಉಸಿರು ಇರುವವರೆಗೂ ಇದಕ್ಕಾಗಿ ನ್ಯಾಯಯುತ ಹೋರಾಟ ನಡೆಸಲು ಬದ್ಧರಿದ್ದೇವೆ’ ಎಂದರು.

ಖಾಜಿ ಎಂ.ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಅವರು ಪ್ರತಿಭಟನಾ ಜಾಥಾಕ್ಕೆ ಚಾಲನೆ ನೀಡಿದರು. ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ ಎಂ ಉಸ್ಮಾನುಲ್ ಫೈಝಿ  ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಕರ್ನಾಟಕ ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ಶಾಫಿ ಸಅದಿ ಪ್ರಾಸ್ತವಿಕ ಭಾಷಣ ಮಾಡಿದರು. ಎಂ.ಎಸ್‌.ಎಂ. ಅಬ್ದುಲ್ ರಶೀದ್ ಜೈನಿ, ಅಬ್ದುಲ್ ಅಜೀಜ್‌ ದಾರಿಮಿ ಚೊಕ್ಕಬೆಟ್ಟು  ಮಾತನಾಡಿದರು. ರಫೀಕ್ ಅಹ್ಮದ್ ಹುದವಿ ಕೋಲಾರ ಸ್ವಾಗತಿಸಿದರು.  ಸಿದ್ದಿಕ್‌ ಕೆ.ಎಂ ಮೊಂಟುಗೋಳಿ ಧನ್ಯವಾದ ಸಲ್ಲಿಸಿದರು. 

ಉಲಮಾ ಒಕ್ಕೂಟದ ಪ್ರಮುಖರಾದ ವಳವೂರಿನ ಯು.ಕೆ.ಮುಹಮ್ಮದ್ ಸಅದಿ ,  ಬಂಟ್ವಾಳದ ಎಸ್ ಪಿ ಹಂಝ ಸಖಾಫಿ, ಕಾಶಿಪಟ್ಣದ ಪಿ.ಪಿ ಅಹ್ಮದ್ ಸಖಾಫಿ, ಸಯ್ಯಿದ್ ಅಮೀರ್ ತಂಙಳ್, ಸಂಪ್ಯದ ಅಬ್ದುಲ್ ಹಮೀದ್ ದಾರಿಮಿ, ಕಡಬದ ಕೆ.ಪಿ.ಎಂ ಷರೀಫ್ ಪೈಜಿ, ಅಬೂಬಕ್ಕರ್ ಸಿದ್ಧಿಕ್‌ ದಾರಿಮಿ, ಷರೀಪ್ ದಾರಿಮಿ‌, ಪಟ್ಟೋರಿಯ ಪಿ.ಎಂ ಉಸ್ಮಾನ್ ಸಅದಿ, ಕೆ.ಎಲ್.ಉಮರ್ ದಾರಿಮಿ,  ತೋಕೆಯ ಟಿ.ಎಂ. ಮುಹಿಯ್ಯುದ್ದೀನ್ ಕಾಮಿಲ್ ಸಖಾಫಿ, ಸಾಲ್ಮರದ ಉಮರ್ ದಾರಿಮಿ‌,  ಸವಣೂರಿನ ಖಾಸಿಂ ದಾರಿಮಿ, ಜೆಪ್ಪುವಿನ ಎನ್.ಎಂ.ಅಬ್ದುಲ್ ರಹಮಾನ್ ಮದನಿ, ಸುರಿಬೈಲ್ನ ಕೆ.ಕೆ.ಎಂ ಕಾಮಿಲ್ ಸಖಾಫಿ, ಮಲ್ಲೂರಿನ ಎಂಪಿಎಂ ಅಶ್ರಫ್ ಸಅದಿ, ಕೊಂಡಂಗೇರಿಯ ಇಸ್ಮಾಯಿಲ್ ಸಖಾಫಿ‌, ತುಂಬೆಯ ಅಬೂಸಾಲಿಹ್ ಫೈಜಿ, ಮುಂಡೋಲದ ಮುಹಮ್ಮದ್ ಮುಸ್ಲಿಯಾರ್, ಕಲ್ಕಟ್ಟದ ಅಬ್ದುಲ್ ರಹಮಾನ್ ರಝ್ವಿ , ಜಿಲ್ಲಾ ವಕ್ಫ್‌ ಸಲಹಾ ಮಂಡಳಿ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್‌, ಉಪಾಧ್ಯಕ್ಷ ಅಶ್ರಫ್ ಕಿನಾರ, ಕಾಂಗ್ರೆಸ್ ಮುಖಂಡ ಅಶ್ರಫ್‌ ಮೊದಲಾದವರು ಭಾಗವಹಿಸಿದ್ದರು. 

Highlights - ಮಿಲಾಗ್ರಿಸ್‌ ಬಳಿಯಿಂದ ಗಡಿಯಾರ ಗೋಪುರದವರೆಗೆ ಸಾಗಿದ ಜಾಥಾ ಪ್ರತಿಭಟನಾ ಜಾಥಾದಲ್ಲಿ ಭಾಗವಹಿಸಿದ ಉಪವಾಸನಿರತ ಮುಸ್ಲಿಮರು

Cut-off box -  ‘ರಾಜ್ಯ ಸರ್ಕಾರವೂ ಮಸೂದೆ ವಿರೋಧಿಸಲಿ’ ಕೇಂದ್ರವು ಜಾರಿಗೆ ತರಲು ಉದ್ದೇಶಿಸಿರುವ ವಕ್ಫ್‌ ತಿದ್ದುಪಡಿ ಮಸೂದೆ ವಿರುದ್ಧ ಕೇರಳ ಹಾಗೂ ತೆಲಂಗಾಣ ರಾಜ್ಯಗಳ ವಿಧಾನಸಭೆಗಳಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಅದೇ  ಮಾದರಿಯಲ್ಲಿ  ನಮ್ಮ ರಾಜ್ಯದಲ್ಲೂ ಈ ಮಸೂದೆಯನ್ನು ವಿರೋಧಿಸಿ ತೀರ್ಮಾನ ಕೈಗೊಳ್ಳಬೇಕು. ಮುಸ್ಲಿಮರ  ಮೂಲಭೂತ ಹಕ್ಕನ್ನು ಕಾಪಾಡಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.