ADVERTISEMENT

ದಕ್ಷಿಣ ಕನ್ನಡ: ಉದ್ಯೋಗ ಕೊಡಿಸುವ ಭರವಸೆ ನೀಡಿ ₹ 2.67 ಲಕ್ಷ ವಂಚನೆ

ಅವಿನಾಶ್ ಶೆಟ್ಟಿ ಸೇರಿ ನಾಲ್ವರ ವಿರುದ್ಧ ಬರ್ಕೆ ಠಾಣೆಯಲ್ಲಿ ಎಫ್‌ಐಆರ್ ದಾಖಲು

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2025, 7:35 IST
Last Updated 14 ಫೆಬ್ರುವರಿ 2025, 7:35 IST

ಮಂಗಳೂರು: ತಂಗಿಯ ಮಗಳಿಗೆ ಎಂಆರ್‌ಪಿಎಲ್ ಅಥವಾ ಕೆಎಂಎಫ್‌ನಲ್ಲಿ ಉದ್ಯೋಗ ಒದಗಿಸುವುದಾಗಿ ಭರವಸೆ ನೀಡಿ ನಾಲ್ವರು ಆರೋಪಿಗಳು ಸೇರಿಕೊಂಡು ₹ 2.67 ಲಕ್ಷ ಪಡೆದು ವಂಚಿಸಿದ ಬಗ್ಗೆ ಲೋಕೇಶ್ ಸುವರ್ಣ ದೂರು ನೀಡಿದ್ದು ಬರ್ಕೆ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

‘ಎಂಟು ತಿಂಗಳ ಹಿಂದೆ ನಮ್ರತಾ ಎಂಬವರು ಪರಿಚಯವಾಗಿದ್ದರು. ಎಂಆರ್‌ಪಿಎಲ್ ಹಾಗೂ ಕೆಎಂಎಫ್ ಸಂಸ್ಥೆಗಳ ನೌಕರರನ್ನು ನೇಮಕಾತಿ ಮಾಡುತ್ತಿದ್ದೇನೆ. ಯೆಯ್ಯಾಡಿಯ ಅವಿನಾಶ್ ಶೆಟ್ಟಿ ಎಂಬವರು ಉದ್ಯೋಗದ ಟೆಂಡರ್‌ಗಳ ನಿರ್ವಹಣೆ ಮಾಡುತ್ತಾರೆ. ತಲಾ 2.50 ಲಕ್ಷ ಪಡೆದು ತನ್ನ ಮಗನಿಗೆ ಮತ್ತು ಆತನ ಸ್ನೇಹಿತನಿಗೆ ಕೆಲಸ ಕೊಡಿಸಿದ್ದರು. ಈ ಸಂಸ್ಥೆಗಳಲ್ಲಿ ಈಗಲೂ ಉದ್ಯೋಗ ಖಾಲಿ ಇದೆ. ₹ 2.50 ಲಕ್ಷವನ್ನು ಅವಿನಾಶ್ ಶೆಟ್ಟಿಗೆ ನೀಡಿದರೆ ಉದ್ಯೋಗ ದೊರಕುತ್ತದೆ ಎಂದು ಭರವಸೆ ನೀಡಿದ್ದರು’ ಎಂದು ಲೋಕೇಶ್‌ ಸುವರ್ಣ ದೂರಿನಲ್ಲಿ ತಿಳಿಸಿದ್ದಾರೆ’ ಎಂಬುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. 

‘2024ರ ಜೂನ್ 23ರಂದು ಅವಿನಾಶ್ ಶೆಟ್ಟಿ ಜೊತೆ ಮೊಬೈಲ್‌ನಲ್ಲಿ ಮಾತನಾಡಿದ್ದೆ. ಆತ ತಿಳಿಸಿದಂತೆ ನಾನು ಹಾಗೂ ನನ್ನ ಬಾವ ವಸಂತ ಪೂಜಾರಿ ನಗರದ ಲಾಲ್‌ಬಾಗ್‌ನ  ಪಾಲಿಕೆ ಕಟ್ಟಡದ ಬಳಿ ಆತನನ್ನು ಭೇಟಿಯಾಗಿದ್ದೆವು. ಭಾವ ವಸಂತ ಪೂಜಾರಿ ಅವರ ಮಗಳಿಗೆ ಉದ್ಯೋಗ ಕೊಡಿಸುವುದಾಗಿ  ಭರವಸೆ ನೀಡಿ ಅವಿನಾಶ್‌  ಆಕೆಯ ಬಯಡೇಟಾವನ್ನು ಪಡೆದುಕೊಂಡಿದ್ದ. ₹ 2.50 ಲಕ್ಷ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದ. ನನ್ನ ಸಹೋದರಿಯ ಚಿನ್ನಾಭರಣ ಅಡವಿಟ್ಟು ₹ 2.50 ಲಕ್ಷ ಚೆಕ್ ಅನ್ನು ಉಡುಪಿಯ ಅಂಬಲಪಾಡಿಯಲ್ಲಿ 2024ರ ಜುಲೈ 1ರಂದು ನೀಡಿದ್ದೆ. ಅದನ್ನು ನಮ್ರತಾ ಅವರು ಪಡೆದುಕೊಂಡಿದ್ದರು. ಬ್ಯಾಂಕ್ ಆಫ್ ಬರೋಡಾದ ಪಂಪ್‌ವೆಲ್‌ ಶಾಖೆಯಲ್ಲಿ ಅಕ್ಷತಾ ಎಂಬುವರ ಖಾತೆಗೆ ಆ ಚೆಕ್‌ ಮೂಲಕ 2024ರ ಜುಲೈ 3ರಂದು ಹಣ ಸಂದಾಯವಾಗಿದೆ. ಬಳಿಕ ಗೌತಮ್‌ ಶೆಟ್ಟಿ ಎಂಬುವರಿಗೆ ಗೂಗಲ್‌ ಪೇ ಮಾಡುವಂತೆ ಹೇಳಿ ಆರೋಪಿ ಆ ವ್ಯಕ್ತಿಯ ಖಾತೆಗೂ ಹಣ ಹಾಕಿಸಿಕೊಂಡಿದ್ದ. ಉದ್ಯೋಗದ ಬಗ್ಗೆ ವಿಚಾರಿಸಿದಾಗಲೆಲ್ಲ ಅದಿನ್ನೂ ಪ್ರಕ್ರಿಯೆಯಲ್ಲಿದೆ ಎಂದು ತಿಳಿಸಿದ್ದ’ ಎಂದು ದೂರಿನಲ್ಲಿ ಹೇಳಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ADVERTISEMENT

‘ಉದ್ಯೋಗ ಕೊಡಿಸುವ ಭರವಸೆ ನೀಡಿ ಹಣ ಪಡೆದು ಹಲವರಿಗೆ ವಂಚಿಸಿದ ಆರೋಪದ ಮೇಲೆ ಅವಿನಾಶ್ ಶೆಟ್ಟಿಯನ್ನು ಉರ್ವ  ಪೊಲೀಸರು ಬಂಧಿಸಿದ್ದು 2025ರ ಜ 5ರಂದು ತಿಳಿಯಿತು. ಅವಿನಾಶ್ ಶೆಟ್ಟಿ, ನಮ್ರತಾ, ಅಕ್ಷತಾ ಹಾಗೂ ಗೌತಮ್ ಶೆಟ್ಟಿ ಒಟ್ಟು ₹ 2.67 ಲಕ್ಷ ಹಣ ಪಡೆದು ಉದ್ಯೋಗವನ್ನು ಕೊಡಿಸದೇ ವಂಚಿಸಿದ್ದು, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಲೋಕೇಶ್ ಸುವರ್ಣ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.