ADVERTISEMENT

ವಿದ್ಯಾರ್ಥಿ ಬದುಕು ಅವಕಾಶಗಳ ಸಾಗರ: ಬಂಗೇರ

ಶ್ರೀಗುರುದೇವ ಕಾಲೇಜಿನಲ್ಲಿ ಭಿತ್ತಿ ಪತ್ರಿಕೆ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2022, 14:45 IST
Last Updated 1 ಆಗಸ್ಟ್ 2022, 14:45 IST
ಬೆಳ್ತಂಗಡಿ ಶ್ರೀಗುರುದೇವ ಪ್ರಥಮದರ್ಜೆ ಕಾಲೇಜಿನ ಸಾಹಿತ್ಯ ಮತ್ತು ಲಲಿತ ಕಲಾ ಸಂಘದ ವತಿಯಿಂದ ನಡೆದ ಭಿತ್ತಿಪತ್ರಿಕೆ ಅನಾವರಣಗೊಳಿಸಿ ಮಾಜಿ ಶಾಸಕ ಕೆ. ವಸಂತ ಬಂಗೇರ ಮಾತನಾಡಿದರು.
ಬೆಳ್ತಂಗಡಿ ಶ್ರೀಗುರುದೇವ ಪ್ರಥಮದರ್ಜೆ ಕಾಲೇಜಿನ ಸಾಹಿತ್ಯ ಮತ್ತು ಲಲಿತ ಕಲಾ ಸಂಘದ ವತಿಯಿಂದ ನಡೆದ ಭಿತ್ತಿಪತ್ರಿಕೆ ಅನಾವರಣಗೊಳಿಸಿ ಮಾಜಿ ಶಾಸಕ ಕೆ. ವಸಂತ ಬಂಗೇರ ಮಾತನಾಡಿದರು.   

ಬೆಳ್ತಂಗಡಿ: ‘ವಿದ್ಯಾರ್ಜನೆಯೊಂದೇ ವಿದ್ಯಾರ್ಥಿ ಬದುಕಿನ ಗುರಿಯಾಗಿರಬಾರದು. ತನ್ನನ್ನು ತಾನು ಬೆಳೆಸಿಕೊಳ್ಳಲು ಕಾಲೇಜಿನ ಒಳಗಿನ ವಾತಾವರಣದ ಮಧ್ಯೆ ಸಿಗುವ ಅವಕಾಶವನ್ನು ಚೆನ್ನಾಗಿ ಉಪಯೋಗಿಸಿಕೊಳ್ಳಬೇಕು’ ಎಂದು ಶ್ರೀಗುರುದೇವ ವಿದ್ಯಾಸಂಸ್ಥೆಯ ಅಧ್ಯಕ್ಷ, ಮಾಜಿ ಶಾಸಕ ಕೆ. ವಸಂತ ಬಂಗೇರ ಹೇಳಿದರು.

ಶ್ರೀಗುರುದೇವ ಪ್ರಥಮ ದರ್ಜೆ ಕಾಲೇಜಿನ ಸಾಹಿತ್ಯ ಮತ್ತು ಲಲಿತ ಕಲಾ ಸಂಘದ ವತಿಯಿಂದ ‘ಜ್ಞಾನ ಸಂಗಮ’ ಹಾಗೂ ‘ಸ್ಟೂಡೆಂಟ್ ಫಲ್ಸ್’ ಭಿತ್ತಿ ಪತ್ರಿಕೆಯನ್ನು ಸೋಮವಾರ ಅನಾವರಣಗೊಳಿಸಿ, ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ವಿದ್ಯಾರ್ಥಿ ಬದುಕು ಅವಕಾಶಗಳ ಸಾಗರ. ವಿದ್ಯಾರ್ಥಿಗಳ ಪ್ರತಿಭೆಗೆ ಪ್ರೋತ್ಸಾಹದ ಜೊತೆಗೆ ಶಿಸ್ತು ಮತ್ತು ಸಂಸ್ಕಾರ ಕಲಿಸುವ ಕೇಂದ್ರ ಶಿಕ್ಷಣ ಸಂಸ್ಥೆ. ಇಲ್ಲಿ ತನ್ನನ್ನು ತಾನು ತೊಡಗಿಸಿಕೊಂಡವರು ಸಮಾಜದಲ್ಲಿ ಶ್ರೇಷ್ಠ ನಾಗರಿಕನಾಗಿ ಕಾಣಿಸಿಕೊಳ್ಳಲು ಸಾಧ್ಯ. ವಿದ್ಯಾರ್ಥಿಗಳ ಪ್ರತಿಭೆಗೆ ಸದಾ ಪ್ರೋತ್ಸಾಹ ನೀಡಲು ಬದ್ಧ’ ಎಂದರು.

ADVERTISEMENT

ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ್ ಬಿ. ಶಿರ್ಲಾಲ್ ಮಾತನಾಡಿ, ‘ಬರವಣಿಗೆ ಬದುಕು ರೂಪಿಸುವ ಕಲೆ. ಉತ್ತಮ ಬರವಣಿಗೆಯಿಂದ ನಮ್ಮ ವ್ಯಕ್ತಿತ್ವ ಅನಾವರಣವಾಗುವುದು. ಶಾಲಾ ಕಾಲೇಜುಗಳ ಮಧ್ಯೆ ಸಿಗುವ ಭಿತ್ತಿ ಪತ್ರಿಕೆಗಳಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು’ ಎಂದರು.

ಕಾಲೇಜಿನ ಪ್ರಾಂಶುಪಾಲೆ ಡಾ.ಸವಿತಾ ಮಾತನಾಡಿ, ‘ವಿದ್ಯಾರ್ಥಿಗಳ ಪ್ರತಿಭೆಗೆ ಕಾಲೇಜಿನ ಒಳಗೆ ಅನೇಕ ಸಂಘಗಳನ್ನು ಸ್ಥಾಪಿಸಲಾಗಿದೆ. ವಿದ್ಯಾರ್ಥಿಗಳು ಇದರಲ್ಲಿ ದುಡಿಸಿಕೊಂಡು ತನ್ನ ವ್ಯಕ್ತಿತ್ವವನ್ನು ಚೆನ್ನಾಗಿ ಬೆಳೆಸಿಕೊಳ್ಳಬೇಕು’ ಎಂದು ಹೇಳಿದರು.

ಕಾಲೇಜಿನಲ್ಲಿ 6 ವರ್ಷ ಕಾಲ ರಾಜ್ಯಶಾಸ್ತ್ರ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ ಹರಿಣಾಕ್ಷಿ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಗಣೇಶ್ ಬಿ. ಶಿರ್ಲಾಲ್ ಅವರನ್ನು ಸನ್ಮಾನಿಸಲಾಯಿತು.

ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕ ಶಮೀವುಲ್ಲಾ ಸ್ವಾಗತಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ಮನುಜ ಪ್ರಸಾದ್ ಅತಿಥಿಗಳ ಪರಿಚಯ ಮಾಡಿದರು. ಉಪನ್ಯಾಸಕಿ ಪವಿತ್ರಾ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಸೌಮ್ಯಾ ಕೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.