ADVERTISEMENT

ಶತಮಾನದ ಗತ ನೆನಪಿನ ‘ಸಂಸ್ಕೃತಿ’

ಸೇಂಟ್ ಆಗ್ನಸ್ ಕಾಲೇಜಿನಲ್ಲಿ ಅಪರೂಪದ ವಸ್ತು ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 22 ಜೂನ್ 2022, 1:50 IST
Last Updated 22 ಜೂನ್ 2022, 1:50 IST
ಮಂಗಳೂರಿನ ಸೇಂಟ್ ಆಗ್ನಸ್‌ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಸಂಸ್ಕೃತಿ ವಸ್ತು ಪ್ರದರ್ಶನವನ್ನು ವಿದ್ಯಾರ್ಥಿಗಳು ವೀಕ್ಷಿಸಿದರು –ಪ್ರಜಾವಾಣಿ ಚಿತ್ರ
ಮಂಗಳೂರಿನ ಸೇಂಟ್ ಆಗ್ನಸ್‌ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಸಂಸ್ಕೃತಿ ವಸ್ತು ಪ್ರದರ್ಶನವನ್ನು ವಿದ್ಯಾರ್ಥಿಗಳು ವೀಕ್ಷಿಸಿದರು –ಪ್ರಜಾವಾಣಿ ಚಿತ್ರ   

ಮಂಗಳೂರು: ಕರ್ಲೆ, ಕೊದಂಟಿ, ಕುಟ್ಟಣಿಗೆ, ಮರದ ಮರಿಗೆ, ಸಾಂಬಾರು ಬಟ್ಟಲು, ಸೇಮಿಗೆ ಮಣೆ, ಮುಟ್ಟಾಳೆ, ಚೆನ್ನೆಮಣೆ, ತಾಮ್ರದ ಗಿಂಡಿ, ಕೊಡ, ಚೊಂಬು, ಶೇರು ಹೀಗೆ ಅಡುಗೆ ಮನೆಯನ್ನೇ ಸುತ್ತುವರಿದ ನೂರಾರು ವಸ್ತುಗಳು ಅಲ್ಲಿದ್ದವು. ಶತಮಾನದ ಆಗುಹೋಗುಗಳಿಗೆ ಸಾಕ್ಷಿಪ್ರಜ್ಞೆಯಂತಿದ್ದ ಇವನ್ನು ಕಂಡ ಹಿರಿಯರು ಗತ ನೆನಪನ್ನು ಮೆಲುಕು ಹಾಕುತ್ತಿದ್ದರೆ, ಮಕ್ಕಳು ಬೆರಗುಗಣ್ಣಿನಿಂದ ದಿಟ್ಟಿಸುತ್ತಿದ್ದರು.

ನಗರದ ಸೇಂಟ್ ಆಗ್ನಸ್‌ ಕಾಲೇಜಿನ ಕನ್ನಡ, ಇಂಗ್ಲಿಷ್, ಹಿಂದಿ ವಿಭಾಗಗಳು ಜಂಟಿಯಾಗಿ ಮಂಗಳವಾರ ಆಯೋಜಿಸಿದ್ದ ‘ಸಂಸ್ಕೃತಿ’ ವಸ್ತು ಪ್ರದರ್ಶನವು ಪರಂಪರೆಯ ಚಿತ್ರಣವನ್ನು ಕಲಾಕೃತಿ, ದೈನಂದಿನ ಬಳಕೆಯ ವಸ್ತುಗಳ ಮೂಲಕ ಅನಾವರಣಗೊಳಿಸಿತು. ಪ್ಲಾಸ್ಟಿಕ್ ರಹಿತವಾದ ಮರದ, ಮಣ್ಣಿನ, ಲೋಹದಿಂದ ತಯಾರಿಸಿದ ಅಪ್ಪದ ದೇಸೀ ಸೊಗಡಿನ ಸಾಮಗ್ರಿಗಳನ್ನು ಯುವಪೀಳಿಗೆಗೆ ಪರಿಚಯಿಸಿತು.

‘ನನ್ನ ಅಪ್ಪನಿಗೆ ಸಾಂಪ್ರದಾಯಿಕ ವಸ್ತುಗಳ ಬಗ್ಗೆ ಈಗಲೂ ಸೆಳೆತ. ಮನೆಯಲ್ಲಿ ತಾಮ್ರದ ಹಂಡೆ, ಎತ್ತಿನ ಗಾಡಿಯ ಚಕ್ರಗಳು, ಭತ್ತ ಅಳೆಯವ ಮಾಪಕ, ಭತ್ತ ಬಡಿಯವ ಹಲಗೆ ಇಂಥವುಗಳನ್ನೆಲ್ಲ ಜತನದಿಂದ ಕಾಪಿಟ್ಟಿದ್ದೇವೆ. ಇವನ್ನೆಲ್ಲ ಮಕ್ಕಳಿಗೆ ಪರಿಚಯಿಸಬೇಕೆಂಬ ತುಡಿತದಿಂದ ಇಲ್ಲಿಗೆ ತಂದಿದ್ದೇನೆ’ ಎಂದು ಮನೋವಿಜ್ಞಾನ ವಿಭಾಗದ ಉಪನ್ಯಾಸಕಿ ಅಮೋರಾ ಹೇಳುತ್ತಿದ್ದರು.

ADVERTISEMENT

‘ಭವಿಷ್ಯದ ದರ್ಶನಕ್ಕೆ ಗತದ ಅವಲೋಕನ ಆಗಬೇಕು. ಆ ಸ್ಪಷ್ಟತೆ ಇದ್ದಾಗ ಮಾತ್ರ ಮಕ್ಕಳಿಗೆ ಪರಂಪರೆಯ ಮಹತ್ವದ ಅರಿವಾಗುತ್ತದೆ ಎಂಬ ಸದುದ್ದೇಶದಿಂದ ಪ್ರಾಧ್ಯಾಪಕರು, ಪ್ರಾಂಶುಪಾಲರು, ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು ಸೇರಿ ಸಂಗ್ರಹಿಸಿದ ವಸ್ತುಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದೆವು. ಇದರಿಂದ ನಿರ್ದಿಷ್ಟ ವಸ್ತುವಿನ ರೂಢಿಗತ ಹೆಸರು, ಕಾಲಾವಧಿ, ಉಪಯೋಗದ ಪರಿಚಯ ಕೂಡ ಮಕ್ಕಳಿಗೆ ಆದಂತಾಗಿದೆ. ಅಡುಗೆಮನೆ, ಕೃಷಿ, ಪ್ರಸಾದನ, ಆಟಿಕೆ ಹೀಗೆ ಎಲ್ಲವನ್ನೂ ಒಳಗೊಂಡ ಸಾಮಗ್ರಿಗಳ ಸ್ಪರ್ಶದಿಂದ ಮಕ್ಕಳು ಹರ್ಷಗೊಂಡಿದ್ದಾರೆ’ ಎಂದು ಪ್ರಾಧ್ಯಾಪಕ ಡಾ. ಅರುಣ್ ಉಳ್ಳಾಲ್ ಪ್ರತಿಕ್ರಿಯಿಸಿದರು.

ಪ್ರಾಧ್ಯಾಪಕರಾದ ಸಂಧ್ಯಾ ನಾಯಕ್, ಆಶಾ, ಗೀತಾಂಜಲಿ ಪ್ರಭು, ಶೈಲಜಾ ಕೆ, ಶೈಲಜಾ ರೈ, ಮಾಳವಿಕಾ, ಡಾ. ವಿಶಾಲಾ ಬಿ.ಕೆ ಮತ್ತು ವಿದ್ಯಾರ್ಥಿಗಳು ಉಡುಪಿ, ನಾರಾವಿ, ಉಪ್ಪಿನಂಗಡಿ, ಕುಡುಪು ಹೀಗೆ ವಿವಿಧೆಡೆಗಳಿಂದ ಸಾಮಗ್ರಿಗಳನ್ನು ಸಂಗ್ರಹಿಸಿ ತಂದಿದ್ದರು. ಸೇಂಟ್ ಆನ್ಸ್, ಲೇಡಿಹಿಲ್ ಕಾನ್ವೆಂಟ್‌ನವರು ಕೂಡ ತಮ್ಮ ಸಂಗ್ರಹದಲ್ಲಿದ್ದ ಪುರಾತನ ವಸ್ತುಗಳನ್ನು ಪ್ರದರ್ಶನಕ್ಕಾಗಿ ನೀಡಿದ್ದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ, ಎಸ್‌ಡಿಎಂ ಕಾನೂನು ಕಾಲೇಜಿನ ಪ್ರಾಧ್ಯಾಪಕ ನರೇಶ್ ಮಲ್ಲಿಗೆಮಾಡು, ಕಾಲೇಜಿನ ಪ್ರಾಂಶುಪಾಲೆ ಡಾ. ಎಂ. ವೆನಿಸ್ಸಾ ಎಸಿ, ಕಲಾ ವಿಭಾಗದ ಡೀನ್ ಶಾಂತಿ ನಝರತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.