ADVERTISEMENT

‘ಪ್ರಜಾವಾಣಿ’ ಫೋನ್‌ ಇನ್ | ವಿದ್ಯಾರ್ಥಿಗಳಲ್ಲಿ ಜಾಗೃತಿಗೆ ‘ಕ್ಯಾಂಪಸ್ ಕನೆಕ್ಟ್‌’

ಕಾರ್ಯಕ್ರಮದಲ್ಲಿ ಪೊಲೀಸ್‌ ಕಮಿಷನರ್‌ ಡಾ.ಪಿ.ಎಸ್‌.ಹರ್ಷ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2019, 15:38 IST
Last Updated 30 ಆಗಸ್ಟ್ 2019, 15:38 IST
ಪೊಲೀಸ್ ಕಮಿಷನರ್ ಡಾ.ಪಿ.ಎಸ್‌.ಹರ್ಷ
ಪೊಲೀಸ್ ಕಮಿಷನರ್ ಡಾ.ಪಿ.ಎಸ್‌.ಹರ್ಷ   

ಮಂಗಳೂರು: ಮಾದಕವಸ್ತು ಸೇವನೆಯ ಅಪಾಯಗಳ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಶೀಘ್ರದಲ್ಲಿಯೇ ‘ಕ್ಯಾಂಪಸ್‌ ಕನೆಕ್ಟ್‌’ ಎಂಬ ಅಭಿಯಾನ ಆರಂಭಿಸಲಾಗುವುದು ಎಂದು ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಡಾ.ಪಿಎಸ್. ಹರ್ಷ ಪ್ರಕಟಿಸಿದರು.

‘ಪ್ರಜಾವಾಣಿ’ ಕಚೇರಿಯಲ್ಲಿ ಶುಕ್ರವಾರ ನಡೆದ ಸಾರ್ವಜನಿಕರೊಂದಿಗಿನ ನೇರ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ರಘುವೀರ್‌ ಎಂಬುವವರ ಪ್ರಶ್ನೆಗೆ ಉತ್ತರಿಸಿದ ಅವರು, ‘ಗಣೇಶೋತ್ಸವದ ಬಂದೋಬಸ್ತ್‌ ಮುಗಿಯುತ್ತಿದ್ದಂತೆ ಕ್ಯಾಂಪಸ್‌ ಕನೆಕ್ಟ್‌ ಅಭಿಯಾನ ಆರಂಭಿಸಲಾಗುವುದು. ನಾನು ಮತ್ತು ನಮ್ಮ ಸಹೋದ್ಯೋಗಿಗಳು ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ತೆರಳಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸುತ್ತೇವೆ. ಮಾದಕವಸ್ತುಗಳ ಸೇವನೆಯಿಂದ ಆಗುವ ಅನಾಹುತಗಳ ಕುರಿತು ಜಾಗೃತಿ ಮೂಡಿಸುತ್ತೇವೆ’ ಎಂದರು.

ಮಾದಕವಸ್ತು ಪೂರೈಕೆ ಮತ್ತು ಸೇವನೆಯ ಜಾಲವನ್ನು ಬಗ್ಗುಬಡಿಯಲು ಕಾರ್ಯಾಚರಣೆ ಆರಂಭವಾಗಿದೆ. ಈಗಾಗಲೇ ಹಲವರನ್ನು ಬಂಧಿಸಲಾಗಿದೆ. ಮಾದಕವಸ್ತು ಪೂರೈಕೆ ಮತ್ತು ಸೇವನೆ ಜಾಲದ ಕುರಿತು ಮಾಹಿತಿ ನೀಡುವವರ ಹೆಸರನ್ನು ಗೋಪ್ಯವಾಗಿಡಲಾಗುವುದು. ಮಾಹಿತಿದಾರರು ಇಚ್ಛಿಸಿದರೆ ಅವರನ್ನು ಸನ್ಮಾನಿಸಿ, ಪ್ರಶಂಸನಾ ಪತ್ರವನ್ನೂ ನೀಡಲಾಗುವುದು ಎಂದು ತಿಳಿಸಿದರು.

ADVERTISEMENT

ಸುರತ್ಕಲ್‌ನ ಕೃಷ್ಣಾಪುರ, ಚೊಕ್ಕಬೆಟ್ಟು ಪ್ರದೇಶಗಳಲ್ಲಿ ಗಾಂಜಾ ವ್ಯಸನಿಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ವಕೀಲ ಮೊಹಮ್ಮದ್ ಇಸ್ಮಾಯಿಲ್‌ ದೂರಿದರು. ಈ ಪ್ರದೇಶದಲ್ಲಿ ಗಾಂಜಾ ಪೂರೈಕೆ ಜಾಲದ ವಿರುದ್ಧ ಕಾರ್ಯಾಚರಣೆ ನಡೆಸುವಂತೆ ಮನವಿ ಮಾಡಿದರು.

‘ನಗರದ ಎಲ್ಲ ಕಡೆಗಳಲ್ಲೂ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಕೃಷ್ಣಾಪುರ ಮತ್ತು ಚೊಕ್ಕಬೆಟ್ಟು ಪ್ರದೇಶಗಳಲ್ಲಿ ವಿಶೇಷ ಕಾರ್ಯಾಚರಣೆ ಆರಂಭಿಸಲಾಗುವುದು’ ಎಂದು ಕಮಿಷನರ್‌ ಭರವಸೆ ನೀಡಿದರು.

‘ನಗರದ ಹಲವು ಕಡೆಗಳಲ್ಲಿ ಶಾಲಾ, ಕಾಲೇಜುಗಳ ಪಕ್ಕದ ಗೂಡಂಗಡಿಗಳಲ್ಲಿ ಯಾವುದೇ ರೀತಿಯ ನಿಯಂತ್ರಣವಿಲ್ಲದೇ ಸಿಗರೇಟು ಮಾರಾಟ ನಡೆಯುತ್ತಿದೆ. ಎಳೆಯ ವಯಸ್ಸಿನ ವಿದ್ಯಾರ್ಥಿಗಳಿಗೆ ಸಿಗರೇಟು ಮಾರಾಟ ಮಾಡಲಾಗುತ್ತಿದೆ. ಇಂತಹ ಅಂಗಡಿಗಳ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಸುರತ್ಕಲ್‌ ನಿವಾಸಿ ಗಿರೀಶ್‌ ನಾವುಡ ಆಗ್ರಹಿಸಿದರು.

ಶಾಲಾ, ಕಾಲೇಜುಗಳ 100 ಮೀಟರ್‌ ದೂರದವರೆಗೆ ಸಿಗರೇಟು ಸೇರಿದಂತೆ ಯಾವುದೇ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶವಿಲ್ಲ. ಈ ಕುರಿತು ನಗರದಾದ್ಯಂತ ತಪಾಸಣೆ ನಡೆಸಲಾಗುವುದು. ನಿಯಮ ಉಲ್ಲಂಘಿಸಿ ಸಿಗರೇಟು ಮಾರಾಟ ಮಾಡುವವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್‌ ಕಮಿಷನರ್‌ ತಿಳಿಸಿದರು.

ಡಿಸಿಪಿಗಳಾದ ಅರುಣಾಂಗ್ಷು ಗಿರಿ, ಲಕ್ಷ್ಮೀಗಣೇಶ್, ಸಂಚಾರ ಉಪ ವಿಭಾಗದ ಎಸಿಪಿ ಕೆ. ಮಂಜುನಾಥ ಶೆಟ್ಟಿ, ಇನ್‌ಸ್ಪೆಕ್ಟರ್‌ಗಳಾದ ಅಮಾನುಲ್ಲಾ, ಬಾಲಕೃಷ್ಣ ಭಟ್, ಗುರು ಕಾಮತ್‌, ಮೋಹನ್‌ ಕೆ. ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.