ADVERTISEMENT

ವಕ್ಫ್ ತಿದ್ದುಪಡಿ ಮಸೂದೆ ಸಂವಿಧಾನ ವಿರೋಧಿ: ದಿನೇಶ್‌ ಗುಂಡೂರಾವ್‌

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2025, 13:16 IST
Last Updated 5 ಏಪ್ರಿಲ್ 2025, 13:16 IST
ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್   

ಮಂಗಳೂರು: ‘ಸಂಸತ್ತಿನಲ್ಲಿ ಅಂಗೀಕಾರಗೊಂಡಿರುವ ವಕ್ಫ್ ತಿದ್ದುಪಡಿ ಮಸೂದೆ ಸಂವಿಧಾನ ವಿರೋಧಿ. ಇದನ್ನು ನಾವು ನ್ಯಾಯಾಲಯಗಳಲ್ಲಿ ಪ್ರಶ್ನೆ ಮಾಡಬೇಕಾಗುತ್ತದೆ. ಈ ವಿಚಾರದಲ್ಲಿ ಯಾರನ್ನೂ ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂಬ ಧೋರಣೆಯನ್ನು ಪ್ರದರ್ಶಿಸುವ ಮೂಲಕ ಕೇಂದ್ರ ಸರ್ಕಾರವು ದಬ್ಬಾಳಿಕೆ ನಡೆಸುತ್ತಿದೆ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್‌ ಹೇಳಿದರು.

ಸುದ್ದಿಗಾರರ ಪ್ರಶ್ನೆಗೆ ಶನಿವಾರ ಇಲ್ಲಿ ಪ್ರತಿಕ್ರಿಯಿಸಿದ ಅವರು, ‘ವಕ್ಫ್‌ನಲ್ಲಿ ಆಸ್ತಿಗೆ ಸಂಬಂಧಿಸಿದ ಏನಾದರೂ ತಪ್ಪುಗಳು ಆಗಿದ್ದರೆ ಅಥವಾ ವಕ್ಫ್‌ ಭೂಮಿ ದುರುಪಯೋಗ ಆಗಿದ್ದರೆ ಬೇಕಿದ್ದರೆ ಕ್ರಮ ಕೈಗೊಳ್ಳಲಿ. ಅದು ಬೇರೆ ವಿಚಾರ. ಕೇಂದ್ರ ಸರ್ಕಾರ ಅಂಗೀಕರಿಸಿರುವ ಮಸೂದೆಗೂ ಅದಕ್ಕೂ ಸಂಬಂಧವಿಲ್ಲ’ ಎಂದರು.

‘ಕೇಂದ್ರ ಸರ್ಕಾರದ ನಡೆ ದ್ವೇಷದಿಂದ ಕೂಡಿದೆ. ಇಂತಹ ಸೂಕ್ಷ್ಮ ವಿಷಯದಲ್ಲಿ ದ್ವೇಷ ಸಾಧಿಸುವಂಥದ್ದು ಸರಿಯಲ್ಲ. ಕೇಂದ್ರವು ಸಂಯಮದಿಂದ ನಡೆದುಕೊಳ್ಳಬೇಕಿತ್ತು. ಹಿಂದೂ ಧರ್ಮದ ಟ್ರಸ್ಟ್‌ಗಳು, ವಕ್ಫ್ ಮಂಡಳಿ ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿದೆ. ಭೂಮಿ ಮೇಲೆ ಹಕ್ಕು ಇರುವುದು ರಾಜ್ಯಕ್ಕೆ. ರಾಜ್ಯದ ಹಕ್ಕನ್ನು ಕಿತ್ತುಕೊಳ್ಳುವ ಯತ್ನವನ್ನು ಕೇಂದ್ರ ಸರ್ಕಾರ ಮಾಡಿದೆ’ ಎಂದರು.

ADVERTISEMENT

ಕೋವಿಡ್ ಸಂದರ್ಭದಲ್ಲಿ ಆಗಿರುವ ಅಕ್ರಮಗಳ ಕುರಿತಂತೆ ನ್ಯಾ.ಜಾನ್‌ ಮೈಕಲ್‌ ಡಿಕುನ್ಹ ಸಮಿತಿಯ ವರದಿ ಕುರಿತು ಪ್ರತಿಕ್ರಿಯಿಸಿದ ದಿನೇಶ್ ಗುಂಡೂರಾವ್,‘ಸಂಪುಟ ಉಪಸಮಿತಿಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿದೆ. ಈ ವಿಚಾರದಲ್ಲಿ ನಮ್ಮ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ಶೋಕಾಸ್ ನೀಡಿ ವಿವರಣೆ ಕೇಳಿದ್ದೇವೆ. ವಿಚಾರಣೆ ಪ್ರಗತಿಯಲ್ಲಿದೆ. ತನಿಖೆಯನ್ನು ಎಸ್ಐಟಿಗೂ ವಹಿಸಲಾಗಿದೆ. ನೇರವಾಗಿ ಹೀಗೆಯೇ ಮಾಡಬೇಕು ಎಂದು ನಾವು ಹೇಳಲಿಕ್ಕೆ ಆಗುವುದಿಲ್ಲ’ ಎಂದರು.

ಮಡಿಕೇರಿಯಲ್ಲಿ ಬಿಜೆಪಿ ಕಾರ್ಯಕರ್ತ ವಿನಯ್ ಆತ್ಮಹತ್ಯೆ ಕುರಿತು ಪ್ರತಿಕ್ರಿಯಿಸಿದ ಸಚಿವ, ‘ಯಾವುದೇ ಪ್ರಕರಣದಲ್ಲೂ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳ ಬೇಕಾಗುತ್ತದೆ. ಇದರಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ. ಇವೆಲ್ಲಾ ಗಂಭೀರ ಮತ್ತು ಸೂಕ್ಷ್ಮವಾದ ವಿಷಯ. ಈ ಪ್ರಕರಣದ ಪೂರ್ತಿ ಮಾಹಿತಿ ನನಗೆ ಇಲ್ಲ. ಹಾಗಾಗಿ ಹೆಚ್ಚೇನೂ ಹೇಳುವುದಿಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.