ADVERTISEMENT

ಅಂಚೆ ಮತ ಪೆಟ್ಟಿಗೆ ಹೊತ್ತ ತಹಶೀಲ್ದಾರ್‌!

ವೈರಲ್‌ ಆಯ್ತು ಗಣಪತಿ ಶಾಸ್ತ್ರಿ ಕಾರ್ಯಪ್ರವೃತ್ತಿ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2019, 20:20 IST
Last Updated 23 ಏಪ್ರಿಲ್ 2019, 20:20 IST
ತಲೆಯ ಮೇಲೆ ಅಂಚೆ ಮತಪೆಟ್ಟಿಗೆ ಹೊತ್ತು ಸಾಗಿದ ಬೆಳ್ತಂಗಡಿ ತಹಶೀಲ್ದಾರ್ ಗಣಪತಿ ಶಾಸ್ತ್ರಿ
ತಲೆಯ ಮೇಲೆ ಅಂಚೆ ಮತಪೆಟ್ಟಿಗೆ ಹೊತ್ತು ಸಾಗಿದ ಬೆಳ್ತಂಗಡಿ ತಹಶೀಲ್ದಾರ್ ಗಣಪತಿ ಶಾಸ್ತ್ರಿ   

ಬೆಳ್ತಂಗಡಿ: ‘ಸರ್ಕಾರಿ ಕೆಲಸ ದೇವರ ಕೆಲಸ’ ಎಂಬ ಮಾತಿದೆ. ಬೆಳ್ತಂಗಡಿಯ ತಹಶೀಲ್ದಾರ್‌ ಗಣಪತಿ ಶಾಸ್ತ್ರಿ ಇದನ್ನು ಸದ್ದಿಲ್ಲದೇ ಮಾಡುತ್ತ ಇತರರಿಗೆ ಮಾದರಿಯಾಗಿದ್ದಾರೆ.

ಇದೇ 18ರಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆ ನಡೆದಿತ್ತು. ಬೆಳ್ತಂಗಡಿ ತಾಲ್ಲೂಕಿಗೆ ಸಂಬಂಧಿಸಿದಂತೆ ಉಜಿರೆ ಎಸ್‍ಡಿಎಂ ಪಿಯು ಕಾಲೇಜಿನಲ್ಲಿ ಮಸ್ಟರಿಂಗ್ ಕಾರ್ಯವಿತ್ತು. ಈ ಸಂದರ್ಭ ಅಂಚೆ ಮತಗಳ ಪೆಟ್ಟಿಗೆ, ಚುನಾವಣೆಗೆ ಸಂಬಂಧಪಟ್ಟ ಪರಿಕರಗಳ ಪೆಟ್ಟಿಗೆ ಗಳನ್ನು ಭದ್ರತೆಯ ಕೊಠಡಿಯಲ್ಲಿ ಇರಿಸಲು ಸಿಬ್ಬಂದಿಯ ಜತೆಗೆ ಸ್ವತಃ ಗಣಪತಿ ಶಾಸ್ತ್ರಿ ಅವರು ತಲೆ ಮೇಲಿಟ್ಟುಕೊಂಡು ಹೊತ್ತು ಸಾಗಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ.

ಚುನಾವಣಾ ಸಂದರ್ಭದಲ್ಲಿ ಅಚ್ಚುಕಟ್ಟಾಗಿ ಚುನಾವಣಾ ಕರ್ತವ್ಯ ನಿರ್ವಹಿಸಿ ಸಿಬ್ಬಂದಿಗೆ ಮಾರ್ಗದರ್ಶನ ನೀಡುತ್ತಾ, ತಾವೇ ಮುಂದೆ ನಿಂತು ಕರ್ತವ್ಯದಲ್ಲಿ ದಕ್ಷತೆ ತೋರಿಸಿರುವ ಶಾಸ್ತ್ರಿ ಅವರ ಈ ನಡೆಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ.

ADVERTISEMENT

ಮರುಕಳಿಸಿತು ಸೈನಿಕ ಪ್ರವೃತ್ತಿ: ಗಣಪತಿ ಶಾಸ್ತ್ರಿ ಅವರು 15 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಯೋಧರಾಗಿ ಸೇವೆ ಸಲ್ಲಿಸಿದವರು. ಸೇನೆಯಿಂದ ನಿವೃತ್ತರಾದ ಬಳಿಕ ಅರೂವರೆ ವರ್ಷಗಳ ಕಾಲ ಅಂಚೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿ
ದ್ದರು. ಆನಂತರ 2017 ಅಕ್ಟೋಬರ್‌ನಲ್ಲಿ ಪ್ರೊಬೆಷನರಿ ತಹಶೀಲ್ದಾರ್‌ ಆಗಿ ಬಳಿಕ, 2019 ಜನವರಿಯಲ್ಲಿ ಬೆಳ್ತಂಗಡಿಯ ತಹಶೀಲ್ದಾರ್ ಆಗಿ ಅಧಿಕಾರ ಸ್ವೀಕರಿಸಿದ್ದರು. ಅವರು ಕಚೇರಿಯಿಂದ ತಾವಿರುವ ಸರ್ಕಾರಿ ವಸತಿಗೃಹಕ್ಕೆ ತಪ್ಪಿಯೂ ಜೀಪಿನಲ್ಲಿ ಹೋಗುವುದಿಲ್ಲ, ನಡೆದೇ ಹೋಗುತ್ತಾರೆ.

ಚುನಾವಣೆ ಸಂದರ್ಭದಲ್ಲಿ ಅನಿವಾರ್ಯ ಕಾರ್ಯವೆಂದು ಚಾಲಕ ರಜೆ ಕೇಳಿದ್ದಕ್ಕೆ ರಜೆ ನೀಡಿದ್ದಾರೆ. ಜೀಪ್‌ ಅನ್ನು ಅವರೇ ಚಲಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.