ADVERTISEMENT

ಬಾಲಕಿ ಮೇಲೆ ಲೈಂಗಿಕ ಹಲ್ಲೆ: ಅಪರಾಧಿಗೆ 5 ವರ್ಷ ಕಠಿಣ ಸಜೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2025, 4:42 IST
Last Updated 19 ಜನವರಿ 2025, 4:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಂಗಳೂರು: ಆರು ವರ್ಷದ ಬಾಲಕಿ ಮೇಲೆ ಲೈಂಗಿಕ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಅರ್ಕುಳ ಗ್ರಾಮದ ಮೇರಮಜಲು ನಿವಾಸಿ ಧರ್ಮಣ ಪೂಜಾರಿ (40) ಎಂಬಾತನಿಗೆ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ (ತ್ವರಿತ ಗತಿ ಪೊಕ್ಸೊ ವಿಶೇಷ ನ್ಯಾಯಾಲಯ–2) ಐದು ವರ್ಷ ಕಠಿಣ ಸಜೆ ಹಾಗೂ ₹ 10 ಸಾವಿರ ದಂಡ ವಿಧಿಸಿದೆ.

ಧರ್ಮಣ ಪೂಜಾರಿ ಬಂಟ್ವಾಳ ತಾಲ್ಲೂಕಿನ ಗ್ರಾಮವೊಂದರಲ್ಲಿ ಟೈಲರಿಂಗ್ ವೃತ್ತಿ ನಿರ್ವಹಿಸುತ್ತಿದ್ದ. ಬಾಲಕಿ ಯೊಬ್ಬಳು 2024ರ ಜುಲೈ 8ರಂದು ಚಾಕಲೇಟ್ ತರಲೆಂದು ಅಂಗಡಿಗೆ ತೆರಳಿದ್ದ ವೇಳೆ ಆಕೆಯನ್ನು  ಪುಸಲಾಯಿಸಿ ಟೈಲರಿಂಗ್ ಅಂಗಡಿ ಒಳಕ್ಕೆ ಕರೆಸಿಕೊಂಡು ಲೈಂಗಿಕ ಹಲ್ಲೆ ನಡೆಸಿದ್ದ. ಪ್ರಕರಣದ ತನಿಖೆ ನಡೆಸಿದ್ದ ಇನ್‌ಸ್ಪೆಕ್ಟರ್‌ ಅನಂತ ಪದ್ಮನಾಭ ಕೆ.ವಿ. ಅವರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. 

ಅಪರಾಧಿಗೆ  ಲೈಂಗಿಕ ಹಲ್ಲೆ ನಡೆಸಿದ್ದಕ್ಕೆ ನ್ಯಾಯಾಧೀಶರಾದ ಮಾನು ಕೆ.ಎಸ್. ಅವರು ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ (ಪೊಕ್ಸೊ) ಕಾಯ್ದೆಯ ಸೆಕ್ಷನ್ 10ರ ಅಡಿ 5 ವರ್ಷಗಳ ಕಠಿಣ ಕಾರಾಗೃಹ ವಾಸ ಹಾಗೂ ₹ 10 ಸಾವಿರ  ದಂಡ ವಿಧಿಸಿದ್ದಾರೆ. ಈ ಮೊತ್ತವನ್ನು ಸಂತ್ರಸ್ತ ಬಾಲಕಿಗೆ ಪಾವತಿಸುವಂತೆ  ಆದೇಶ ಮಾಡಿದ್ದಾರೆ.  ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಸಂತ್ರಸ್ತ ಬಾಲಕಿಗೆ ₹ 25 ಸಾವಿರ  ಪರಿಹಾರ ನೀಡುವಂತೆ  ನಿರ್ದೇಶನ ನೀಡಿದ್ದಾರೆ. ಪ್ರಕರಣದಲ್ಲಿ ಒಂಬತ್ತು ಸಾಕ್ಷಿದಾರರ ವಿಚಾರಣೆ ನಡೆಸಲಾಗಿತ್ತು. 19 ದಾಖಲೆಗಳನ್ನು ಗುರುತಿಸಲಾಗಿತ್ತು ಎಂದು ಈ ಪ್ರಕರಣದಲ್ಲಿ ಸರ್ಕಾರದ ಪರ ವಾದಿಸಿದ್ದ ವಕೀಲ ಕೆ.ಬದರಿನಾಥ ನಾಯರಿ ತಿಳಿಸಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.