ADVERTISEMENT

ಮೀನುಗಾರರ ಅಭಿವೃದ್ಧಿಗೆ ಯೋಜನೆ

ರಾಷ್ಟ್ರೀಯ ಮೀನು ಕೃಷಿಕರ ದಿನ: ‘ವೆಬಿನಾರ್’ನಲ್ಲಿ ಸಚಿವ ಕೋಟ

​ಪ್ರಜಾವಾಣಿ ವಾರ್ತೆ
Published 11 ಜುಲೈ 2020, 8:06 IST
Last Updated 11 ಜುಲೈ 2020, 8:06 IST

ಮಂಗಳೂರು: ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ರಾಜ್ಯದ ಕರಾವಳಿ ಮೀನುಗಾರರಿಗೆ ಮತ್ತು ಒಳನಾಡು ಮೀನು ಕೃಷಿಕರಿಗೆ ಹಲವಾರು ಮಹತ್ತರ ಯೋಜನೆಗಳನ್ನು ಕೈಗೊಳ್ಳಲಾಗುತ್ತಿದ್ದು, ಮೀನುಗಾರರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ರಾಷ್ಟ್ರೀಯ ಮೀನು ಕೃಷಿಕರ ದಿನಾಚರಣೆ ಅಂಗವಾಗಿ ನಗರದ ಮೀನುಗಾರಿಕಾ ಕಾಲೇಜಿನ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಆನ್‌ಲೈನ್ ವಿಚಾರ ಸಂಕಿರಣ ‘ವೆಬಿನಾರ್’ನಲ್ಲಿ ಅವರು ಮಾತನಾಡಿದರು.

ಕಾಲೇಜಿನಲ್ಲಿ ನಡೆಯುತ್ತಿರುವ ಸಂಶೋಧನೆಯ ಬಗ್ಗೆ ವಿವರಿಸಿದರು. ಕಾಲೇಜಿನ ಡೀನ್ ಡಾ.ಎ.ಸೆಂಥಿಲ್ ವೆಲ್, ‘ವಿಶ್ವ ಬ್ಯಾಂಕ್‌ನ ಧನಸಹಾಯದಿಂದ ₹36 ಕೋಟಿಗಳ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್‌ ವತಿಯಿಂದ ₹4.75 ಕೋಟಿ ವೆಚ್ಚದ ಕೌಶಲಾಭಿವೃದ್ಧಿ ಮತ್ತು ಸುರಕ್ಷಿತ ತರಬೇತಿ ಕೇಂದ್ರದ ಸ್ಥಾಪನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ADVERTISEMENT

ಮೀನುಗಾರಿಕೆ ಇಲಾಖೆಯ ನಿರ್ದೇಶಕ ರಾಮಕೃಷ್ಣ, ಜಂಟಿ ನಿರ್ದೇಶಕ ರಾಮಾಚಾರಿ, ಇಲಾಖೆಯಿಂದ ಮೀನುಗಾರರಿಗೆ ಇರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ಗುಜರಾತನ ಉದ್ಯಮಿ ಡಾ.ಮನೋಜ್ ಶರ್ಮ, ಉಪ್ಪುನೀರಿನ ಸಿಗಡಿ ಕೃಷಿ ಪ್ರಗತಿ ಹೊಂದುತ್ತಿರುವ ಬಗ್ಗೆ ವಿವರಿಸಿ, ಭಾರತದ ಆರ್ಥಿಕ ಮಟ್ಟವನ್ನು ಹೆಚ್ಚಿಸುವ ಕುರಿತು ಮಾಹಿತಿ ನೀಡಿದರು. ನಗರದ ಪ್ರಗತಿಪರ ಮೀನು ಕೃಷಿಕ ಸನ್ನಿ ಡಿಸೋಜ, ಸಿಗಡಿ ಕೃಷಿಯಲ್ಲಿ ಬಯೋಫ್ಲಾಕ್ ತಾಂತ್ರಿಕತೆಯ ಬಗ್ಗೆ ಮಾಹಿತಿ ಒದಗಿಸಿದರು. ಕುವೈತ್‌ನ ಮೀನುಗಾರಿಕಾ ತಜ್ಞ ಡಾ.ಅಜಾದ್ ಇಸ್ಮಾಯಿಲ್ ಸಾಹೇಬ್, ಜಲ ಕೃಷಿಯಲ್ಲಿ ಜಲಚರ ಪ್ರಾಣಿಗಳ ಆರೋಗ್ಯ ಮತ್ತು ರೋಗಗಳ ನಿರ್ವಹಣೆಯ ಬಗ್ಗೆ ವಿವರಿಸಿದರು.

ಮೀನುಗಾರಿಕಾ ಕಾಲೇಜಿನ ಪ್ರಾಧ್ಯಾಪಕ ಡಾ.ಎ.ಟಿ. ರಾಮಚಂದ್ರ ನಾಯ್ಕ, ಕಾಲೇಜಿನ ಹೊಯಿಗೆ ಬಜಾರ್‌ ಕ್ಯಾಂಪಸ್‌ನಲ್ಲಿ ಆರಂಭಿಸಲಾಗುತ್ತಿರುವ ತರಬೇತಿ ಕೇಂದ್ರ ಹಾಗೂ ನಿರುದ್ಯೋಗಿಗಳಿಗೆ ತರಬೇತಿ ನೀಡುವ ಕುರಿತು ತಿಳಿಸಿದರು.

ಕಾಲೇಜಿನ ಎಕ್ರಿಪ್ ಪ್ರಾಜೆಕ್ಟ್‌ನ ಹಿರಿಯ ವಿಜ್ಞಾನಿ ಡಾ.ಲಕ್ಷ್ಮೀಶ ಮಾತನಾಡಿ, ತಾವು ತಯಾರಿಸಿರುವ ಮೀನಿನ ಹುರುಪೆ ಮತ್ತು ಮೀನು ತುಂಡು ಮಾಡುವ ತಾಂತ್ರಿಕ ಸೈಕಲ್‌ನ ಬಗ್ಗೆ ತಿಳಿಸಿದರು.

ನಿವೃತ್ತ ಪ್ರಾಧ್ಯಾಪಕರಾದ ಡಾ.ಡಿ.ಸೀನಪ್ಪ, ಡಾ.ಎಸ್.ಎಂ. ಶಿವಪ್ರಕಾಶ್, ವಿಜ್ಞಾನಿ ಡಾ.ಎನ್.ರಾಮಯ್ಯ ಮಾತನಾಡಿದರು. ಪ್ರಾಧ್ಯಾಪಕ ಡಾ.ಶಿವಕುಮಾರ್ ಎಂ., ಈ ವೆಬ್‌ನಾರ್ ಆಯೋಜಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.