ADVERTISEMENT

ಜಾತಿ ಆಧಾರದಲ್ಲಿ ಮೀಸಲಾತಿಗೆ ವಿರೋಧ

ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2021, 17:05 IST
Last Updated 20 ಫೆಬ್ರುವರಿ 2021, 17:05 IST
ಡಿ.ವಿ. ಸದಾನಂದ ಗೌಡ
ಡಿ.ವಿ. ಸದಾನಂದ ಗೌಡ   

ಪುತ್ತೂರು:‘ಜಾತಿ ಆಧಾರದಲ್ಲಿ ಮೀಸಲಾತಿ ನೀಡುವುದಕ್ಕೆ ವೈಯಕ್ತಿಕವಾಗಿ ನನ್ನ ವಿರೋಧ ಇದೆ’ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು.

ಇಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಆರ್ಥಿಕವಾಗಿ ಹಿಂದುಳಿದವರಿಗೆ ಅವಕಾಶಗಳು ದೊರೆಯಬೇಕು. ಜಾತಿ ಆಧಾರದಲ್ಲಿ ಮೀಸಲಾತಿ ನೀಡಿದರೆ, ಸಾಮಾಜಿಕ ಪರಿವರ್ತನೆ ಕಷ್ಟಸಾಧ್ಯ. ಮೀಸಲು ಪಡೆದು ಉನ್ನತ‌ ಸ್ಥಾನಕ್ಕೆ ತಲುಪಿದವರು ತಮ್ಮ ಸಮಾಜದ ಏಳಿಗೆಯನ್ನೇ ಮರೆಯುತ್ತಾರೆ. ಸಮಾಜ ಹಿಂದೆ ಬಿದ್ದು, ವ್ಯಕ್ತಿ ಮಾತ್ರ ಮುಂದೆ ಹೋಗುವ ವ್ಯವಸ್ಥೆಗಳು ಆಗುತ್ತಿವೆ’ ಎಂದರು.

‘ಪಂಚಮಸಾಲಿ ಲಿಂಗಾಯತ ಸಮಾಜದ ಬೇಡಿಕೆ ಇನ್ನೂ ಕೇಂದ್ರದ ಗಮನಕ್ಕೆ ಬಂದಿಲ್ಲ. ಈ ಕುರಿತು ಕೇಂದ್ರದ ಹಿರಿಯರು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಮೀಸಲಾತಿ ಕುರಿತು ನಾನು ನನ್ನ ವೈಯಕ್ತಿಕ ಅಭಿಪ್ರಾಯವನ್ನು ತಿಳಿಸಿದ್ದೇನೆ’ ಎಂದು ಅವರು ಸ್ಪಷ್ಟಪಡಿಸಿದರು.

ADVERTISEMENT

‘ಕೆಲವೊಂದು ವ್ಯವಸ್ಥೆ ಕಲ್ಪಿಸಲು ಇಂಧನ ಬೆಲೆಯೇರಿಕೆ ಅನಿವಾರ್ಯವಾಗಿದೆ. ಇದ್ದವರಿಂದ ಇಲ್ಲದವರಿಗೆ ಕೊಡುವ ಪ್ರಯತ್ನ ನಡೆಯುತ್ತಿದೆ’ ಎಂದು ಪೆಟ್ರೋಲ್–ಡೀಸೆಲ್ ಬೆಲೆಯೇರಿಕೆ ಕುರಿತ ಪ್ರಶ್ನೆಗೆ ಅವರು ಸಮಜಾಯಿಷಿ ನೀಡಿದರು.

‘ಸಾಲವನ್ನು ಬ್ಯಾಂಕ್‌ಗಳು ಕೇಳುವುದು ಸಹಜ. ಪುತ್ತೂರಿನಲ್ಲಿ ಬ್ಯಾಂಕ್‌ನವರು ಜಪ್ತಿಗೆ ಬಂದಾಗ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಗ್ಗೆ ನನಗೆ ಪೂರ್ಣ ಮಾಹಿತಿ ಇಲ್ಲ. ಸಾಲ ಪಾವತಿಗೆ ಕೆಲವು ರಿಯಾಯಿತಿ ಹಾಗೂ ಒಂದೇ ಬಾರಿ ಇತ್ಯರ್ಥ (ಒಟಿಎಸ್) ಮಾಡುವ ಬಗ್ಗೆ ಕೇಂದ್ರ ನಿರ್ಧಾರ ತೆಗೆದುಕೊಳ್ಳಲಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.