ADVERTISEMENT

ಏ.2ರಂದು ಸಂಘದ ಕಟ್ಟಡ ಲೋಕಾರ್ಪಣೆ

ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘಕ್ಕೆ ಬೆಳ್ಳಿಹಬ್ಬ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2023, 16:21 IST
Last Updated 30 ಮಾರ್ಚ್ 2023, 16:21 IST
ಮಂಗಳೂರಿನ ಜೆಪ್ಪು ಮೋರ್ಗನ್ಸ್ ಗೇಟ್‌ನಲ್ಲಿ ₹8 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘದ ಕಟ್ಟಡ
ಮಂಗಳೂರಿನ ಜೆಪ್ಪು ಮೋರ್ಗನ್ಸ್ ಗೇಟ್‌ನಲ್ಲಿ ₹8 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘದ ಕಟ್ಟಡ   

ಮಂಗಳೂರು: ಕಿರು ಕಸುಬುದಾರರಿಗೆ ಮತ್ತು ದುಡಿಯುವ ವರ್ಗಕ್ಕೆ ನೆರವಾಗುವ ಉದ್ದೇಶದಿಂದ 1997ರಲ್ಲಿ ನಿರ್ಮಿಸಲಾದ ಮಂಗಳೂರಿನ ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘದ ಕಟ್ಟಡದ ಉದ್ಘಾಟನೆ ಮತ್ತು ಬೆಳ್ಳಿಹಬ್ಬದ ಸಂಭ್ರಮಾಚರಣೆ ಏ.2ರಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಕೃಷ್ಣ ಜೆ.ಪಾಲೇಮಾರ್ ತಿಳಿಸಿದರು.‌‌

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂಘದ ರಜತಮಹೋತ್ಸವ ನೆನಪಿಗಾಗಿ ಮಂಗಳೂರಿನ ಜೆಪ್ಪು ಮೋರ್ಗನ್ಸ್‌ಗೇಟ್ ರಾಮಕ್ಷತ್ರಿಯ ಮಂದಿರದ ಬಳಿ ಸುಮಾರು ₹8 ಕೋಟಿ ವೆಚ್ಚದಲ್ಲಿ ಸ್ವಂತ ಕಟ್ಟಡವನ್ನು ನಿರ್ಮಿಸಲಾಗಿದೆ. ಈ ಕಟ್ಟಡದಲ್ಲಿ ಹೊಸ ಸೌಲಭ್ಯಗಳನ್ನು ಲೋಕಾರ್ಪಣೆ ಮಾಡಲಾಗುತ್ತಿದೆ. ಕಟ್ಟಡದಲ್ಲಿ ಗುರುವಾರ ಪೂಜಾವಿಧಿಗಳು ನಡೆದಿದ್ದು, ಏ.2ರಂದು ಬೆಳಿಗ್ಗೆ 10.30ಕ್ಕೆ ಉದ್ಘಾಟನೆ ನಡೆಯಲಿದೆ’ ಎಂದರು.‌

ಸಂಸದ ನಳಿನ್ ಕುಮಾರ್ ಕಟೀಲ್‌, ಶಾಸಕ ಡಿ.ವೇದವ್ಯಾಸ ಕಾಮತ್, ಮೇಯರ್‌ ಜಯಾನಂದ ಅಂಚನ್, ನಿಟ್ಟೆ ವಿಶ್ವವಿದ್ಯಾಲಯದ ಸಹ ಕುಲಪತಿ ಡಾ.ಶಾಂತಾರಾಮ ಶೆಟ್ಟಿ, ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್, ಮಾಜಿ ಶಾಸಕ ಜೆ.ಆರ್. ಲೋಬೊ, ಸಹಕಾರ ಸಂಘಗಳ ಉಪ ನಿಬಂಧಕ ಎಚ್.ಎನ್. ರಮೇಶ್, ಪಾಲಿಕೆ ಸದಸ್ಯೆ ಭಾನುಮತಿ ಪಿ.ಎಸ್. ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.‌

ADVERTISEMENT

25 ವರ್ಷಗಳ ಹಿಂದೆ ₹3 ಲಕ್ಷ ಮೂಲ ಬಂಡವಾಳದೊಂದಿಗೆ 9 ನಿರ್ದೇಶಕರು ಮತ್ತು 800 ಷೇರುದಾರರೊಂದಿಗೆ ಆರಂಭಗೊಂಡ ಸಂಘವು, ಈಗ ₹2.8 ಕೋಟಿ ಬಂಡವಾಳದೊಂದಿಗೆ 5500ಕ್ಕೂ ಅಧಿಕ ಷೇರುದಾರರನ್ನು ಹೊಂದಿದೆ. ವಾರ್ಷಿಕವಾಗಿ ₹ 400 ಕೋಟಿಗೂ ಅಧಿಕ ವ್ಯವಹಾರ ನಡೆಸುತ್ತಿದೆ. 2022ರ ಸಾಲಿನಲ್ಲಿ ₹1 ಕೋಟಿಗೂ ಮಿಕ್ಕಿ ಲಾಭ ಗಳಿಸಿ, ಗ್ರಾಹಕರಿಗೆ ಶೇ 20 ಲಾಭಾಂಶ ನೀಡಿದೆ. ಸಂಘ ಸ್ಥಾಪನೆಯಾದ ವರ್ಷದಿಂದ ಈವರೆಗೆ ಎ ಗ್ರೇಡ್ ಮಾನ್ಯತೆ ಪಡೆದಿದೆ’ ಎಂದು ಮಾಹಿತಿ ನೀಡಿದರು.‌‌

ಸಂಘವು ಜೆಪ್ಪು ಮೋರ್ಗನ್ಸ್‌ಗೇಟ್‌ನಲ್ಲಿ ಪ್ರಧಾನ ಕಚೇರಿ ಮತ್ತು ಶಾಖೆಯನ್ನು ಹೊಂದಿದ್ದು, ಹಂಪನಕಟ್ಟೆ, ಕಾವೂರು, ಕಾಟಿಪಳ್ಳ-ಕೈಕಂಬ ಮತ್ತು ಉಳ್ಳಾಲ ಮುಂತಾದೆಡೆ 5 ಶಾಖೆ ಹೊಂದಿದೆ. ಮುಂದಿನ ವರ್ಷದಲ್ಲಿ ಮತ್ತೆ ಐದು ಶಾಖೆಗಳನ್ನು ತೆರೆಯಲು ಯೋಜನೆ ರೂಪಿಸಲಾಗಿದೆ ಎಂದರು.

ಸಂಘದ ಉಪಾಧ್ಯಕ್ಷ ಕೆ. ದಿನೇಶ್ ರಾವ್, ನಿರ್ದೇಶಕರಾದ ಜೆ.ಕೆ.ರಾವ್, ಪಿ. ಬಾಬು, ಕೆ.ಎಸ್. ರಂಜನ್, ವಾರಿಜ ಕೆ., ಡಾ.ಎಚ್. ಪ್ರಭಾಕರ್, ಡಾ.ಮಂಜುಳಾ ಎ. ರಾವ್, ಕೆ.ರವೀಂದ್ರ, ಕೆ.ಜೈರಾಜ್‌ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಿವಪ್ರಸಾದ್ ಪಿ.ಎ. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.