ADVERTISEMENT

ಆರ್ಥಿಕವಾಗಿ ಬಲಾಢ್ಯವಾಗದಿದ್ದರೆ ಭಾರತವನ್ನು ಜಗತ್ತು ಗಂಭೀರವಾಗಿ ಪರಿಗಣಿಸದು:ರಾಮ್

'ಮಂಗಳೂರು ಸಾಹಿತ್ಯ ಉತ್ಸವ'ದಲ್ಲಿ ರಾಮ್‌ ಮಾಧವ್‌

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2023, 21:45 IST
Last Updated 19 ಫೆಬ್ರುವರಿ 2023, 21:45 IST
ರಾಮ್‌ ಮಾಧವ್‌
ರಾಮ್‌ ಮಾಧವ್‌   

ಮಂಗಳೂರು: ‘ಬಲಿಷ್ಠವಾದ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮದಿದ್ದರೆ, ಜನರನ್ನು ಉಪವಾಸ ಕೆಡವಿದರೆ, ಅವರನ್ನು ನಿರುದ್ಯೋಗಿಗಳನ್ನಾಗಿಯೇ ಇರಿಸಿದರೆ ಜಗತ್ತು ಭಾರತವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ’ ಎಂದು ಬಿಜೆಪಿ ಮುಖಂಡ ರಾಮ್‌ ಮಾಧವ್‌ ಅಭಿಪ್ರಾಯಪಟ್ಟರು.

ಇಲ್ಲಿ 'ಮಂಗಳೂರು ಸಾಹಿತ್ಯ ಉತ್ಸವ'ದಲ್ಲಿ ‘ಭಾರತದ ಕುರಿತು ಜಗತ್ತಿನ ದೃಷ್ಟಿಕೋನ ಬದಲಾಯಿಸುವ ಅಗತ್ಯ‘ ಗೋಷ್ಠಿಯಲ್ಲಿ ಅವರು ಭಾನುವಾರ ಮಾತನಾಡಿದರು.

‘ಭಾರತವು ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ಶಕ್ತಿ. ಆದರೆ, ಸೇನಾಬಲ, ಆರ್ಥಿಕತೆ ಹಾಗೂ ತಾಂತ್ರಿಕ ಅಭಿವೃದ್ಧಿಯಲ್ಲಿ ಚೀನಾ ನಮಗಿಂತ ಮುಂದಿದೆ. ಚೀನಾ ಸವಾಲನ್ನು ಎದುರಿಸಲು ಭಾರತವು ಈ ಮೂರೂ ಕ್ಷೇತ್ರಗಳಲ್ಲಿ ಸನ್ನದ್ಧಗೊಳ್ಳಬೇಕು. ‌ಆರ್ಥಿಕವಾಗಿ ಹಾಗೂ ತಾಂತ್ರಿಕವಾಗಿಯೂ ಸೂಪರ್‌ ಪವರ್‌ ಅಗಬೇಕು’ ಎಂದರು.

ADVERTISEMENT

‘ಜಗತ್ತಿನ ಶೇ 70ರಷ್ಟು ಹಾಗೂ ಯೂರೋಪಿನ ಶೇ 90ರಷ್ಟು ರಾಷ್ಟ್ರಗಳು ಚೀನಾ ವಿರೋಧಿ ಧೋರಣೆ ಹೊಂದಿದ್ದು, ಅದನ್ನು ಬಳಸಿಕೊಳ್ಳಬೇಕು. ಆಸಿಯಾನ್‌ ದೇಶಗಳೊಡನೆ ಸಂಬಂಧ ವೃದ್ಧಿಸಿಕೊಳ್ಳಬೇಕು’ ಎಂದರು.

‘ಆಡಳಿತ ವಿರೋಧಿ ಶಕ್ತಿಗಳೂ ಎಲ್ಲೆಡೆಯೂ ಇರುತ್ತವೆ. ನ್ಯೂಯಾರ್ಕ್‌ ಟೈಮ್ಸ್‌, ಇದೇ ವಾಷಿಂಗ್ಟನ್‌ ಪೋಸ್ಟ್‌ ಅವರದೇ ಸರ್ಕಾರದ ಬಗ್ಗೆ ಎಷ್ಟೊಂದು ಟೀಕೆ ಮಾಡುತ್ತೇವೆ, ಎಷ್ಟು ಅಣಕ ಮಾಡುತ್ತವೆ ಎಂದೂ ನೋಡಬೇಕು. ವ್ಯವಸ್ಥೆಯ ವಿರೋಧಿ ಮನಸ್ಥಿತಿಯನ್ನೂ ಸ್ವೀಕರಿಸಬೇಕು. ಅದಕ್ಕೆ ತಕ್ಕುದಾಗಿ ಪ್ರತಿಕ್ರಿಯಿಸಿ ಪರಿಸ್ಥಿತಿಯನ್ನು ನಿಭಾಯಿಸಬೇಕು. ನಮ್ಮ ಸರ್ಕಾರದ ಬಗ್ಗೆಯೂ ವ್ಯತಿರಿಕ್ತವಾದ ಅಭಿಪ್ರಾಯಗಳನ್ನೂ ಎದುರಿಸಬೇಕು. ಯಾರೂ ಟೀಕಿಸಬಾರದು ಎಂಬ ಮನಸ್ಥಿತಿಯಿಂದ ಹೊರಬರಬೇಕಾಗಿದೆ’ ಎಂದು ಹೇಳಿದರು.

‘ಪ್ರಧಾನಿ ನರೇಂದ್ರ ಮೋದಿ ಅವರಿಂದಾಗಿ ಜಾಗತಿಕ ಮಟ್ಟದಲ್ಲಿ ಭಾರತದ ಕುರಿತ ದೃಷ್ಟಿಕೋನ ಬದಲಾಗಿದೆ. ಮುಂದಿನ ದಶಕಗಳಲ್ಲಿ ಭಾರತವು ಜಗತ್ತಿನ ಪ್ರಬಲ ಆರ್ಥಿಕಶಕ್ತಿಯಾಗಿ ತ್ವರಿತವಾಗಿ ಹೊರಹೊಮ್ಮಲಿದೆ ಎಂಬುದನ್ನು ಎಲ್ಲರೂ ಒಪ್ಪುತ್ತಾರೆ’ ಎಂದರು.

ಐಟಿವಿ ನೆಟ್‌ವರ್ಕ್ ಡಾಟ್‌ ಕಾಮ್‌ನ ಸಂಪಾದಕೀಯ ನಿರ್ದೇಶಕ ಎಂ.ಡಿ.ನಲಪಾಡ್‌, ‘ಚೀನಾವು ಶೀತಲ ಸಮರದ ಲಾಭ ಪಡೆದು ಬೆಳೆಯಿತು. ಈಗ ಶೀತಲ ಸಮರ 2.0 ನಡೆಯುತ್ತಿದ್ದು, ಭಾರತ ಇದರ ಲಾಭ ಪಡೆಯಬೇಕು’ ಎಂದರು.

‘ಈಗಿನ ಪ್ರಧಾನಿಯ ಆಳ್ವಿಕೆಯಲ್ಲಿ ಭಾರತದ ಪರಿಭಾಷೆ ಬದಲಾಗಿದೆ. ಕಠಿಣ ಗುರಿಗಳನ್ನು ನಿಗದಿಪಡಿಸಲಾಗುತ್ತಿದೆ. ದೇಶವು ಅಭಿವೃದ್ಧಿಯತ್ತ ಮುನ್ನಗ್ಗುತ್ತಿದೆ ಎಂಬ ಭಾವನೆ ಈಗ ಹೆಚ್ಚಾಗಿದೆ. ದೇಶದ ಬಗ್ಗೆ ನಂಬಿಕೆ ಹೆಚ್ಚಿದೆ. ಮೋದಿ ಅವರ ಕಾರಣದಿಂದಾಗಿ 2024ರಲ್ಲೂ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ’ ಎಂದು ಅಭಿಪ್ರಾಯಪಟ್ಟರು.

ಪ್ರಶಾಂತ್‌ ವೈದ್ಯರಾಜ ಅವರು ಸಂವಾದ ನಡೆಸಿಕೊಟ್ಟರು.

****

‘ಮಾತು ಕೇಳದ ಮೊಮ್ಮಕ್ಕಳಿಗೆ ಅಜ್ಜಿ ಗದರುತ್ತಾಳೆ’

‘ಅಜ್ಜಿ ಮೊಮ್ಮಕ್ಕಳನ್ನು ಗದರುತ್ತಾರಲ್ಲ, ಹಾಗೆ ಬಿಬಿಸಿ ಭಾರತದ ಅಜ್ಜಿಯಂತೆ ವರ್ತಿಸುತ್ತಿದೆ. ಹಿಂದಿನ ವಿದೇಶಿ ಪತ್ರಿಕಾ ಪ್ರತಿನಿಧಿಗಳಿಗೆ ದೇಶದ ಸಚಿವರ ಭೇಟಿಗೆ ಸುಲಭವಾಗಿ ಅವಕಾಶ ಸಿಗುತ್ತಿತ್ತು. ಈಗ ಸಚಿವರ ಜಂಟಿ ಕಾರ್ಯದರ್ಶಿಯನ್ನು ಭೇಟಿಯಾಗುವುದಕ್ಕೂ ಸಾಧ್ಯವಾಗುತ್ತಿಲ್ಲ. ಮೊಮ್ಮಕ್ಕಳು ಬೆಳೆದ ಮೇಲೆ ಅಜ್ಜಿಯ ಮಾತು ಕೇಳುವುದಿಲ್ಲ. ಮೊಮ್ಮಕ್ಕಳು ತಮ್ಮ ಮಾತು ಕೇಳದೇ ಇದ್ದಾಗ ಅಜ್ಜಿಗೆ ಸಿಟ್ಟು ಬರುವುದು, ಗದರುವುದು ಸಹಜ’ ಎಂದು ಎಂ.ಡಿ.ನಲಪಾಡ್‌ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.