ADVERTISEMENT

ಎಸ್‌ಸಿಡಿಸಿಸಿ ಬ್ಯಾಂಕ್ ಕಾರ್ಯಕ್ಕೆ ಶ್ಲಾಘನೆ

ಅಮೆರಿಕ ಪೆನ್ಸಿಲ್ವೇನಿಯಾ ಯುನಿವರ್ಸಿಟಿ ತಂಡ ಭೇಟಿ

​ಪ್ರಜಾವಾಣಿ ವಾರ್ತೆ
Published 3 ಜನವರಿ 2019, 14:48 IST
Last Updated 3 ಜನವರಿ 2019, 14:48 IST
ಮಂಗಳೂರಿನ ಎಸ್‌ಸಿಡಿಸಿಸಿ ಬ್ಯಾಂಕ್‌ಗೆ ಭೇಟಿ ನೀಡಿದ ಯುನಿವರ್ಸಿಟಿ ಆಫ್ ಪೆನ್ಸಿಲ್ವೇನಿಯಾದ ಪ್ರಾಧ್ಯಾಪಕರು ಮತ್ತು ಅಧ್ಯಯನ ತಂಡ, ಅಧ್ಯಕ್ಷ ಎಂ.ಎನ್‌. ರಾಜೇಂದ್ರಕುಮಾರ್ ಅವರೊಂದಿಗೆ ಚರ್ಚಿಸಿತು.
ಮಂಗಳೂರಿನ ಎಸ್‌ಸಿಡಿಸಿಸಿ ಬ್ಯಾಂಕ್‌ಗೆ ಭೇಟಿ ನೀಡಿದ ಯುನಿವರ್ಸಿಟಿ ಆಫ್ ಪೆನ್ಸಿಲ್ವೇನಿಯಾದ ಪ್ರಾಧ್ಯಾಪಕರು ಮತ್ತು ಅಧ್ಯಯನ ತಂಡ, ಅಧ್ಯಕ್ಷ ಎಂ.ಎನ್‌. ರಾಜೇಂದ್ರಕುಮಾರ್ ಅವರೊಂದಿಗೆ ಚರ್ಚಿಸಿತು.   

ಮಂಗಳೂರು: ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರ ಆರ್ಥಿಕ ಅಭಿವೃದ್ಧಿಗಾಗಿ ವಿಶೇಷವಾಗಿ ಶ್ರಮಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಕಾರ್ಯನಿರ್ವಹಣೆಯನ್ನು ಅಮೆರಿಕದ ಯುನಿವರ್ಸಿಟಿ ಆಫ್ ಪೆನ್ಸಿಲ್ವೇನಿಯಾದ ಪ್ರಾಧ್ಯಾಪಕರು ಮತ್ತು ಅಧ್ಯಯನ ತಂಡ ಶ್ಲಾಘಿಸಿದೆ.

ಗುರುವಾರ ನಗರದ ಎಸ್‌ಸಿಡಿಸಿಸಿ ಬ್ಯಾಂಕ್ ಪ್ರಧಾನ ಕಚೇರಿಗೆ ಭೇಟಿ ನೀಡಿದ ಈ ಅಧ್ಯಯನ ತಂಡ, ಮೈಕ್ರೋ ಫೆನಾನ್ಸ್ ಮತ್ತು ಸ್ವಸಹಾಯ ಗುಂಪು ಯೋಜನೆಯ ಅನುಷ್ಠಾನದಲ್ಲಿ ಬ್ಯಾಂಕ್ ನಿರ್ವಹಿಸುತ್ತಿರುವ ಕಾರ್ಯದ ಬಗ್ಗೆ ಅಧ್ಯಯನ ನಡೆಸಿತು.

ಬ್ಯಾಂಕಿನ ಅಧ್ಯಕ್ಷ ಎಂ.ಎನ್. ರಾಜೇಂದ್ರಕುಮಾರ್ ಮಾತನಾಡಿ, ಬ್ಯಾಂಕ್ ಪ್ರವರ್ತಿತ ನವೋದಯ ಸ್ವಸಹಾಯ ಸಂಘಗಳು ಗ್ರಾಮೀಣ ಪ್ರದೇಶದಲ್ಲಿ ಬಡವರ್ಗದ ಜನರಿಗೆ ಆರ್ಥಿಕ ಸ್ವಾವಲಂಬನೆಯನ್ನು ನೀಡುತ್ತಿವೆ. ಮಹಿಳಾ ಸಬಲೀಕರಣದ ಹಾದಿಯಲ್ಲಿ ಆದಾಯೋತ್ವನ್ನ ಚಟುವಟಿಕೆಗಳಿಗೆ ಸಾಲ ಸೌಲಭ್ಯಗಳನ್ನು ನೀಡಿ, ಮುಖ್ಯವಾಗಿ ಮಹಿಳೆಯರ ಜೀವನದಲ್ಲಿ ಆರ್ಥಿಕ, ಸಾಮಾಜಿಕ ಶೈಕ್ಷಣಿಕ ಉನ್ನತಿಗೆ ಬ್ಯಾಂಕ್ ಪ್ರೇರಕ ಶಕ್ತಿಯಾಗಿದೆ ಎಂದರು.

ADVERTISEMENT

ಯುನಿವರ್ಸಿಟಿ ಆಫ್ ಪೆನ್ಸಿಲ್ವೇನಿಯಾದ ಸಮಾಜಸೇವೆ ಮತ್ತು ಅಧ್ಯಯನ ತಂಡದ ನೇತೃತ್ವ ವಹಿಸಿದ ಪ್ರೊ. ಪೆಮೀಡಾ ಹ್ಯಾಂಡಿ ಮಾತನಾಡಿ, ಎಸ್‌ಸಿಡಿಸಿಸಿ ಬ್ಯಾಂಕ್‌ನಿಂದ ಗ್ರಾಮಾಂತರ ಪ್ರದೇಶದ ಬಡವರ್ಗದ ಜನರು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸ್ವಾವಲಂಬಿಗಳಾಗಿದ್ದಾರೆ. ಬ್ಯಾಂಕ್ ವಿಶೇಷವಾಗಿ ಮಹಿಳೆಯರ ಶಕ್ತಿ ಸಂವರ್ಧನೆಗೆ ಹೆಚ್ಚು ಮಹತ್ವವನ್ನು ನೀಡುತ್ತಿದೆ. ಬ್ಯಾಂಕಿನ ಗುಣಾತ್ಮಕ ಬೆಳವಣೆಗೆಯಲ್ಲಿ ಪ್ರೇರಕ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತಿರುವ ರಾಜೇಂದ್ರ ಕುಮಾರ್ ಅವರ ಮುಂದಾಳತ್ವ ಶ್ಲಾಘನೀಯ ಎಂದು ಹೇಳಿದರು.

ಬ್ಯಾಂಕ್ ಹಾಗೂ ನವೋದಯ ಟ್ಟಸ್ಟ್‌ನ ಕಾರ್ಯಾಚರಣೆ ಬಗ್ಗೆ ಅಧ್ಯಯನ ನಡೆಸಲು ಈ ತಂಡ ಏಳು ವರ್ಷಗಳಿಂದ ಎಸ್‌ಸಿಡಿಸಿಸಿ ಬ್ಯಾಂಕ್‌ಗೆ ಭೇಟಿ ನೀಡುತ್ತಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯ ವಿಕಸನಕ್ಕೆ ಮತ್ತು ಸಾಮಾಜಿಕ ಪರಿವರ್ತನೆಗೆ ಬ್ಯಾಂಕ್ ಮತ್ತು ನವೋದಯ ಟ್ರಸ್ಟ್ ಮಾಡುತ್ತಿರುವ ಸಮಾಜಸೇವೆಯನ್ನು ಫ್ರೊ. ಪೆಮೀಡಾ ಹ್ಯಾಂಡಿ ಪ್ರಶಂಸಿಸಿದರು.

ತಂಡದಲ್ಲಿ ಮ್ಯಾಕೆನ್ಸೈ ಮಾರಿಸನ್, ಕ್ಯಾಥರಿನ್ ಯಂಗ್ ಲೋಟ್, ಡೆನಿಯಲ್ ರೊಚ್‌ಪೋರ್ಡ್, ಮೊರ್ಗನ್ ಸ್ಕಿಡ್‍ಮೊರ್, ಡೆನಿಯಲ್ ಮ್ಯಾಕ್ಸ್ ಅಡಮ್ಸ್, ಮಾರ್ಗರೇಟ್ ಪ್ಲೇಮಿಂಗ್, ಆಶ್ಲೇ ಫ್ರಾಂಕ್ಸ್, ರೋಸ್ ಬ್ರೌನ್, ಕ್ರಿಸ್ಟಿನಾ ಗಿಲ್‍ಫಿಲನ್, ಅಧಿತಿ ಡೇ ಸರ್ಕಾರ್, ಹಾಗೂ ನಿಟ್ಟೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ವಿನೋದ್ ದೀಕ್ಷಿತ್ ಇದ್ದರು.

ಬ್ಯಾಂಕಿನ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕರಾದ ಟಿ,ಜಿ.ರಾಜಾರಾಮ್ ಭಟ್, ಭಾಸ್ಕರ್ ಎಸ್. ಕೋಟ್ಯಾನ್, ಶಶಿಕುಮಾರ್ ರೈ, ಬ್ಯಾಂಕಿನ ಸಿಇಒ ರವೀಂದ್ರ ಬಿ., ಬ್ಯಾಂಕಿನ ಮಹಾಪ್ರಬಂಧಕ ಗೋಪಿನಾಥ್ ಭಟ್, ನವೋದಯ ಟ್ರಸ್ಟ್ ಸಿಇಒ ಪೂರ್ಣಿಮಾ ಶೆಟ್ಟಿ ಹಾಗೂ ಬ್ಯಾಂಕಿನ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.