ಮಂಗಳೂರು: ಕಥೊಲಿಕ್ ಉದ್ಯಮಿಗಳು, ವೃತ್ತಿಪರರು ಹಾಗೂ ಕೃಷಿಕರನ್ನು ಒಳಗೊಂಡಿರುವ ‘ರಚನಾ’ ಕಥೊಲಿಕ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ ಸಂಸ್ಥೆಯು ನೀಡುವ 2023ರ ಪ್ರಶಸ್ತಿಗೆ ಐವರು ಆಯ್ಕೆಯಾಗಿದ್ದಾರೆ.
ರಚನಾ ಕೃಷಿಕ ಪ್ರಶಸ್ತಿಗೆ ಲಿಯೋ ಫರ್ನಾಂಡಿಸ್, ರಚನಾ ಉದ್ಯಮಿ ಪ್ರಶಸ್ತಿಗೆ ಜೆರಿ ವಿನ್ಸೆಂಟ್ ಡಾಯಸ್, ರಚನಾ ವೃತ್ತಿಪರ– ಸಿ.ಡಾ. ಗ್ಲ್ಯಾಡಿಸ್ ಮಿನೇಜಸ್, ರಚನಾ ಅನಿವಾಸಿ ಉದ್ಯಮಿ– ಮೈಕೆಲ್ ಡಿಸೋಜ, ರಚನಾ ಮಹಿಳಾ ಸಾಧಕಿ ಪ್ರಶಸ್ತಿಗೆ ಲವೀನಾ ಎಂ. ನೊರೋನ್ಹಾ ಆಯ್ಕೆಯಾಗಿದ್ದಾರೆ ಎಂದು ಅಧ್ಯಕ್ಷ ವಿನ್ಸೆಂಟ್ ಕುಟಿನ್ಹಾ ತಿಳಿಸಿದರು.
ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘25 ಜನರನ್ನು ಒಳಗೊಂಡ ಆಯ್ಕೆ ತಂಡವು ಈ ಐವರು ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. ಜ.15ರಂದು ಸಂಜೆ 6 ಗಂಟೆಗೆ ಮಿಲಾಗ್ರಿಸ್ ಸಭಾಭವನದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ಡಾನ ಅಧ್ಯಕ್ಷತೆ ವಹಿಸುವರು. ಎಚ್‌ಡಿಎಫ್‌ಸಿ ಬ್ಯಾಂಕ್‌ನ ಹಿರಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಸಂಜಯ್ ಡಿಸೋಜ ಭಾಗವಹಿಸುವರು’ ಎಂದರು.
ರಚನಾ ಸಂಸ್ಥೆಯು ಕಥೊಲಿಕ್ ಯುವಜನರಿಗೆ ಉದ್ಯಮದಲ್ಲಿ ತೊಡಗಿಸಿಕೊಳ್ಳಲು ತರಬೇತಿ, ಬಂಡವಾಳ ಜೋಡಿಸುವಿಕೆ, ತಾಂತ್ರಿಕ ಸಹಕಾರ ನೀಡುವ ಜೊತೆಗೆ ಸಂಸ್ಥೆಯ ಸದಸ್ಯರಲ್ಲಿ ಸಹಕಾರ ಹಾಗೂ ಸಂಬಂಧವನ್ನು ಬೆಳೆಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ ಎಂದು ಹೇಳಿದರು.
ಸಂಘಟನೆ ಪ್ರಮುಖರಾದ ರುಡಾಲ್ಫ್ ರೋಡ್ರಿಗಸ್, ಲವೀನಾ ಮೊಂತೆರೊ, ಯುಲಾಲಿಯಾ ಡಿಸೋಜ, ಲುವಿಸ್ ಜೆ. ಪಿಂಟೊ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.