ADVERTISEMENT

ದಿವಾಳಿಯ ಅಂಚಿನಲ್ಲಿ ರಾಜ್ಯ ಸರ್ಕಾರ: ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2023, 4:44 IST
Last Updated 19 ಡಿಸೆಂಬರ್ 2023, 4:44 IST
ಪ್ರತಾಪ ಸಿಂಹ ನಾಯಕ್
ಪ್ರತಾಪ ಸಿಂಹ ನಾಯಕ್   

ಬೆಳ್ತಂಗಡಿ: ‘ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ವಿರೋಧ ಪಕ್ಷ ಪ್ರಸ್ತಾಪಿಸಿದ ರಾಜ್ಯದ ಸಮಸ್ಯೆಗಳಿಗೆ ಸಂಬಂಧಿಸಿ ಸರ್ಕಾರ ನೀಡಿದ ಉತ್ತರಗಳಿಂದ ಸರ್ಕಾರವು ಆರ್ಥಿಕ ದಿವಾಳಿಯ ಅಂಚಿನಲ್ಲಿದೆ ಎಂಬುದು ಸ್ಪಷ್ಟಗೊಂಡಿದೆ’ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯವು 125 ವರ್ಷಗಳಿಂದ ಕಾಣದ ಬರಗಾಲ ಸ್ಥಿತಿ ಎದುರಿಸುತ್ತಿದೆ. ಆದರೂ ಸರ್ಕಾರ ಈ ಬಗ್ಗೆ ಯಾವುದೇ ಪರಿಹಾರ ನೀಡಲು ಕ್ರಮ ಕೈಗೊಂಡಿಲ್ಲ. ₹ 2 ಸಾವಿರ ಘೋಷಣೆ ಮಾಡಿದ್ದರೂ ಅದು ರೈತರ ಖಾತೆಗೆ ತಲುಪಿಲ್ಲ. ಉತ್ತರ ಕರ್ನಾಟಕದಲ್ಲಿ ನನೆಗುದಿಗೆ ಬಿದ್ದಿರುವ ನೀರಿನ ಯೋಜನೆಗಳ ಕುರಿತು ಯೋಚಿಸಿಲ್ಲ. ಅಧಿವೇಶನದಲ್ಲಿ ಬರ ನಿರ್ವಹಣೆಗೆ ₹ 10 ಸಾವಿರ ಕೋಟಿ ಪ್ಯಾಕೇಜ್ ಘೋಷಣೆಗೆ ಹಾಗೂ ರೈತರಿಗೆ ₹2 ಲಕ್ಷ ದವರೆಗೆ ಸಾಲ ಮನ್ನಾ ಮಾಡಲು ವಿರೋಧಪಕ್ಷ ಆಗ್ರಹಿಸಿತ್ತು. ಆದರೆ, ಸರ್ಕಾರ ಸ್ಪಂದನೆ ನೀಡಿಲ್ಲ. ಹಿಂದುಳಿದ ವರ್ಗಕ್ಕೆ ₹ 50 ಕೋಟಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ ₹ 10 ಸಾವಿರ ಕೋಟಿ ಅನುದಾನ ಘೋಷಣೆ ಮಾಡಿದ್ದರೂ ಸರ್ಕಾರ ಅದನ್ನು ಬಿಡುಗಡೆಗೊಳಿಸುವ ಸ್ಥಿತಿಯಲ್ಲಿಲ್ಲ. ಶಾಸಕರ ಪ್ರದೇಶಾಭಿವೃದ್ಧಿ ನಿಧಿಯ ₹ 2 ಕೋಟಿ ಪೈಕಿ, ₹ 50 ಲಕ್ಷ ಮಾತ್ರ ಬಿಡುಗಡೆಗೊಂಡಿದೆ’ ಎಂದು ಹೇಳಿದರು.

ಈ ಬಾರಿಯ ಬಜೆಟ್‌ನಲ್ಲಿ ಶೂನ್ಯ ದರದಲ್ಲಿ ಸಹಕಾರಿ ಸಂಘಗಳು ನೀಡುವ ₹ 3 ಲಕ್ಷ ಸಾಲವನ್ನು ₹ 5 ಲಕ್ಷಕ್ಕೆ ಹಾಗೂ ದೀರ್ಘಾವಧಿ ಸಾಲಧ ಮೊತ್ತವನ್ನು ₹ 10 ರಿಂದ 15 ಲಕ್ಷಕ್ಕೆ ಏರಿಕೆ ಮಾಡಿದ್ದರೂ ಹಣ ಬಿಡುಗಡೆ ಆಗಿಲ್ಲ’ ಎಂದರು.

ADVERTISEMENT

ಬಿಜೆಪಿ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿಗಳಾದ ಗಣೇಶ್ ಗೌಡ, ಶ್ರೀನಿವಾಸ್ ರಾವ್, ಸಹಕಾರಿ ಧುರೀಣ ಮಹಾವೀರ ಮರೋಡಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.