ADVERTISEMENT

ಜಾಗ ಪರಿಶೀಲಿಸಿದ ಅಧಿಕಾರಿಗಳ ತಂಡ

ಭೂ ಕುಸಿತ: ಮೂಳೂರು ಸೈಟ್‌ ನಿವಾಸಿಗಳಿಗೆ ಮನೆ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 7 ಜುಲೈ 2020, 16:46 IST
Last Updated 7 ಜುಲೈ 2020, 16:46 IST

ಮಂಗಳೂರು: ಗುಡ್ಡ ಕುಸಿದು ಇಬ್ಬರು ಮಕ್ಕಳು ಮೃತಪಟ್ಟ ಘಟನೆ ಸಂಭವಿಸಿದ ಗುರುಪುರ ಮಠದಗುಡ್ಡೆ ಮೂಳೂರು ಸೈಟ್ ಸಂಖ್ಯೆ 133ರಿಂದ ಈಗಾಗಲೇ 60ರಷ್ಟು ಮನೆ ಖಾಲಿ ಮಾಡಲಾಗಿದ್ದು, ಸುಮಾರು 90 ರಿಂದ 100 ಸಂತ್ರಸ್ತ ಕುಟುಂಬಗಳಿಗೆ ನೀರುಮಾರ್ಗ ಪಂಚಾಯಿತಿ ವ್ಯಾಪ್ತಿಯ ಬೊಂಡಂತಿಲ ಗ್ರಾಮದಲ್ಲಿ ಮನೆ ನಿರ್ಮಿಸಲು ಜಾಗ ಗುರುತಿಸುವ ಪ್ರಕ್ರಿಯೆ ಆರಂಭವಾಗಿದೆ.

ಉಪ ತಹಶೀಲ್ದಾರ್ ಶಿವಪ್ರಸಾದ್, ಕಂದಾಯ ನಿರೀಕ್ಷಕ ಆಸೀಫ್ ಮತ್ತು ಗುರುಪುರ ಪಿಡಿಒ ಅಬೂಬಕರ್ ನೇತೃತ್ವದ ತಂಡವು ಮಂಗಳವಾರ ಬೊಂಡಂತಿಲ ಗ್ರಾಮಕ್ಕೆ ಭೇಟಿ ನೀಡಿ, ಜಿಲ್ಲಾಡಳಿತ ಸೂಚಿಸಿದ ಸರ್ವೆ ನಂಬರ್‌ 192(1) ಮತ್ತು ಸರ್ವೆ ನಂಬರ್‌ 190ರ ಸರ್ಕಾರಿ ಗೋಮಾಳ ಜಾಗ ಪರಿಶೀಲಿಸಿತು.

ಗುಡ್ಡದ ಮೇಲಿನ ಈ ಎರಡು ಸರ್ವೆ ನಂಬರ್‌ನಲ್ಲಿ 20.26 ಎಕರೆ ಜಾಗವಿದೆ. ಇಲ್ಲಿ ಗುರುಪುರ ಮಠದಗುಡ್ಡೆ ಮೂಳೂರು ಸೈಟಿನ 100 ಸಂತ್ರಸ್ತ ಕುಟುಂಬಗಳಿಗೆ (ತಲಾ 2.75 ಸೆಂಟ್ಸ್) ಮನೆ ನಿರ್ಮಿಸಿ ಕೊಡಲು ಸಾಧ್ಯವಿದೆ. ಉಳಾಯಿಬೆಟ್ಟು ಗ್ರಾಮ ಪಂಚಾಯಿತಿ ಮತ್ತು ಮಲ್ಲೂರು ಗ್ರಾಮ ಪಂಚಾಯಿತಿ ಗಡಿ ಪ್ರದೇಶದಲ್ಲಿರುವ ಈ ಜಾಗದಲ್ಲಿ ಉತ್ತಮ ರಸ್ತೆಯೂ ಇದೆ.

ADVERTISEMENT

‘ಸರ್ಕಾರ ಜಿಲ್ಲಾಡಳಿತಕ್ಕೆ ನೀಡಿರುವ ಆದೇಶದಂತೆ ಗುರುಪುರ ಮಠದಗುಡ್ಡೆ ನಿರ್ವಸತಿಗರಿಗೆ ಬೊಂಡಂತಿಲ ಗ್ರಾಮದಲ್ಲಿ ನಿವೇಶನ ಗುರುತಿಸಲು ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದಾರೆ. ಸಮೀಕ್ಷೆ ನಡೆಸಿ, ಜಿಲ್ಲಾಧಿಕಾರಿಗೆ ವರದಿ ನೀಡಲಾಗುವುದು. ಈ ಬಗ್ಗೆ ಸಂತ್ರಸ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು’ ಎಂದು ಉಪತಹಶೀಲ್ದಾರ್ ಶಿವಪ್ರಸಾದ್ ತಿಳಿಸಿದ್ದಾರೆ.

ಖಾಜಿ ಭೇಟಿ: ಮೃತಪಟ್ಟ ಮಕ್ಕಳ ಮನೆಗೆ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಮಂಗಳವಾರ ಭೇಟಿ ನೀಡಿ ಸಾಂತ್ವನ ಹೇಳಿದರು.

ಈ ಸಂದರ್ಭ ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಕೆ.ಎಸ್.ಮುಹಮ್ಮದ್ ಮಸೂದ್‌ ಅವರ ಸಹೋದರ, ಅನಿವಾಸಿ ಉದ್ಯಮಿ ನಿಸಾರ್ ಅಹ್ಮದ್ ಕಾರ್ಕಳ ಹಾಗೂ ಮಸೂದ್ ಅವರ ಕುಟುಂಬದವರ ಪರವಾಗಿ ₹25 ಸಾವಿರ ಸಹಾಯಧನವನ್ನು ಮಕ್ಕಳ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.

ಅಬ್ದುಲ್ ರಝಾಕ್, ಮುಹಮ್ಮದ್ ಹನೀಫ್, ಐ. ಮೊಯ್ದಿನಬ್ಬ, ಶಾಹುಲ್ ಹಮೀದ್, ಫಕೀರಬ್ಬ ಮಾಸ್ಟರ್, ಸಮದ್, ನೌಷಾದ್ ಸುರಲ್ಪಾಡಿ, ಅಬ್ದುಲ್ ರಶೀದ್ ಇದ್ದರು.

ಸಂತ್ರಸ್ತರಿಗೆ ನೆರವು: ಬಿಜೆಪಿ ಮನವಿ: ಗುಡ್ಡ ಕುಸಿತದಿಂದ ಆ ಪ್ರದೇಶದಲ್ಲಿರುವ ಕೆಲವು ಮನೆಗಳು ಅಪಾಯದಲ್ಲಿದ್ದು, ಸ್ಥಳೀಯರು ಆತಂಕದಲ್ಲಿದ್ದಾರೆ. ಸಂತ್ರಸ್ತರಿಗೆ ಸೂಕ್ತ ನೆರವು ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್‌ಕುಮಾರ್ ಕಟೀಲ್ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಪಕ್ಷದ ವತಿಯಿಂದ ಮನವಿ ಮಾಡಲಾಗಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ. ಸುದರ್ಶನ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.