ADVERTISEMENT

ಬಿದಿರು ಕೊಳಲಾಗಲಿ, ಲಾಠಿಯಲ್ಲ :ಬಾಲಕೃಷ್ಣ ಹೊಸಮನೆ

ಸದ್ಗುರು ಶ್ರೀತ್ಯಾಗರಾಜ –ಪುರಂದರ ಉತ್ಸವ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2019, 15:55 IST
Last Updated 25 ಡಿಸೆಂಬರ್ 2019, 15:55 IST
ಮಂಗಳೂರಿನ ಕರಂಗಲ್ಪಾಡಿಯ ಶ್ರೀ ಸುಬ್ರಹ್ಮಣ್ಯ ಸಭಾದಲ್ಲಿ ಬುಧವಾರ ಸದ್ಗುರು ಸಂಗೀತ ಪಾಠಶಾಲಾ ಆಯೋಜಿಸಿದ ‘ಶ್ರೀ ಸೀತಾರಾಮ ಕಲ್ಯಾಣೋತ್ಸವ ಸಹಿತ ಸದ್ಗುರು ಶ್ರೀತ್ಯಾಗರಾಜ –ಪುರಂದರ ಉತ್ಸವ’ದಲ್ಲಿ ವಿದ್ವಾನ್ ಬಾಲಕೃಷ್ಣ ಹೊಸಮನೆ ಮತ್ತು ವಿದ್ವಾನ್ ವೆಳ್ಳಿಕ್ಕೋತ್ ವಿಷ್ಣು ಭಟ್‌ ಕೆ. ಅವರಿಗೆ ‘ಪಲ್ಲವಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು
ಮಂಗಳೂರಿನ ಕರಂಗಲ್ಪಾಡಿಯ ಶ್ರೀ ಸುಬ್ರಹ್ಮಣ್ಯ ಸಭಾದಲ್ಲಿ ಬುಧವಾರ ಸದ್ಗುರು ಸಂಗೀತ ಪಾಠಶಾಲಾ ಆಯೋಜಿಸಿದ ‘ಶ್ರೀ ಸೀತಾರಾಮ ಕಲ್ಯಾಣೋತ್ಸವ ಸಹಿತ ಸದ್ಗುರು ಶ್ರೀತ್ಯಾಗರಾಜ –ಪುರಂದರ ಉತ್ಸವ’ದಲ್ಲಿ ವಿದ್ವಾನ್ ಬಾಲಕೃಷ್ಣ ಹೊಸಮನೆ ಮತ್ತು ವಿದ್ವಾನ್ ವೆಳ್ಳಿಕ್ಕೋತ್ ವಿಷ್ಣು ಭಟ್‌ ಕೆ. ಅವರಿಗೆ ‘ಪಲ್ಲವಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು   

ಮಂಗಳೂರು: ‘ಬಿದಿರು ಕೊಳಲಾಗಬೇಕು. ಲಾಠಿಯಲ್ಲ’ ಎಂದು ಮೌಸೀನ್ ವಿದ್ವಾನ್, ಪ್ರಾಧ್ಯಾಪಕ ಬಾಲಕೃಷ್ಣ ಹೊಸಮನೆ ಹೇಳಿದರು.

ನಗರದ ಕರಂಗಲ್ಪಾಡಿಯ ಶ್ರೀ ಸುಬ್ರಹ್ಮಣ್ಯ ಸಭಾದಲ್ಲಿ ಬುಧವಾರ ಸದ್ಗುರು ಸಂಗೀತ ಪಾಠಶಾಲಾ ಆಯೋಜಿಸಿದ ‘ಶ್ರೀ ಸೀತಾರಾಮ ಕಲ್ಯಾಣೋತ್ಸವ ಸಹಿತ ಸದ್ಗುರು ಶ್ರೀತ್ಯಾಗರಾಜ –ಪುರಂದರ ಉತ್ಸವ’ದಲ್ಲಿ ‘ಪಲ್ಲವಿ ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡಿದರು.

‘ಬಿದಿರು ಪ್ರಕೃತಿ. ಅದನ್ನು ಕೊಳಲಾಗಿಸುವುದೇ ಸಂಸ್ಕೃತಿ. ಆದರೆ, ಈಚಿನ ದಿನಗಳಲ್ಲಿ ಬಿದಿರನ್ನು ಲಾಠಿಯಾಗಿಸುತ್ತಿದ್ದು, ವಿಕೃತಿಯಾಗಿದೆ. ನಮಗೆ ವಿಕೃತಿ ಬೇಡ. ಬಿದಿರು ಕೊಳಲಾಗಿಯೇ ನೆಮ್ಮದಿ ನೀಡಲಿ’ ಎಂದು ಅವರು ಆಶಯ ವ್ಯಕ್ತಪಡಿಸಿದರು.

ADVERTISEMENT

‘ಜೀವ ವಿಕಾಸ ಪ್ರಕ್ರಿಯಯಂತೆ ಸಂಸ್ಕೃತಿ ವಿಕಾಸದ ಪ್ರಕ್ರಿಯೆಯೂ ಇದೆ. ಅದು ಹೆಚ್ಚು ಹೆಚ್ಚು ಪ್ರವರ್ಧಮಾನಕ್ಕೆ ಬರಬೇಕು. ಆ ಮೂಲಕ ಬದುಕು ಹಾಗೂ ಸಮಾಜದಲ್ಲಿ ನೆಮ್ಮದಿ, ಸಮೃದ್ಧಿಯನ್ನು ಕಂಡುಕೊಳ್ಳ ಬೇಕಾಗಿದೆ’ ಎಂದು ಅವರು ವಿವರಿಸಿದರು.

‘ಕರ್ನಾಟಕದಲ್ಲಿ ಮೌಸೀನ್ ವಾದಕರ ಕೊರತೆ ಇದೆ. ಈ ನಿಟ್ಟಿನಲ್ಲಿ ಯುವ ಸಮುದಾಯವು ಕಲೆಯತ್ತ ಆಸಕ್ತಿ ತೋರಿ, ವೃತ್ತಿ –ಹವ್ಯಾಸದ ಮೂಲಕ ಉನ್ನತ ಬದುಕು ಸಾಗಿಸಬೇಕು’ ಎಂದರು.

ಮತ್ತೊಬ್ಬ ಪ್ರಶಸ್ತಿ ಪುರಸ್ಕೃತ ವಿದ್ವಾನ್ ವೆಳ್ಳಿಕ್ಕೋತ್ ವಿಷ್ಣು ಭಟ್‌ ಕೆ. ಮಾತನಾಡಿ, ‘ಕಲೆ ಕಲಿಸಿದ ಗುರುಗಳನ್ನು ಶಿಷ್ಯರು ಬೆಳೆಸಬೇಕು. ಆ ಮೂಲಕ ಕಲಾ ಪರಂಪರೆಯನ್ನು ಬೆಳಗಬೇಕು’ ಎಂದರು.

ಕರ್ಣಾಟಕ ಬ್ಯಾಂಕ್ ಅಧ್ಯಕ್ಷ ಪಿ.ಜಯರಾಮ ಭಟ್ ಮಾತನಾಡಿ, ‘ಸಂಗೀತ ಹಾಗೂ ನೃತ್ಯದ ಆಸ್ವಾದನೆಯು ನಮ್ಮ ಮಿದುಳಿನಲ್ಲಿ ಸಂತಸದ ಅಲೆಯನ್ನು ಸೃಷ್ಟಿಸುವ ಮೂಲಕ ಉತ್ತಮ ಸ್ವಾಸ್ಥ್ಯವನ್ನು ನೀಡುತ್ತದೆ. ನನಗೆ ತ್ಯಾಗರಾಜರ ಪಂಚರತ್ನ ಕೃತಿ ಆಸ್ವಾದನೆಯು ಅತ್ಯಂತ ಸಂತಸ. ಆ ಅವಕಾಶ ಇಲ್ಲಿ ಮತ್ತೊಮ್ಮೆ ಸಿಕ್ಕಿತು’ ಎಂದು ಆಯೋಜಕರಿಗೆ ಕೃತಜ್ಞತೆ ಸಲ್ಲಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿ, ‘ಕಲೆಯನ್ನು ಬೆಳೆಸುವ ನಿಟ್ಟಿನಲ್ಲಿ ಪಾಠಶಾಲಾದ ಕೊಡುಗೆ ಶ್ಲಾಘನೀಯ’ ಎಂದು ಅಭಿನಂದಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ, ‘ಸಮಾಜದ ಒಳಿತಿಗಾಗಿ ಶ್ರಮಿಸಿದ ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥರ ಆರೋಗ್ಯದ ಚೇತರಿಕೆಗೆ ನಾವೆಲ್ಲ ಪ್ರಾರ್ಥಿಸೋಣ’ ಎಂದರು.

ಸಂಸ್ಥೆಯ ವಿದ್ಯಾರ್ಥಿಗಳಿಂದ ಬೆಳಿಗ್ಗೆ ಪಿಳ್ಳಾರಿ ಗೀತೆಗಳು ಮತ್ತು ಸಂಗೀತ ಪ್ರಸ್ತುತಿಯ ‘ಸೀತಾರಾಮ ಕಲ್ಯಾಣೋತ್ಸವ’, ಬಳಿಕ ಗಣೇಶ್ ರಾಜ್ ಎಂ.ವಿ. ಮತ್ತು ಬಳಗದಿಂದ ಸದ್ಗುರು ಶ್ರೀ ತ್ಯಾಗರಾಜ ಪಂಚರತ್ನ ಕೃತಿಗಳ ಗೋಷ್ಠಿ– ಗಾಯನ ಹಾಗೂ ವಿದ್ವಾನ ಬಾಲಕೃಷ್ಣ ಹೊಸಮನೆ ಅವರಿಂದ ಮೌಸೀನ್ ವಾದನ ನಡೆಯಿತು.

ಸುಬ್ರಹ್ಮಣ್ಯ ಸಭಾದ ಅಧ್ಯಕ್ಷ ಕೆ. ಹರ್ಷಕುಮಾರ್,ಸೂರ್ಯನಾರಾಯಣ ಭಟ್ ಇದ್ದರು.

ಮೀಸೆಯಲ್ಲೇ ನಿನಾದ!

ಮೌಸೀನ್ ಎಂಬ ಸಣ್ಣ ಪರಿಕರದ ಮೂಲಕ ಬಾಯಿಯಿಂದ ನಾದ ಹೊಮ್ಮಿಸಲಾಗುತ್ತದೆ. ಆದರೆ, ಈ ವಾದ್ಯ ಪರಿಕರವು ಸಣ್ಣದಾಗಿದ್ದು, ನನಗೊಮ್ಮೆ ಕೆಲವರು ಮೀಸೆಯಲ್ಲಿ ಅದ್ಭುತ ನಾದ ಹೊಮ್ಮಿಸುತ್ತೀರಿ ಎಂದು ಶ್ಲಾಘಿಸಿದ್ದರು. ಮತ್ತೊಮ್ಮೆ ನಿಮ್ಮ ಬಾಯಿ ತೋರಿಸಿ, ನಿಮ್ಮ ನಾಲಗೆ ತೋರಿಸಿ ಎಂದೆಲ್ಲ ಕುತೂಹಲ ವ್ಯಕ್ತಪಡಿಸಿದ್ದರು’ ಎಂದು ವಿದ್ವಾನ್ ಬಾಲಕೃಷ್ಣ ಹೊಸಮನೆ ಅನುಭವಗಳನ್ನು ಬಿಚ್ಚಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.