ADVERTISEMENT

‘ಓದಿಸಿಕೊಂಡು ಹೋಗುವ ಪ್ರಬುದ್ಧ ಲೇಖನ’

ಅರವಿಂದ ಚೊಕ್ಕಾಡಿ ಉಪನ್ಯಾಸಗಳ ಗುಚ್ಛ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2019, 12:10 IST
Last Updated 6 ಸೆಪ್ಟೆಂಬರ್ 2019, 12:10 IST
ಅರವಿಂದ ಚೊಕ್ಕಾಡಿ ಅವರ ಉಪನ್ಯಾಸಗಳ ಗುಚ್ಛ ಬಿಡುಗಡೆ ಸಮಾರಂಭವು ಶುಕ್ರವಾರ ಮಡಂತ್ಯಾರಿನ ಸೇಕ್ರೆಡ್‌ ಹಾರ್ಟ್‌ ಕಾಲೇಜಿನಲ್ಲಿ ನಡೆಯಿತು
ಅರವಿಂದ ಚೊಕ್ಕಾಡಿ ಅವರ ಉಪನ್ಯಾಸಗಳ ಗುಚ್ಛ ಬಿಡುಗಡೆ ಸಮಾರಂಭವು ಶುಕ್ರವಾರ ಮಡಂತ್ಯಾರಿನ ಸೇಕ್ರೆಡ್‌ ಹಾರ್ಟ್‌ ಕಾಲೇಜಿನಲ್ಲಿ ನಡೆಯಿತು   

ಉಜಿರೆ: ‘ಶಿಕ್ಷಕ ಲೇಖಕ ಅರವಿಂದ ಚೊಕ್ಕಾಡಿ ಅವರ ಲೇಖನಗಳು ಸತ್ಯದ ಅನ್ವೇಷಣೆಯ ವೈಜ್ಞಾನಿಕವಾಗಿ ಪ್ರಬುದ್ಧ ಬರಹಗಳಾಗಿದ್ದು, ಕುತೂಹಲದೊಂದಿಗೆ ನಿರಾಳವಾಗಿ ಓದಿಸಿಕೊಂಡು ಹೋಗುತ್ತವೆ’ ಎಂದು ಮುಂಡಾಜೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಮುರಳೀಧರ ಬಿ.ಎನ್. ಹೇಳಿದರು.

ಮಡಂತ್ಯಾರಿನ ಸೇಕ್ರೆಡ್ ಹಾರ್ಟ್‌ ಕಾಲೇಜಿನ ಕನ್ನಡ ಸಂಘದ ಆಶ್ರಯದಲ್ಲಿ ಶುಕ್ರವಾರ ನಡೆದ ‘ಅರವಿಂದ ಚೊಕ್ಕಾಡಿ ಅವರ ಕೃತಿ ಉಪನ್ಯಾಸಗಳ ಗುಚ್ಛ ಬಿಡುಗಡೆ’ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಲೇಖನಗಳಲ್ಲಿ ಸಮಸ್ಯೆಗಳೊಂದಿಗೆ ಅವುಗಳ ಪರಿಹಾರದ ಬಗ್ಗೆಯೂ ಸಲಹೆ ನೀಡುತ್ತಾರೆ. ಅರ್ಥಶಾಸ್ತ್ರದ ನೆಲೆಯಲ್ಲಿ ಬರೆದ ಅವರ ಲೇಖನಗಳು ಪ್ರಸ್ತುತ ಸಮಾಜಕ್ಕೆ ಅನ್ವಯವಾಗಿದ್ದು ನೈಜತೆಯಿಂದ ಕೂಡಿವೆ. ಚಿಂತನ-ಮಂಥನಕ್ಕೆ ಗ್ರಾಸವಾಗಿವೆ. ಸಮಾಜಮುಖಿ ಚಿಂತನೆಯೊಂದಿಗೆ ಬರೆಯುವ ವೈಜ್ಞಾನಿಕ ಸಾಹಿತಿ ಅವರು ಮಾತನಾಡುವಾಗ ತಪ್ಪಾಗಬಹುದು, ಆದರೆ ಬರೆಯುವಾಗ ಎಂದೂ ತಪ್ಪುವುದಿಲ್ಲ’ ಎಂದು ಹೇಳಿದರು.

ADVERTISEMENT

ಸೇಕ್ರೆಡ್ ಹಾರ್ಟ್‌ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಎನ್.ಎಂ. ಜೋಸೆಫ್ ಪುಸ್ತಕದ ಬಗ್ಗೆ ಮಾತನಾಡಿ, ಲೇಖನಗಳು ಸಮಾಜದ ಬಗ್ಗೆಯೆ ಕಾಳಜಿ ಹೊಂದಿ, ಜ್ಞಾನದ ನಿಧಿಯಾಗಿವೆ. ನಮ್ಮ ಧರ್ಮ, ಸಂಸ್ಕೃತಿ, ಪರಂಪರೆ ಸಂರಕ್ಷಣೆಗೆ ಮಾರ್ಗದರ್ಶಿಯಾಗಿವೆ’ ಎಂದು ಅಭಿನಂದಿಸಿದರು.

ಚೊಕ್ಕಾಡಿ ಅವರ ಶಿಷ್ಯರಾದ ನಲ್ಲೂರಿನ ಜಿನೇಶ್ ಜೈನ್ ಮತ್ತು ಸುಜಾತ ಭುವನ್ ಲೇಖಕರಿಗೆ ಅಭಿನಂದನೆ ಸಲ್ಲಿಸಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸಂಚಾಲಕ ಬೇಸಿಲ್ ವಾಸ್ ಮಾತನಾಡಿ, ‘ಪುಸ್ತಕ ಓದುವುದರಿಂದ ಅಪಾರ ಆನಂದ ಮತ್ತು ಅನುಭವ ಸಿಗುತ್ತದೆ’ ಎಂದರು.

ಪ್ರಾಂಶುಪಾಲ ಪ್ರೊ. ಅಲೆಕ್ಸ್ ಐವನ್ ಸ್ವೀಕೇರಾ, ಶ್ರುತಿ, ವೀಣಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.