ADVERTISEMENT

ಮಂಗಳೂರು: ನಕಲಿ ಫಲಾನುಭವಿಗಳನ್ನು ಶಿಕ್ಷಿಸಲು ಆಗ್ರಹ

ಮೊಗೇರ ನಕಲಿ ಜಾತಿ ಪ್ರಮಾಣ ಪತ್ರ ಪ್ರಕರಣ, ಬೃಹತ್‌ ಜನಾಗ್ರಹ ಸಭೆ

​ಪ್ರಜಾವಾಣಿ ವಾರ್ತೆ
Published 23 ಮೇ 2022, 11:40 IST
Last Updated 23 ಮೇ 2022, 11:40 IST
ಮಂಗಳೂರಿನಲ್ಲಿ ಪರಿಶಿಷ್ಟ ಸಮುದಾಯದವರು ಪ್ರತಿಭಟನಾ ರ‍್ಯಾಲಿ ನಡೆಸಿ ಪರಿಶಿಷ್ಟ ಜಾತಿಯ ಮೊಗೇರರಿಗೆ ನೀಡಲಾಗುವ ಜಾತಿ ಪ್ರಮಾಣ ಪತ್ರವನ್ನು ಪಡೆದು ಭಟ್ಕಳದ ಮೀನುಗಾರ ಮೊಗೇರರು ಮೀಸಲಾತಿ, ಸೌಲಭ್ಯ ಪಡೆಯುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಮಂಗಳೂರಿನಲ್ಲಿ ಪರಿಶಿಷ್ಟ ಸಮುದಾಯದವರು ಪ್ರತಿಭಟನಾ ರ‍್ಯಾಲಿ ನಡೆಸಿ ಪರಿಶಿಷ್ಟ ಜಾತಿಯ ಮೊಗೇರರಿಗೆ ನೀಡಲಾಗುವ ಜಾತಿ ಪ್ರಮಾಣ ಪತ್ರವನ್ನು ಪಡೆದು ಭಟ್ಕಳದ ಮೀನುಗಾರ ಮೊಗೇರರು ಮೀಸಲಾತಿ, ಸೌಲಭ್ಯ ಪಡೆಯುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.   

ಮಂಗಳೂರು: ಕಂಪ್ಯೂಟರೀಕೃತ ಜಾತಿ ಪ್ರಮಾಣ ಪತ್ರ ಜಾರಿಗೂ ಮೊದಲು ಮೊಗೇರ ಜಾತಿ ವಾಚಕ ಬಳಸಿ ಇತರರಿಗೆ ನೀಡಿದ ಪ್ರಮಾಣಪತ್ರಗಳನ್ನು ರದ್ದುಪಡಿಸಬೇಕು. ಸೌಲಭ್ಯ ಪಡೆದವರನ್ನು ಪತ್ತೆಹಚ್ಚಲು ವಿಶೇಷ ಆಯೋಗ ರಚಿಸಬೇಕು, ನಕಲಿ ಫಲಾನುಭವಿಗಳನ್ನು ಶಿಕ್ಷಿಸಬೇಕು ಎಂದು ಜನಾಗ್ರಹ ಸಭೆ ಒತ್ತಾಯಿಸಿದೆ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಮತ್ತಿತರ ಕಡೆಯ ಮೀನುಗಾರರ ಮೊಗೇರ ಉಪನಾಮದ ಜನರು ಪರಿಶಿಷ್ಟ ಜಾತಿಗೆ ಸೇರಿದ ಮೊಗೇರರಿಗೆ ನೀಡಲಾಗುವ ಜಾತಿ ಪ್ರಮಾಣ ಪತ್ರವನ್ನು ಪಡೆದು ಮೀಸಲಾತಿ ಸೌಲಭ್ಯ ಪಡೆಯುತ್ತಿರುವುದನ್ನು ವಿರೋಧಿಸಿ ಮಂಗಳೂರಿನಲ್ಲಿ ಪರಿಶಿಷ್ಟ ಸಮುದಾಯದವರು ನಡೆಸಿದ ಪ್ರತಿಭಟನಾ ರ‍್ಯಾಲಿ, ಜನಾಗ್ರಹ ಸಭೆಯಲ್ಲಿ ಈ ಒತ್ತಾಯ ವ್ಯಕ್ತವಾಯಿತು. ಶಿಕ್ಷಣ, ಸಾಲ ಸೌಲಭ್ಯದಂತೆ, ಚುನಾವಣೆಯಲ್ಲಿ ಮೀಸಲಾತಿ ಕ್ಷೇತ್ರದಿಂದ ಸ್ಪರ್ಧಿಸಲು ಮೊಗೇರ ಜಾತಿ ವಾಚಕ ಬಳಸಿ ಇತರ ಸಮುದಾಯದವರು ಪಡೆದ ನಕಲಿ ಜಾತಿ ಪ್ರಮಾಣ ಪತ್ರ ರದ್ದಾಗಬೇಕು ಎಂದು ಅವರು ಆಗ್ರಹಿಸಿದರು.

ಬಲ್ಮಠ ಮೈದಾನದಿಂದ ಮೆರವಣಿಗೆಯಲ್ಲಿ ತೆರಳಿ ಹಂಪನಕಟ್ಟೆಯ ಕ್ಲಾಕ್ ಟವರ್ ವೃತ್ತದಲ್ಲಿ ಪ್ರತಿಭಟನಕಾರರು ಜನಾಗ್ರಹ ಸಭೆ ನಡೆಸಿದರು. ಮೊಗೇರ ಸಂಘದ ಪ್ರಮುಖ ಮೋಹನ್‌ದಾಸ್ ಸುಳ್ಯ ದುಡಿ ಬಾರಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಡಾ. ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮೊಗೇರ ಸಂಘದ ರಾಜ್ಯ ಸಮಿತಿ ಅಧ್ಯಕ್ಷ ವಿಶ್ವನಾಥ್ ಸೇರಿದಂತೆ ಪ್ರಮುಖರುಜನಾಗ್ರಹ ಸಮಾವೇಶಕ್ಕೆ ಚಾಲನೆ ನೀಡಿದರು.

ADVERTISEMENT

ರಾಜ್ಯ ಪರಿಶಿಷ್ಟ ಜಾತಿ ಅಧ್ಯಯನ ಸಮಿತಿಯ ಸಂಚಾಲಕ ಸುಭಾಷ್ ಕಾನಡೆ ಮಾತನಾಡಿ, ‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಪರಿಶಿಷ್ಟ ಜಾತಿಗೆ ಸೇರಿದ ಮೊಗೇರರ ಜಾತಿ ವಾಚಕ ಬಳಸಿ ಉತ್ತರ ಕನ್ನಡ ಜಿಲ್ಲೆಯ ಕೆಲವು ಭಾಗದ ಮೀನುಗಾರ ಸಮುದಾಯದವರು ನಕಲಿ ಜಾತಿ ಪ್ರಮಾಣ ಪತ್ರ ಪಡೆದು ಪರಿಶಿಷ್ಟರ ಮೀಸಲಾತಿ ಸೌಲಭ್ಯಗಳನ್ನು ಪಡೆದಿದ್ದಾರೆ. ಪರಿಶಿಷ್ಟರ ಮನವಿಯಂತೆ 2005ರಲ್ಲಿ ಸರ್ಕಾರ ಕುಲ ಶಾಸ್ತ್ರೀಯ ಅಧ್ಯಯನ ಆದೇಶಿಸಿತ್ತು. ಆದರೂ ಪ್ರಕರಣಗಳು ಮುಂದುವರಿದಿವೆ’ ಎಂದು ದೂರಿದರು.

ಪ್ರತಿಭಟನೆಯಲ್ಲಿ ಮೊಗೇರ ಸಂಘದ ಗೌರವಾಧ್ಯಕ್ಷ ಸುಂದರ ಮೇರ , ಮುಖಂಡರಾದ ಸೀತಾರಾಮ ಕೊಂಚಾಡಿ, ರಘು ಬೆಳ್ಳಿಪಾಡಿ, ರಮೇಶ್ ಕೋಟ್ಯಾನ್, ಜಗದೀಶ್ ಪಾಂಡೇಶ್ವರ್, ಚಂದ್ರ ಕುಮಾರ್, ಪದ್ಮನಾಭ ನರಿಂಗಾನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.